ರಾಜ್ಯ ಸರ್ಕಾರ ಬೀದರ ಜಿಲ್ಲೆಯನ್ನು ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿದರೂ ರೈತರಿಗೆ ಬರ ಪರಿಹಾರ
ಕೊಡುವಲ್ಲಿ ತಾರತಮ್ಯ ಎಸಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತ್ರತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಸಲ್ಲಿಸಿದರು.
“ಸತತವಾಗಿ ರಾಜ್ಯದ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕುತ್ತಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಷಯ. ಆದರೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದರೂ ಎಲ್ಲ ರೈತರಿಗೆ ಪರಿಹಾರ ಹಣ ಜಮೆ ಮಾಡದೇ ತಾರತಮ್ಯ ಮಾಡಲಾಗುತ್ತಿದೆ. ಇದು ಬರಗಾಲದಿಂದ ತತ್ತರಿಸಿದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷಗಿಂತ ಶೇ.70% ರಷ್ಟು ಬೆಲೆ ಏರಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಸರ್ಕಾರ ಎಲ್ಲ ರೈತರಿಗೂ ಶೇ.75% ರಿಯಾಯಿತಿ ದರದಲ್ಲಿ ಬೀಜ ವಿತರಿಸಲು ಮುಂದಾಗಬೇಕು” ಎಂದು ಆಗ್ರಹಿಸಿದರು.
“ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ 15 ದಿನಗಳ ಒಳಗಾಗಿ ಹಣ ಪಾವತಿಸುವ ನಿಯಮವಿದೆ. ಅದನ್ನು ಮೀರಿದರೆ ರೈತರಿಗೆ ಸರ್ಕಾರದ ನಿಯಮದಂತೆ 14% ಬಡ್ಡಿ ಸಹಿತ ಹಣವನ್ನು ಪಾವತಿಸಬೇಕು. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರೈತರಿಗೆ ನಿಗದಿತ ಸಮಯಕ್ಕೆ ಹಣ ಪಾವತಿಸದೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯ ಎಲ್ಲ ಶಾಸಕ, ಸಚಿವರು ಜಿಲ್ಲೆಯ ರೈತರ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕಬ್ಬಿನ ಬಾಕಿ ಉಳಿದ ಹಣ ಹಾಗೂ ಬರ ಪರಿಹಾರ, ಬೆಳೆ ವಿಮೆ ಹಣ ಕೊಡಿಸಲು ಮುತುರ್ಜಿ ವಹಿಸಬೇಕು” ಎಂದರು.
“ಸರ್ಕಾರಿ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೆ ಸಾಲ ಮರುಪಾವತಿ ನೋಟಿಸ್ ನೀಡುವುದು. ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ರೈತರ ಮನೆಗೆ ಬಂದು ಕಿರುಕುಳ ಕೊಡುವುದು ತಪ್ಪಿಸಬೇಕು. ಕಾಡು ಪ್ರಾಣಿಗಳಿಂದ ಹಾಳಾದ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು. ಬರ ಪರಿಹಾರಕ್ಕಾಗಿ ರೈತರು ಪ್ರತಿನಿತ್ಯ ತಹಸೀಲ್ ಹಾಗೂ ಕೃಷಿ ಕಚೇರಿಗಳಿಗೆ ಅಲೆದಾಟ ನಡೆಸುವುದು ತಪ್ಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಹಾರದ ಸಂದಾಯವಾಗದ ರೈತರನ್ನು ಗುರುತಿಸಿ ಪರಿಹಾರ ಧನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದ ನೀತಿಯಂತೆ ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೊರಾಟ ರೂಪಿಸಲಾಗುವುದು. ಅದಕ್ಕೆ ಸರಕಾರ ಹಾಗೂ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಆದೇಶ ಪಾಲಿಸದ ಕಲ್ಯಾಣ ಮಂಡಳಿ; ಹೈಕೋರ್ಟ್ ಅಸಮಾಧಾನ
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಖಾಸೀಂ ಅಲಿ, ವಿಠ್ಠಲರಾವ ಮೇತ್ರೆ, ನಾಗೇಂದ್ರಪ್ಪ ತರನಳ್ಳಿ, ವಿಠ್ಠಲ ರೆಡ್ಡಿ , ಬಸವರಾಜ ಅಷ್ಟೂರ್ , ರುದ್ರಯ್ಯಾ ಸ್ವಾಮಿ, ಸಂತೋಷ ಗುದುಗೆ , ಗುಂಡೆರಾವ್ ಕುಲಕರ್ಣಿ, ಮುಖಮೊದ್ದೀನ್ ಪಟೆಲ್, ಕರಬಸಪ್ಪ ಹುಡುಗಿ, ಭವರಾವ ನೆಲವಾಡೆ , ಪರಮೇಶ್ವರ ಗೌರ, ಶಿವರಾಜ ಜಲ್ದೆ , ವಿನೋದ ಚಿಂತಾಮಣಿ ಸೇರಿದಂತೆ ಇತತರಿದ್ದರು.