ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಾಮಾನ್ಯ ವರ್ಗಾವಣೆ ಆದೇಶವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು ಎಂದು ಎಸ್‌ಎಫ್‌ಐ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಜಾಲಹಳ್ಳಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದರು.
“ಜಿಲ್ಲೆಯ 1,625 ಮಂಜೂರು ಹುದ್ದೆಗಳಿದ್ದು, ಪ್ರಸ್ತುತ 714 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ವರ್ಗಾವಣೆ ಪ್ರತಿಕ್ರಿಯೆಯಲ್ಲಿ 373 ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡಿದ್ದು, 341 ಮಂದಿ ಶಿಕ್ಷಕರು ಮಾತ್ರ ಇದೀಗ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ 48,150 ವಿದ್ಯಾರ್ಥಿಗಳು, ಶಿಕ್ಷಣ ಪಡೆಯುತ್ತಿದ್ದಾರೆ” ಎಂದು ಆಗ್ರಹಿಸಿದರು.
“ಒಂದು ವೇಳೆ ಸಾಮಾನ್ಯ ವರ್ಗಾವಣೆಯಲ್ಲಿ ಶಿಕ್ಷಕರು ಕರ್ತವ್ಯದಿಂದ ಬಿಡುಗಡೆಗೊಂಡರೆ ಮಕ್ಕಳ ಕಲಿಕಾ ಗುಣಮಟ್ಟ ತೀವ್ರ ಕುಂಠಿತಗೊಳ್ಳುತ್ತದೆ. ಮಕ್ಕಳು ಶಾಲೆಗೆ ಹೋಗದೆ ದುಡಿಯುವುದಕ್ಕೆ ಬೆಂಗಳೂರು ಪೂನಾದಂತಹ ನಗರ ಪ್ರದೇಶಗಳಿಗೆ ತಂದೆ ತಾಯಿ ಜೊತೆ ಹೋಗುತ್ತಾರೆ. ತಾಲೂಕಿನಲ್ಲಿ ಬಾಲಕಾರ್ಮಿಕತೆ ಹೆಚ್ಚಾಗುತ್ತಿದೆ. ಆದಕಾರಣ ಖಾಯಂ ಶಿಕ್ಷಕರು ನೇಮಕವಾಗುವವರೆಗೂ ಈ ಸಾಮಾನ್ಯ ವರ್ಗಾವಣೆ 2023ರ ಶಿಕ್ಷಕರ ಬಿಡುಗಡೆಯನ್ನು ತಡೆಹಿಡಿಯಬೇಕು” ಎಂದು ಒತ್ತಾಯಿಸಿದರು.
“ತಾಲೂಕಿನ 86 ಶಾಲೆಗಳಲ್ಲಿ ಶಿಕ್ಷಕ ಸಂಖ್ಯೆ ಶೂನ್ಯವಿದೆ. ಆ ಶಾಲೆಗಳ ಸ್ಥಿತಿ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ಎರವಲು ನೀಡಿದರೆ ಸರಿಯಾಗಿ ನಡೆಲು ಸಾಧ್ಯವಾಗುವುದಿಲ್ಲ. ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ನಡೆಸುವುದು ಎಷ್ಟು ಸರಿ” ಎಂದು ಹೋರಾಟಗಾರರು ಪ್ರಶ್ನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ, ಸಿಪಿಐ ಗುಂಡುರಾವ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಅದೇಶದ ಪ್ರಕಾರ ವರ್ಗಾವಣೆಯಾಗಿದೆ. ಅದರೆ, ಮುಂದಿನ ಅದೇಶದವರೆಗೆ ಯಾವುದೇ ಶಿಕ್ಷಕರನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಸಹಿಷ್ಣುತೆ ದೇಶವನ್ನು ಆಳುತ್ತಿದೆ: ಶೈಲಜಾ ಟೀಚರ್
ಹೋರಾಟಗಾರರು ಡಿಡಿಪಿಐ ಅವರು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದು ಹೋರಾಟ ಮುಂದುವರಿಸಿದ್ದಾರೆ.
ಒಂದು ವೇಳೆ ನೀವು ಅವರನ್ನು ಬಿಡುಗಡೆಗೊಳಿಸಿದರೆ ತೀವ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಶಬ್ಬೀರ್ ಜಾಲಹಳ್ಳಿ, ಎಸ್‌ಎಫ್‌ಐ ಮುಖಂಡ ಮಹಾಲಿಂಗ ದೊಡ್ಡಮನಿ, ನರಸಣ್ಣ ನಾಯಕ, ರಮೇಶ್ ವೀರಾಪುರ, ಭೀಮಣ್ಣ, ಬಸವರಾಜ್ ಗೋಪಳಪುರ, ರಾಜಶೇಖರ್ ಸೇರಿದಂತೆ ಇತರರು ಇದ್ದರು.