ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನು ಗುರಿಯಾಗಿಸಿಕೊಂಡು ಅವರ ಫೋಟೋ, ವಿಡಿಯೋಗಳನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ರಾತ್ರಿ ವೇಳೆ ಸ್ನೇಹಿತೆಯೊಂದಿಗೆ ಡಾಬಾಕ್ಕೆ ಊಟಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಆರೋಪಿಗಳು ಹಿಂಬಾಲಿಸಿ, ವಿದ್ಯಾರ್ಥಿ ಹಾಗೂ ಆತನ ಸ್ನೇಹಿತೆಯ ಫೋಟೋ, ವಿಡಿಯೋಗಳನ್ನು ಸೆರೆಹಿಡಿದಿದ್ದರು ಎನ್ನಲಾಗಿದೆ.
ನಂತರ ಹಣ ನೀಡದಿದ್ದರೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ವಿದ್ಯಾರ್ಥಿಯ ಬೈಕ್ ಕೀ ಕಸಿದುಕೊಂಡು ಕಿರುಕುಳ ನೀಡುತ್ತಿದ್ದ ಆರೋಪಿಗಳು ಆರಂಭದಲ್ಲಿ ₹30 ಸಾವಿರ ನಗದು ಪಡೆದುಕೊಂಡಿದ್ದು, ಬಳಿಕ ಮತ್ತಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆನ್‌ಲೈನ್ ಅಥವಾ ಫೋನ್‌ಪೇ ಮೂಲಕ ಹಣ ಪಡೆದರೆ ಪೊಲೀಸರಿಗೆ ಸಿಕ್ಕಿಬೀಳುವ ಸಾಧ್ಯತೆ ಇರುವುದರಿಂದ ಆರೋಪಿಗಳು ನಗದು ರೂಪದಲ್ಲೇ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ, ಅದರ ಮೂಲಕ ವಿದ್ಯಾರ್ಥಿಗಳಿಂದ ನಗದು ಹಣ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಾಗೃತಿ ನಡುವೆಯೂ ತಗ್ಗದ ಬಾಲ್ಯವಿವಾಹ: ಮೂರು ವರ್ಷಗಳಲ್ಲಿ 285 ದೂರು, 19 ಪ್ರಕರಣ ದಾಖಲು
ರಾತ್ರಿ ವೇಳೆ ವಾಕಿಂಗ್‌ಗೆ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಜೋಡಿಗಳನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪಿಗಳ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





