ಉಪಹಾರ ಸೇವಿಸಿದ ನಂತರ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ವಸತಿ ನಿಲಯದಲ್ಲಿ ಅಸ್ವಚ್ಛತೆ, ಕಳಪೆ ಗುಣಮಟ್ಟದ ತರಕಾರಿ ಬಳಕೆ ಹಾಗೂ ಗುಣಮಟ್ಟವಿಲ್ಲದ ಆಹಾರ ಪೂರೈಕೆಯಿಂದ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣ ಮಾನ್ವಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಹಲವು ಬಾರಿ ದೂರುಗಳು ಕೇಳಿಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದೇ ಇಂತಹ ಘಟನೆಗೆ ಕಾರಣವಾಗಿದೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವಸತಿ ನಿಲಯದ ಪ್ರಾಚಾರ್ಯ ವೆಂಕಟೇಶ ನಾಯಕ, ಅಡುಗೆ ಸಹಾಯಕರು ಪ್ರತಿಭಟನೆ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಬದಲಿ ಸಿಬ್ಬಂದಿಯಿಂದ ಅಡುಗೆ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಹಾರ ನೀಡುವ ಸಂದರ್ಭದಲ್ಲಿ ಅದರ ಗುಣಮಟ್ಟ, ಸ್ವಚ್ಛತೆ ಹಾಗೂ ಸುರಕ್ಷತೆಯ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯವಾಗಿದ್ದರೆ ಅದಕ್ಕೆ ಸಂಬಂಧಪಟ್ಟವರು ಹೊಣೆಗಾರರಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೊಲೆ ಪ್ರಯತ್ನ ಪ್ರಕರಣ: ಆರೋಪಿಗೆ 5 ವರ್ಷ ಜೈಲು, ₹17 ಸಾವಿರ ದಂಡ
ವಿದ್ಯಾರ್ಥಿಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವಂತಹ ಯಾವುದೇ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ವಸತಿ ನಿಲಯದಲ್ಲಿ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ, ಬಳಸುವ ತರಕಾರಿ ಮತ್ತು ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಆಹಾರ ತಯಾರಿಕೆಯ ವ್ಯವಸ್ಥೆ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.





