ಬೀದರ್ ಜಿಲ್ಲೆಯ ಸಾವಿರಾರು ರೈತರಿಗೆ ಜೀವನಾಡಿಯಾಗಿದ್ದ ಬಿಎಸ್‌ಎಸ್‌ಕೆ ಕಾರ್ಖಾನೆ ಜಿಲ್ಲೆಯ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸುಮಾರು ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದು, ಸರ್ಕಾರವೇ ಹಣ ಕೊಟ್ಟು, ಕಾರ್ಖಾನೆ ಪುನಶ್ಚೇತನಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪಾ ಆಣದೂರೆ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
‘ಜಿಲ್ಲೆಯ ಯಾವ ರಾಜಕೀಯ ವ್ಯಕ್ತಿಯು ಕಾರ್ಖಾನೆ ಪುನಶ್ಚೇತನದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇತ್ತೀಚೆಗೆ ಡಿಸಿಸಿ ಬ್ಯಾಂಕಿನವರು ಕಾರ್ಖಾನೆಯ ಸಾಲಕ್ಕಾಗಿ, ಕಾರ್ಖಾನೆ ಹಾಗೂ ಅದರ ಎಲ್ಲಾ ಆಸ್ತಿ ಜಪ್ತಿ ಮಾಡಿದ್ದು, ಬೀದರ ಜಿಲ್ಲೆಯ ರೈತರಿಗೆ ಮಾಡಿರುವ ಅವಮಾನ ಹಾಗೂ ದುಃಖದ ಸಂಗತಿಯಾಗಿದೆ’ ಎಂದರು.
‘ರಾಜ್ಯದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಯಲ್ಲಿ ಸಿಲುಕಿ ಮುಚ್ಚಿದಾಗ ರಾಜ್ಯ ಸರ್ಕಾರವೇ ಹಣವನ್ನು ಕೊಟ್ಟು, ಕಾರ್ಖಾನೆಗಳು ಪುನಶ್ಚೇತನ ಮಾಡಿರುವ ಉದಾಹರಣೆಗಳು ಬಹಳಷ್ಟಿವೆ. ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಸರ್ಕಾರವೇ ಪುನಶ್ಚೇತನಗೊಳಿಸಿ ತಾವುಗಳು ರೈತಪರ ಇದ್ದೀರಿ ಎಂದು ತೋರಿಸಿಕೊಡಬೇಕು.ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರ.ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಸೇರಿದಂತೆ ಪ್ರಮುಖರಾದ ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ಪ್ರಕಾಶ ಬಾವಗೆ, ನಾಗಯ್ಯ ಸ್ವಾಮಿ, ಸುಭಾಷ ರಗಟೆ, ರಾಮರಾವ ಕೇರೂರೆ, ವಿಶ್ವನಾಥ ಧರಣೆ, ರೇವಣಸಿದಪ್ಪಾ ಯರಬಾಗ, ಝರಣಪ್ಪ ದೇಶಮುಖ, ಮಲ್ಲಿಕಾರ್ಜುನ ಚಕ್ಕಿ, ಬಸಪ್ಪಾ ಆಲೂರೆ ಉಪಸ್ಥಿತರಿದ್ದರು.