ಕಳೆದ 8 ದಿನಗಳ ಹಿಂದಷ್ಟೇ ಧಿಡೀರನೆ ಸುರಿದು ಜನರಲ್ಲಿ ಉಲ್ಲಾಸ ಮೂಡಿಸಿದ್ದ ಮಳೆ ಗುರುವಾರ ಸಂಜೆ ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮ, ಹೆಬ್ಬಾಳ್ ಬಡಾವಣೆ, ಹುಣಸೇಕಟ್ಟೆ, ಮಂಡಲೂರು, ಹಾಲುವರ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಮೂಲಕ ಸ್ಥಳೀಯರಲ್ಲಿ ಖುಷಿ ತಂದಿದೆ.
ಹಾಲುವರ್ತಿ, ಮಂಡಲೂರು, ಹೆಬ್ಬಾಳ್, ಹುಣಸೇಕಟ್ಟೆ ಸುತ್ತಮುತ್ತ ಗುರುವಾರ ಸಂಜೆ ಸುರಿದ ಸಾಧಾರಣ ಮಳೆಯಿಂದಾಗಿ ಸುಮಾರು ಹೊತ್ತು ಭೂಮಿ ನೆನೆಯುವಂತಾಯಿತು.
ಧಿಡೀರ್ ಸುರಿದ ಮಳೆಯಿಂದಾಗಿ ಮನೆಗಳಲ್ಲಿ ಏಕಾಏಕಿ ಮಳೆ ನೀರು ಸೋರುತ್ತಿದ್ದುದರಿಂದ ಹೆಂಚುಗಳನ್ನು ಸರಿಪಡಿಸಲು ಮನೆಗಳ ಪುರುಷರು, ಮಕ್ಕಳು ಏಣಿ ಹಾಕಿಕೊಂಡು, ಹೆಂಚು ಸರಿಪಡಿಸಲು ಮುಂದಾಗಿದ್ದರು. ಸಂಜೆ ದಾವಣಗೆರೆ ನಗರದಲಿ ತಂಪು ಗಾಳಿ ಬೀಸಿ, ಮಳೆ ಮೋಡ ಆವರಿಸಿದ್ದರೂ ಮಳೆಯಾಗಿಲ್ಲ.
ಹವಾಮಾನ ಇಲಾಖೆ ಕೆಲ ದಿನಗಳ ಹಿಂದೆ ಏಪ್ರಿಲ್ 8ರಿಂದ ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಸೂಚನೆ ನೀಡಿದ್ದರೂ, ಯಾವುದೇ ಮುನ್ಸೂಚನೆ ಕಾಣದೆ ಬಿಸಿಲಿನ ಬೇಗೆಗೆ ಜನ, ರೈತರು ಕಂಗೆಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚುನಾವಣೆಯಲ್ಲಿ ಪಂಚಮಸಾಲಿ ಸಮಾಜ ತಟಸ್ಥವಾಗಿರಲು ಸ್ವಾಭಿಮಾನ ಯುವಪಡೆ ಕರೆ
ದಾವಣಗೆರೆ ನಗರದ ಹಲವೆಡೆ ಹಾಗೂ ಜಿಲ್ಲೆಯ ಕೊಡಗನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆಯೂ ತುಂತುರು ಮಳೆ ಸ್ಪರ್ಶವಾಗಿದ್ದು, ಜನ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
