ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಬೆಂಗಳೂರಿನಲ್ಲಿ ಇಂದು ಸುರಿಯುತ್ತಿರುವ ಮಳೆಯ ನಡುವೆಯೇ ಎಲ್ಲ 13 ಮಂದಿ ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ʼಕಾನೂನು ಪ್ರಕ್ರಿಯೆಯಂತೆ, ಬಂಧನದ ನಂತರ ನಿಮ್ಮ ಮನೆಯವರಿಗೆ ಮಾಹಿತಿ ನೀಡಲಾಯಿತೇʼ ಎಂದು ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಮಾಹಿತಿ ನೀಡಲಾಗಿದೆ ಎಂದು ಆರೋಪಿಗಳು ಉತ್ತರ ನೀಡಿದರು. ಅದೇ ರೀತಿ ಪೊಲೀಸರು ನಿಮಗೆ ಏನಾದರೂ ದೈಹಿಕ ಹಿಂಸೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದಾಗ ಆರೋಪಿಗಳು ʻಇಲ್ಲʼ ಎಂದು ಉತ್ತರ ನೀಡಿದ್ದಾರೆ.
“ಕೊಲೆಯಾಗಿರುವುದು ಗಂಭೀರ ಪ್ರಕರಣ. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಇನ್ನಷ್ಟು ವಿಚಾರಣೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ವಿನಂತಿಸಿದರು. ನಮ್ಮ ಕಕ್ಷಿದಾರರ ತೇಜೋವಧೆಗಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೊಲೀಸರು ಕೇಸ್ ಡೈರಿಯನ್ನೂ ನೀಡಿಲ್ಲ. 14 ದಿನಗಳ ಕಸ್ಟಡಿ ನೀಡುವ ಅಗತ್ಯವಿಲ್ಲ, ಕೊಲೆಯಲ್ಲಿ ನಮ್ಮ ಕಕ್ಷಿದಾರರ ಪಾತ್ರವಿಲ್ಲ, ಇದು ರಾಜಕೀಯ ದುರುದ್ದೇಶದ ಪ್ರಕರಣ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ(ಜೆಸಿ) ನೀಡಿ” ಎಂದು ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮತ್ತು ಅನಿಲ್ ವಿನಂತಿಸಿದರು.
“ಪ್ರಕರಣ ಅತ್ಯಂತ ಸೂಕ್ಷ್ಮವಾಗಿದೆ. ಕೊಲೆಯ ಸಾಕ್ಷ್ಯನಾಶದ ಯತ್ನ ನಡೆಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಇನ್ನಷ್ಟು ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇದೆ. ಆರೋಪಿಗಳನ್ನು ಇನ್ನಷ್ಟು ವಿಚಾರಣೆ ಮಾಡಬೇಕಿದೆ. ಕೊಲೆಗೆ ಬಳಸಿದ ಆಯುಧಗಳನ್ನು, ವಸ್ತುಗಳನ್ನು ಸೀಜ಼್ ಮಾಡಬೇಕಿದೆ. ಆರೋಪಿಗಳ ಮೊಬೈಲ್‌ಗಳನ್ನು ಸೀಜ಼್ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು” ಎಂದು ತನಿಖಾಧಿಕಾರಿ ವಿನಂತಿಸಿದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಎಲ್ಲ ಆರೋಪಿಗಳನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ನಟ ದರ್ಶನ್ ಬಂಧನ | ಸಾಮಾಜಿಕ ಜಾಲತಾಣ, ನಾಗರಿಕ ಸಮಾಜ ಮತ್ತು ಕಾನೂನು ವೈಫಲ್ಯ
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಟ ದರ್ಶನ್ ಪದೇಪದೆ ಕಣ್ಣೀರು ಹಾಕುತ್ತ ನಿಂತಿದ್ದರು. ಇನ್ನೊಂದೆಡೆ ನಟಿ ಪವಿತ್ರಗೌಡ ಕೂಡ ಕಣ್ಣೀರು ಹಾಕುತ್ತಿದ್ದುದು ಕಂಡುಬಂದಿದೆ.
