ಶೋಷಿತ ಜನರ ಧ್ವನಿಯಾಗಿ ಜೀವನಪೂರ್ತಿ ಹೋರಾಟ ನಡೆಸಿದ ಪ್ರಜಾಗಾಯಕ ಗದ್ದರ್ ಅಗಲಿಕೆಯಿಂದ ದೊಡ್ಡ ಧ್ವನಿಯೊಂದು ನಿಂತು ಹೋದಂತಾಗಿದೆ ಎಂದು ಹೋರಾಟಗಾರ ಅಂಬಣ್ಣ ಆರೋಲಿ ಹೇಳಿದರು.
ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ಗದ್ದರ್ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. “ಗದ್ದರ್ ಅವರು ಬ್ಯಾಂಕ್ ಹುದ್ದೆ ಬಿಟ್ಟು, ಕುಟುಂಬವನ್ನು ತೊರೆದು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು” ಎಂದು ಸ್ಮರಿಸಿದರು.
“ಅವರು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗದೇ ಇಡೀ ದೇಶದ ಆದಿವಾಸಿಗಳು, ದಲಿತರು, ಶೋಷಿತರ ಧ್ವನಿಯಾಗಿ ನಡೆಸಿದ ಹೋರಾಟ ಸ್ಪೂರ್ತಿಯಾಗಿದ್ದಾರೆ. ಅವರು ಗೆಜ್ಜೆ ಕಟ್ಟಿ ಹಾಡಿದ ಕ್ರಾಂತಿಕಾರಿ ಹಾಡುಗಳು ಅದೆಷ್ಟೋ ಯುವಕ ಯುವತಿಯರಿಗೆ ಸ್ಪೂರ್ತಿ ನೀಡಿದೆ” ಎಂದರು.
ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ನರಸಿಂಹಮೂರ್ತಿ, ಜನಾರ್ಧನ ಹಳ್ಳಿಬೆಂಚಿ, ಕೆ.ಪಿ.ಅನಿಲ್ ಕುಮಾರ, ಬಸವರಾಜ ಹೊಸೂರು ಸೇರಿದಂತೆ ಅನೇಕ ಸಂಘಟನೆಗಳ ಪ್ರತಿನಿಧಿಗಳು, ಮಹಿಳೆಯರು ಭಾಗವಹಿಸಿದ್ದರು.