ರಾಜ್ಯ ಸರ್ಕಾರ ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ ಸುಮಾರು 6 ತಿಂಗಳು ಕಳೆದ ನಂತರ ರೈತರಿಗೆ ಬರ ಪರಿಹಾರ ನೀಡುತ್ತಿದ್ದು, ಶೀಘ್ರದಲ್ಲಿ ಉಳಿದ ಬರ ಪರಿಹಾರ ಹಣ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಒತ್ತಾಯಿಸಿದರು.
ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದ ರೈತಸಂಘದ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
“ಅತಿವೃಷ್ಠಿ, ಅನಾವೃಷ್ಠಿಯಿಂದ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ರೈತ ಬೆಳೆದ ಒಂದಿಷ್ಟು ಬೆಳೆಗೆ ವೈಜ್ಞಾನಿಕವಾಗಿ ಬೆಲೆ ಸಹ ಸಿಗುತ್ತಿಲ್ಲ. ಇಂತಹ ಕೇಡುಗಾಲದಲ್ಲಿ ಅನೇಕ ಸಮಸ್ಯೆಗಳು ಎದುರಿಸುತ್ತಿರುವ ರೈತರಿಗೆ ಸರ್ಕಾರ ಸಕಾಲಕ್ಕೆ ಪರಿಹಾರ ನೀಡದೇ ಅನ್ಯಾಯ ಮಾಡುತ್ತಿದೆ” ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸಿದರು.
“ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿ ಸುಮಾರು 3 ತಿಂಗಳು ಕಳೆದಿವೆ. ಆದರೆ ಇಲ್ಲಿಯವರೆಗೆ
ರೈತರ ಖಾತೆಗೆ ಪೂರ್ತಿ ಬಿಲ್ ಪಾವತಿಸಿಲ್ಲ. ಮೊದಲೇ ಬರಗಾಲದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಾರ್ಖಾನೆಯ ಆಡಳಿತ ಮಂಡಳಿ ಬಿಲ್ ಪಾವತಿಸಲು ವಿಳಂಬ ಮಾಡದೇ, ಉಳಿದ ಹಣ ಶೀಘ್ರದಲ್ಲಿ ರೈತರ ಖಾತೆಗೆ ಜಮಾ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ ತಹಸೀಲ್ದಾರ್ ಕಚೇರಿಯಲ್ಲಿ ಇಲ್ಲ ʼಶುದ್ಧ ಕುಡಿಯುವ ನೀರುʼ
ಈ ಸಂದರ್ಭದಲ್ಲಿ ರೈತ ಸಂಘದರೈತ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದರ, ಜಿಲ್ಲಾ ಉಪಾಧ್ಯಕ್ಷ ಶಂಕ್ರೆಪ್ಪಾ ಪಾರಾ, ಭಾಲ್ಕಿ ತಾಲೂಕಾಧ್ಯಕ್ಷ ಬಾಬುರಾವ ಜೋಳದಾಬಕೆ, ಬೀದರ್ ತಾಲೂಕಾಧ್ಯಕ್ಷ ನಾಗಯ್ಯಾ ಸ್ವಾಮಿ, ಕಮಲನಗರ ತಾಲೂಕಾಧ್ಯಕ್ಷ ಪ್ರವೀಣ ಕುಲಕರ್ಣಿ ಸೇರಿದಂತೆ ರೈತ ಮುಖಂಡರಾದ ಶಿವಾನಂದ ಹುಡಗೆ, ಚಂದ್ರಪ್ಪಾ ಪಾಟೀಲ್ ಇದ್ದರು.