ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಮೂರು ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಡಿ.ಕರಡಿಗುಡ್ಡ ಗ್ರಾಮಸ್ಥರು, ಭರ್ಚಿ ಹಾಗೂ ದೊಣ್ಣೆಗಳಿಂದ ಹೊಡೆದು ಭಾನುವಾರ ಕೊಂದಿದ್ದಾರೆ.
ಕಾಮದಾಳ ಗ್ರಾಮದ ಹೊರವಲಯದಲ್ಲಿ ಬಾಲಕನೊಬ್ಬ ಬಹಿರ್ದೆಸೆಗೆ ಹೋದಾಗ ಅಲ್ಲಿ ಚಿರತೆ ಇದ್ದುದನ್ನು ಕಂಡು ಮನೆಯವರಿಗೆ ತಿಳಿಸಿದ್ದಾನೆ. ಬಳಿಕ ಚಿರತೆ ಓಡಿಸಲು ಹೋದ ಮೂವರ ಮೇಲೆ ದಾಳಿ ಮಾಡಿತು. ಗಾಯಗೊಂಡ ಮಲ್ಲಣ್ಣ, ರಮೇಶ್ ಹಾಗೂ ರಂಗಣ್ಣ ಎಂಬುವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಡಿ.ಕರಡಿಗುಡ್ಡ ಗ್ರಾಮಸ್ಥರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಬಲೆ ಬೀಸಿ ಅಥವಾ ಅರಿವಳಿಕೆ ನೀಡಿ ಹಿಡಿದು ಚಿರತೆಯನ್ನು ಬೇರೆ ಕಡೆಗೆ ಸಾಗಿಸುವಂತೆ ಮನವಿ ಮಾಡಿದ್ದರು.
ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಮಧ್ಯಾಹ್ನದ ವೇಳೆ ಚಿರತೆ ಇನ್ನೊಬ್ಬರ ಮೇಲೆ ಎರಗಿ ಗಾಯಗೊಳಿಸಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಂಡೆಗಳ ಮಧ್ಯೆ ಕುಳಿತಿದ್ದ ಚಿರತೆ ಮೇಲೆ ಭರ್ಚಿಯಿಂದ ಚುಚ್ಚಿ, ದೊಣ್ಣೆಗಳಿಂದ ಹೊಡೆದು ಕೊಂದು ಹಾಕಿದ್ದಾರೆ.
ಎರಡು ತಿಂಗಳ ಹಿಂದೆ ವಾಚನಾಯಕ ತಾಂಡದಲ್ಲಿ ಚಿರತೆ ಆಕಳು ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ್ಕೆ ಒಳಗಾಗಿದ್ದರು.