ಕೇಂದ್ರ ಸರಕಾರ ರಾಜ್ಯದ ಬ್ಯಾಂಕುಗಳಿಗೆ ಕೊಡುತ್ತಿದ್ದ ಶೇ.58ರಷ್ಟು ಕೃಷಿಸಾಲವನ್ನು ಕಡಿತಗೊಳಿಸಿರುವ ಹಿನ್ನೆಲೆ ರಾಜ್ಯದ ರೈತರು ಸಾಲ ವಂಚಿತರಾಗುತ್ತಿದ್ದಾರೆ. ಇದರಿಂದ ಕಿರುಸಾಲಗಳ ಮೊರೆ ಹೋಗುತ್ತಿರುವ ರೈತಾಪಿ ವರ್ಗ ಸಾಲದ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ಹಾದಿ ತುಳಿಯುವಂತ ದುಸ್ಥಿತಿ ಎದುರಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಮೀ ನಾರಾಯಣ ರೆಡ್ಡಿ ಆತಂಕಗೊಂಡರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.58ರಷ್ಟು ಕೃಷಿ ಸಾಲವನ್ನು ಕೇಂದ್ರ ಕಡಿತಗೊಳಿಸಿದ್ದು, ಉಳಿದ ಶೇ.42ರಷ್ಟು ಸಾಲವನ್ನು ಹಣವಂತರ ಪಾಲಾಗುತ್ತಿದೆ. ನಬಾರ್ಡ್ ಇಂದ ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ. ಹಣ ಬಂದಿತ್ತು. ಈ ವರ್ಷ ಕೇವಲ 2,340 ಕೋಟಿ ರೂ. ಬಂದಿದೆ. ಇದರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರಿ ಸಂಸ್ಥೆಗಳು ನೀಡುತ್ತಿದ್ದ ಅಲ್ಪಾವಧಿ ಸಾಲಕ್ಕೆ ಕುತ್ತು ಬಂದಿದೆ. ರಿಯಾಯಿತಿ ದರದಲ್ಲಿ 15 ಲಕ್ಷದವರೆಗೆ ದೊರೆಯುತ್ತಿದ್ದ ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲಕ್ಕೂ ಹೊಡೆತ ಬೀಳುತ್ತಿದೆ ಎಂದು ಹೇಳಿದರು.
ಕಳೆದ 8 ವರ್ಷಗಳ ಹಿಂದೆಯೇ ವೀರೇಂದ್ರ ಹೆಗ್ಗಡೆಯವರ ಧರ್ಮಸ್ಥಳ ಸಂಘ ಸಂಸ್ಥೆಗಳ ಸಾಲವನ್ನು ಪ್ರಗತಿಪರ ಸಂಘಟನೆಗಳು ವಿರೋಧಿಸಿದ್ದವು. ಆದರೆ, ಪ್ರಸ್ತುತ ಎಲ್ಲೆಡೆ ವ್ಯಾಪಿಸಿದ್ದು, ಶೇ.18-20ರಷ್ಟು ಬಡ್ಡಿ ಪಡೆಯುತ್ತಿದ್ದಾರೆ. ಹೆಣ್ಣುಮಕ್ಕಳು ವಾರಕ್ಕೊಮ್ಮೆ ಹಣ ಪಾವತಿಸಬೇಕು. ಇದೊಂದು ದೊಡ್ಡ ದಂಧೆಯಾಗಿದೆ. ದೇವರ ಹೆಸರಲ್ಲಿ ದುಡ್ಡಿನ ದಂಧೆಗೆ ಮುಂದಾಗಿದ್ದಾರೆ. ಇದೆಲ್ಲದರ ಪ್ರತಿಫಲ ಇಂದು ಹೆಣ್ಣುಮಕ್ಕಳಿಗೆ ಗೊತ್ತಾಗುತ್ತಿದೆ ಎಂದು ಗುಡುಗಿದರು.
ಶೂನ್ಯ ಬಡ್ಡಿದರದಲ್ಲಿ ಸುಮಾರು 30 ಲಕ್ಷ ರೈತರು ಪಡೆಯುತ್ತಿದ್ದ ಸಾಲ ನಿಂತು ಹೋಗುತ್ತಿದೆ. ರೈತರು ಬಡ್ಡಿ ತೆತ್ತು ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಬೇಕು, ಇಲ್ಲವೆ ಖಾಸಗಿ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಳ್ಳಬೇಕು. ಈ ಸುಳಿಗೆ ರೈತ ಸಮುದಾಯ ಬಲಿಯಾದಲ್ಲಿ ಸ್ಥಿರಾಸ್ತಿಗಳು ಹರಾಜಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಮತ್ತು ಮೈಕ್ರೊ ಹಣಕಾಸು ಸಂಸ್ಥೆಗಳ ಕಿರುಕುಳ ತಡೆಗೆ ಆಗ್ರಹಿಸಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಎದುರು ಜ.29ರಂದು ಬೆಳಿಗ್ಗೆ 11ಕ್ಕೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೋಟೆ ಚನ್ನೇಗೌಡ ಮಾತನಾಡಿ, ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಕ್ರೊ ಫೈನಾನ್ಸ್‌ಗಳ ಕಿರುಕುಳ ತಾಳದೆ ಊರು ತೊರೆಯುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸರಕಾರಿ ನೌಕರರು ಆಸ್ತಿ ಘೋಷಣೆ ಮಾಡಿಕೊಳ್ಳದಿದ್ದರೆ ಉಗ್ರ ಹೋರಾಟ; ಕೆ.ಆರ್.ಎಸ್ ಜಿಲ್ಲಾಧ್ಯಕ್ಷ ಶಿವ ರೆಡ್ಡಿ ಎಚ್ಚರಿಕೆ
ಈ ಎಲ್ಲ ಸಮಸ್ಯೆಗಳ ವಿರುದ್ಧ ರೈತ ಸಂಘವು ಹೋರಾಟ ರೂಪಿಸಿದೆ ಎಂದು ಹೇಳಿದರು.
ಮಾರುತಿ, ಪಿ.ಕೆ.ಅರುಣ್, ನಾರಾಯಣಸ್ವಾಮಿ, ಈಶ್ವರರೆಡ್ಡಿ, ಶ್ರೀನಿವಾಸ್, ಎಸ್.ಎಂ.ರವಿಪ್ರಕಾಶ್, ವೆಂಕಟೇಶಪ್ಪ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
