ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಹೊರಡಿಸಿದ್ದು, ಅದು ಕುಲಾಂತರಿ ಆಹಾರವನ್ನು ಮಾರುಕಟ್ಟೆಗೆ ಬಿಡುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರಕ್ಕೆ ದಾರಿಯನ್ನು ಸುಳಿವು ಮಾಡಿಕೊಟ್ಟಿದೆ. ಈ ವ್ಯವಸ್ಥೆ ನಮ್ಮ ಒಕ್ಕೂಟದ ಹವಾಮಾನಕ್ಕೆ ಒಗ್ಗುವ, ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣದ ಸಾವಯವ ಕೃಷಿ ಪದ್ಧತಿಗೆ ವಿರುದ್ಧವಾಗಿದೆ. ಇದನ್ನು ನಾವು ಒಗ್ಗಟ್ಟಾಗಿ ತಡೆಯಲೇ ಬೇಕು ಎಂದು ಸಾವಯವ ಕೃಷಿಕರ ಸಂಘದ ಮಳವಳ್ಳಿ ಅಧ್ಯಕ್ಷ ಎಂ ಎನ್ ಮಹೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಅವರು ಕುಲಾಂತರಿ ಕಾನೂನುಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಲು ಸೆ. 26ರ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ತುಮಕೂರು ಜಿಲ್ಲೆ ದೊಡ್ಡ ಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ನಾಲ್ಕು ದಿನಗಳ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನಮ್ಮ ತಳಿಗಳು, ನಮ್ಮ ಪದ್ಧತಿ ನಾಶವಾಗುವ ಪರಿಸ್ಥಿತಿ ತಲೆ ದೊರಿದೆ. ಕುಲಾಂತರಿ ತಳಿಯ ಆಹಾರಗಳನ್ನು ತಿರಸ್ಕರಿಸಿ ಹೋರಾಟ ಮಾಡುವ ಸಲುವಾಗಿ ಮಂಡ್ಯ ಜಿಲ್ಲೆಯ ವತಿಯಿಂದ ಇದೇ ತಿಂಗಳ 29ನೇ ತಾರೀಕು ಭಾನುವಾರ ಸತ್ಯಾಗ್ರಹ ಆಯೋಜಿಸಲಾಗಿದೆ. ಈ ಒಂದು ಕಾನೂನು ರೈತರಿಗೆ ಮರಣ ಶಾಸನವಾಗಿರುವುದರಿಂದ ತೀವ್ರ ಪ್ರತಿಭಟನೆ ಮಾಡುವ ಮೂಲಕ ಈ ಕಾನೂನನ್ನು ರದ್ದುಗೊಳಿಸುವ ಮಹತ್ಕಾರ್ಯಕ್ಕೆ ರೈತರು ಕೈಜೋಡಿಸುವಂತೆ ಮನವಿ ಮಾಡಿದರು.
ಮಳವಳ್ಳಿ ತಾಲೂಕು ಪಂಚಾಯಿತಿ ಆವರಣದಿಂದ ಮೆರವಣಿಗೆ ಮೂಲಕ ಹೊರಟು ಅನಂತರಾಮ ಸುತ್ತಿನ ಬಳಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಪೂರ್ಣ ಸಾವಯವ ಕೃಷಿಕ ಮುಖಂಡರುಗಳಾದ ನಂಜೇಗೌಡ್ರು ಬಿ ಎಂ ಭಾರತಿ ಕಾಲೇಜು ಕಾರ್ಯದರ್ಶಿ, ಚಿಕ್ಕಣ್ಣ ಕಾರ್ಯದರ್ಶಿ, ಗಜೇಂದ್ರ ಖಜಾಂಚಿ, ಡಾ. ಕಪನಿಗೌಡ್ರು, ಶಿವಕುಮಾರ್ ವಡ್ಡರಹಳ್ಳಿ, ನಾಗರಾಜ್ ಹಂಚಿಪುರ, ನಿತೀಶ್ ದುಗ್ಗನಹಳ್ಳಿ , ಕೇಶವಮೂರ್ತಿ, ಶಿವಕುಮಾರ್ ಜೆಸಿಬಿ, ಬೂದ್ನೂರ್ ಬೊಮ್ಮಯ್ಯ ಮಂಡ್ಯ, ಕುಮಾರ್ ನಂದೀಪುರ, ಅಶೋಕ್ ಕ್ಯಾತ್ನಳ್ಳಿ, ದಯಾಶಂಕರ್ ಪುರಸಭೆ ಮಾಜಿ ಅಧ್ಯಕ್ಷರು ರೈತ ಮಹಿಳೆಯರಾದ ಶ್ರೀಮತಿ ಶಾಂತ ಕೃಷ್ಣ ಮೈಸೂರು, ಶ್ರೀಮತಿ ತನುಜ, ಶ್ರೀಮತಿ ಸಿಂಧು ಸಂಘದ ಸದಸ್ಯರುಗಳು ಮತ್ತು ರೈತ ಮುಖಂಡರುಗಳು ಪಾಲ್ಗೊಂಡಿದ್ದರು.
