ಹತ್ತಿ ಖರೀದಿ ಪ್ರಾಂಗಣದಲ್ಲಿ ವೇಬ್ರಿಜ್ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಎಪಿಎಂಸಿ ಎದುರುಗಡೆ ಪ್ರತಿಭಟನೆ ನಡೆಸಿದರು. ಹಕ್ಕೊತ್ತಾಯ ಪತ್ರವನ್ನು ಎಪಿಎಂಸಿ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.
“ಕೃಷಿ ಮಾರುಕಟ್ಟೆಯಲ್ಲಿ ಹತ್ತಿ ಖರೀದಿಗೆ ಒಂದು ದರ ನಿಗದಿಪಡಿಸಿದರೆ ಮೀಲ್ ಮಾಲಿಕರು ನಿಗದಿ ದರಗಿಂತ ಕಡಿಮೆ ದರದಲ್ಲಿ ಖರೀದಿಸುತ್ತಾರೆ. ಇದಕ್ಕೆ ಒಪ್ಪದ ರೈತರಿಗೆ ಹಿಂತೆಗೆದುಕೊಂಡು ಹೋಗುವಂತೆ ತಾಕೀತು ಮಾಡುತ್ತಿದ್ದಾರೆ. ಕೂಡಲೇ ಈ ತಾರತಮ್ಯ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಹತ್ತಿಗೆ ಮಾರುಕಟ್ಟೆಯಲ್ಲಿ ದರ ನಿಗದಿ ನಂತರ ಮಿಲ್ ನಲ್ಲಿ ಅನ್‌ಲೋಡ್ ಮಾಡುವ ಕೂಲಿ ವೆಚ್ಚ ಮತ್ತು ವೇಬ್ರಿಜ್‌ನ ವೆಚ್ಚವನ್ನು ರೈತರಿಗೆ ಹೊರೆಯಾಗುವುದು ನಿಲ್ಲಿಸಬೇಕು. ತೊಗರಿ, ಕಡಲೆ ಹಾಗೂ ಸೂರ್ಯಕಾಂತಿಗೆ ಸ್ಯಾಂಪಲ್ ಹೆಸರಿನಲ್ಲಿ ವರ್ತಕರು ಪ್ರತಿ ಕ್ವಿಂಟಲ್ ಗೆ 1ರಿಂದ 1ಕೆಜಿ ಧಾನ್ಯ ಪಡೆಯುವುದು ರದ್ದುಪಡಿಸಬೇಕು. ತೊಗರಿ, ಕಡಲೆ, ಸೂರ್ಯಕಾಂತಿ ಬೆಳೆಗಳಿಗೆ 50 ಕೆಜಿ ಚೀಲಕ್ಕೆ 1ಕೆಜಿ ಸೂಟ್ ತೆಗೆಯಬೇಕು. ಈರುಳ್ಳಿ 50 ಕೆಜಿ ಚೀಲಕ್ಕೆ 1ಕೆಜಿ ಸೂಟ್ ತೆಗೆಯುವುದನ್ನು ನಿಲ್ಲಿಸಿ 200 ಗ್ರಾಂ. ಸೂಟ್ ತೆಗೆಯಬೇಕು. ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರು ಮಾರಾಟಕ್ಕೆ ತಂದ ದವಸ ದಾನ್ಯಗಳು ಮಳೆಗೆ ಕೊಚ್ಚಿ ಹೋಗುತ್ತಿದ್ದು, ಟೀನ್‌ಶೆಡ್ ದುರಸ್ತಿಗೊಳಿಸಿ ರೈತರ ದವಸ ದಾನ್ಯಗಳ ಸಂರಕ್ಷಿಸಬೇಕೆಂದು” ಆಗ್ರಹಿಸಿದರು.
“ಮಾರುಕಟ್ಟೆಯಲ್ಲಿ ದಳವಾಯಿಗಳಿಂದ ತೂಕ ಮಾಡಿಸಬೇಕು. ಅನ್ಯ ವ್ಯಕ್ತಿಗಳಿಂದ ತೂಕ ಮಾಡುವುದನ್ನು ನಿಲ್ಲಿಸಬೇಕು. ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ರೈತರಿಗಾಗಿ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು. ದನದ ಸಂತೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ : ಸಚಿವ ಪ್ರಿಯಾಂಕ್ ಖರ್ಗೆ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಕಾರ್ಯಾಧ್ಯಕ್ಷ ಅಬ್ದುಲ್ ಮಜೀದ್ ಬಿಚ್ಚಾಲಿ, ಗೌರವಾಧ್ಯಕ್ಷ ನರಸಿಂಗರಾವ್ ಕುಲಕರ್ಣಿ, ಅಕ್ಕಮ್ಮ ಗಿಲ್ಲೇಸೂಗೂರು, ಹಂಪಣ್ಣ ಜಾನೇಕಲ್, ನರಸಪ್ಪ ಯಾದವ ಹೊಕ್ರಾಣ , ಕೆ.ವಿರೇಶಗೌಡ ಕಡಗಂದೊಡ್ಡಿ, ಹುಲಿಗೆಪ್ಪ ಜಾಲಿಬೆಂಚಿ, ರಮೇಶ ಗಾಣದಾಳ, ತಿಮ್ಮಪ್ಪ ಬಾಪೂರು, ಮಲ್ಲಿಕಾರ್ಜುನ ಮಮದಾಪುರು, ದೇವಪ್ಪ ಜೇಗರಕಲ್, ಈರಣ್ಣ, ಪ್ರಾಣೇಶ ನಾಯಕ, ಮಹೆಬೂಬು ಕಮಲಾಪೂರು ಸೇರಿದಂತೆ ಹಲವು ರೈತರು ಇದ್ದರು.
ವರದಿ : ಹಫೀಜುಲ್ಲ