ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹಲವಾರು ಸಣ್ಣ ಪುಟ್ಟ ಹೋರಾಟಗಳು ಜನರಲ್ಲಿ ಜಾಗೃತಿ ಮೂಡಿಸಿ, ದೊಡ್ಡ ಚಳುವಳಿಗಳಿಗೆ ಪ್ರೇರಣೆಯಾಗಿವೆ. ಅಂತಹ ಹೋರಾಟಗಳಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಮೋಚನಾ ಹೋರಾಟವು ಒಂದು ಪ್ರಮುಖ ಅಧ್ಯಾಯವಾಗಿದೆ. ಬ್ರಿಟೀಷರ ಪರವಾಗಿ ನಿಂತಿದ್ದ ಸಂಸ್ಥಾನಿಕರ ವಿರುದ್ಧ ನಡೆದ ಈ ಹೋರಾಟದಲ್ಲಿ ಅನೇಕ ಸ್ವಾತಂತ್ರ್ಯ ಸೇನಾನಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಕೆಲವರಿಗೆ ಗಲ್ಲು ಶಿಕ್ಷೆ, ಕೆಲವರಿಗೆ ಜೀವಾವಧಿ ಶಿಕ್ಷೆ, ಇನ್ನೂ ಕೆಲವರಿಗೆ ಕರಿನೀರಿನ ಶಿಕ್ಷೆ ವಿಧಿಸಲಾಯಿತು.
ಬ್ರಿಟೀಷರ ಕಾಲದಲ್ಲಿ ಭಾವೆ ಮನೆತನದವರು ರಾಮದುರ್ಗ ಸಂಸ್ಥಾನವನ್ನು ಆಳುತ್ತಿದ್ದರು. ಬ್ರಿಟೀಷರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಸಂಸ್ಥಾನಿಕರು ಜನರ ನೋವನ್ನು ಕಡೆಗಣಿಸಿದರು. 1918–1919ರ ಕಂದಾಯ ಪುನರ್‌ವಿಮರ್ಶೆಯ ನಂತರ, ಸಂಸ್ಥಾನದಲ್ಲಿನ ಕಂದಾಯವು ಬ್ರಿಟಿಷ್ ಪ್ರಾಂತಗಳಿಗಿಂತ 33%ರಿಂದ 100% ಹೆಚ್ಚಾಯಿತು. ಜೊತೆಗೆ ಹುಲ್ಲು ಬನ್ನಿ ತೆರಿಗೆ, ಹಿತ್ತಲ ತೆರಿಗೆ, ಸ್ಟ್ಯಾಂಪ್ ತೆರಿಗೆ ಜನರ ಮೇಲೆ ಭಾರವಾಗಿ ಬಿದ್ದವು.
ಬರಗಾಲದಿಂದಲೇ ನರಳುತ್ತಿದ್ದ ಆಗಿನ ಪ್ರಜೆಗಳಿಗೆ ಈ ಹೆಚ್ಚುವರಿ ತೆರಿಗೆಗಳು ಗಾಯದ ಮೇಲೆ ಬರೆ ಎಳೆದಂತಾದವು. ರೈತರಷ್ಟೇ ಅಲ್ಲದೆ ನೇಕಾರರೂ ಹೋರಾಟಕ್ಕೆ ಧುಮುಕಿದರು. ನೇಕಾರರು ನೂಲಿಗೆ ಬಣ್ಣ ಹಾಕಲು ಬಣ್ಣದ ನೀರು ಕುದಿಸುವ ಒಲೆಯ ಮೇಲೂ ತೆರಿಗೆ ವಿಧಿಸುವ ಅನ್ಯಾಯವನ್ನು ಸಹಿಸದೆ, ಹೋರಾಟದ ಬಣ ಸೇರಿದರು.

1938ರ ಮಾರ್ಚ್ 28ರಂದು, ತೆರಿಗೆ ಕಡಿತಕ್ಕಾಗಿ ಪ್ರಜೆಗಳು ಸಂಸ್ಥಾನಿಕರ ಬಳಿ ಮನವಿ ಮಾಡಿದರು. ಪ್ರತಿಕ್ರಿಯೆ ಬಾರದೇ ಇದ್ದಾಗ, ಯಲಿಗಾರ ಬಸಪ್ಪನವರು ವೆಂಕಟೇಶ್ವರ ದೇವಸ್ಥಾನಕ್ಕೆ ಹೊರಟಿದ್ದ ಸಂಸ್ಥಾನಿಕ ರಾಜಾಸಾಹೇಬರ ಸಾರೋಟದ ಕುದುರೆಯ ಲಗಾಮು ಹಿಡಿದು ನ್ಯಾಯ ಕೇಳಿದರು. ಕೋಪಗೊಂಡ ಸಂಸ್ಥಾನಿಕರು ನೆರೆದಿದ್ದ ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲು ಆದೇಶಿಸಿದರು.
ಈ ಘಟನೆ ರಾಮದುರ್ಗದಲ್ಲಿ ಪ್ರಜೆಗಳ ಹೋರಾಟಕ್ಕೆ ನಾಂದಿ ಹಾಡಿತು. ಇದರಿಂದ ಜಮಖಂಡಿ ಸಂಸ್ಥಾನದ ಜನರೂ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರೇರಿತರಾದರು. ಮುಂದಿನ ದಿನಗಳಲ್ಲಿ ಪ್ರಜಾ ಸಂಘದ ಸ್ಥಾಪನೆಗೂ ಇದೇ ಹೋರಾಟ ಬುನಾದಿಯಾಯಿತು.
ಧ್ವಜ ಘಟನೆ ಮತ್ತು ಜೈಲು ಶಿಕ್ಷೆ
ರಾಮದುರ್ಗದ ನೆಲವು 1939ರ ಏಪ್ರಿಲ್ ತಿಂಗಳಲ್ಲಿ ಇತಿಹಾಸವನ್ನು ಬರೆಯುವ ದಿನಗಳನ್ನು ಕಂಡಿತ್ತು. ದೇಶಾದ್ಯಂತ ಸ್ವಾತಂತ್ರ್ಯದ ಹೋರಾಟ ಉಕ್ಕಿ ಹರಿಯುತ್ತಿದ್ದಾಗ, ಧ್ವಜಾರೋಹಣವು ಕೇವಲ ಒಂದು ಕಾರ್ಯಕ್ರಮವಲ್ಲ ಅದು ಪ್ರಜಾಸತ್ತಾತ್ಮಕ ಚೇತನದ ಸಂಕೇತವಾಗಿತ್ತು.

ಏಪ್ರಿಲ್ 4ರಂದು ರಾಮದುರ್ಗದ ಪ್ರಜೆಗಳು ಧ್ವಜವನ್ನು ಎತ್ತಿ, ಸ್ವಾತಂತ್ರ್ಯದ ಕನಸುಗಳನ್ನು ಗಗನಕ್ಕೇರಿಸಿದರು. ಆದರೆ, ಮತ್ತೇ ದಿನ ಅಧಿಕಾರದ ಅಹಂಕಾರ ತನ್ನ ನರಳಾಟ ತೋರಿಸಿತು. ರಸ್ತೆಗೆ ಅಡ್ಡ ಎಂಬ ನೆಪದಲ್ಲಿ ಬ್ರಿಟಿಷರ ಪರ ನಿಂತ ಇನ್ಸ್‌ಪೆಕ್ಟರ್ ಬಾಯಸ್ ಧ್ವಜಸ್ತಂಭವನ್ನು ಕಿತ್ತುಹಾಕಲು ಮುಂದಾದ. ಜನರು, ನಮ್ಮ ನಾಯಕ ಬಂದು ಹೇಳಿದ ನಂತರ ನೋಡೋಣ ಎಂದರೂ, ಶಸ್ತ್ರಧಾರಿ ಪೊಲೀಸರು, ಜನರ ಇಚ್ಛೆಯನ್ನು ತುಳಿದು, ಧ್ವಜವನ್ನು ಕಿತ್ತುಕೊಂಡು ಹೋದರು. ಆ ಸಮಯದಲ್ಲಿ ಪ್ರಜಾ ಸಂಘ ಸತ್ತಿತು ಎಂಬ ಪೋಲಿಸರ ಕೂಗು ರಾಮದುರ್ಗದ ಪ್ರಜೆಗಳ ಆಕ್ರೋಶಕ್ಕೆ ಕಾರಣವಾಯಿತು.
ಆದರೆ, ಹೋರಾಟಗಾರರ ಮನಸ್ಸು ಕುಸಿಯಲಿಲ್ಲ. ಮಹಾದೇವಪ್ಪ ಪಟ್ಟಣ ಮತ್ತೊಂದು ಕಂಬ ನೆಡಿಸಿದರು ಅದು ಕೇವಲ ಕಂಬವಲ್ಲ, ಅದು ಜನರ ಆತ್ಮಸಮ್ಮಾನದ ಘೋಷಣೆ. ಆದರೆ ಸಂಸ್ಥಾನಿಕರು ಬೆದರಿಕೆಗೆ ಶರಣಾದರು. 144 ಕಲಂ ಜಾರಿಗೊಳಿಸಿ ನೋಟಿಸ್ ಹಂಚಿದರು, ಅದು ಮರಾಠಿಯಲ್ಲಿ ಇದ್ದ ಕಾರಣ, ಪಟ್ಟಣ ಅವರು ಸ್ವೀಕರಿಸಲು ನಿರಾಕರಿಸಿದರು.
ಧ್ವಜದ ಅವಮಾನ ಜನರ ಹೃದಯವನ್ನು ಸುಟ್ಟು ಹಾಕಿತು. ತಕ್ಷಣವೇ ಏಪ್ರಿಲ್ 5ರ ಸಂಜೆ, ತೇರಬಜಾರಿನಲ್ಲಿ ಸಭೆ ಕೂಡಿ, ಧ್ವಜದ ಗೌರವ ಕಾಪಾಡುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಆದರೆ ಭಾಷಣ ನಡೆಯುತ್ತಿದ್ದಂತೆಯೇ ಕಲ್ಲು ಎಸೆದು ಗಲಾಟೆ ಸೃಷ್ಟಿಸಲಾಯಿತು. ಇದೇ ಅವಕಾಶವನ್ನು ಬಳಸಿಕೊಂಡ ಪೊಲೀಸರು 12 ಹುಸಿ ಗುಂಡು ಹಾರಿಸಿ, ಹೋರಾಟದ ಧ್ವನಿ ಮುನವಳ್ಳಿಯವರನ್ನು ಬಂಧಿಸಿದರು.

ಧ್ವಜದ ಅವಮಾನ ಕೇವಲ ಕಬ್ಬಿಣದ ಕಂಬವನ್ನು ಕಿತ್ತು ಹಾಕುವುದಲ್ಲ, ಅದು ಜನರ ಗೌರವಕ್ಕೆ ಹೊಡೆತ. ಆ ಹೊಡೆತಕ್ಕೆ ಪ್ರತಿಕ್ರಿಯೆಯಾಗಿ ರಾಮದುರ್ಗದ ಹೋರಾಟ ಉರಿಯಿತು, ಅದು ಮುಂದಿನ ವಿಮೋಚನಾ ಹೋರಾಟಕ್ಕೆ ಇಂಧನವಾಗಿತ್ತು.
ಜೈಲು ದುರಂತ ಮತ್ತು ಗಲ್ಲು ಶಿಕ್ಷೆ
1939ರ ಏಪ್ರಿಲ್ 7ರ ಬೆಳಿಗ್ಗೆ 11 ಗಂಟೆಗೆ, ಮುನವಳ್ಳಿ ವಕೀಲರನ್ನು ಜೈಲಿನಿಂದ ಬಿಡಿಸಲು 2 ರಿಂದ 3 ಸಾವಿರ ಮಂದಿ ಜನರು ರೈತರು, ಕಾರ್ಮಿಕರು, ಯುವಕರು ಕೈಯಲ್ಲಿ ಲಾಠಿ, ಕೊಡ್ಲಿ, ಕುಡಗೋಲು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಜೈಲಿನತ್ತ ಹೊರಟರು.
ಆ ಜನಸಾಗರದ ಉತ್ಸಾಹ ಮತ್ತು ಕೋಪವನ್ನು ತಡೆಗಟ್ಟಲು, ಅಧಿಕಾರಿಗಳು ಗುಂಡು ಹಾರಿಸಲು ಆದೇಶಿಸಿದರು.
65 ಗುಂಡುಗಳು ಹಾರಿಸಲ್ಪಟ್ಟವು. ರಕ್ತಭರಿತ ಆ ದಿನದಲ್ಲಿ 4 ಮಂದಿ ಸ್ಥಳದಲ್ಲೇ ಹುತಾತ್ಮರಾದರು.
ನ್ಯಾಯದ ಹೆಸರಿನಲ್ಲಿ ಕಠಿಣ ಶಿಕ್ಷೆಗಳು
ಘಟನೆಯ ನಂತರ, ಬ್ರಿಟಿಷರ ಪರ ಆಡಳಿತ ನಡೆಸುತ್ತಿದ್ದ ಸಂಸ್ಥಾನ ಸರ್ಕಾರದ ಅಡಿಯಲ್ಲಿ ಜೆ.ಡಿ. ದಾವರ್ ವಿಚಾರಣೆ ನಡೆಸಿದರು.
‘ಧ್ವಜ ಘಟನೆ’ ಮತ್ತು ನಂತರ ಜೈಲಿನೊಳಗೆ ನಡೆದ ಹೋರಾಟಕ್ಕೆ ಸಂಬಂಧಿಸಿ ನ್ಯಾಯಾಲಯ ತೀರ್ಪು ನೀಡಿತು. 5 ಮಂದಿಗೆ ಕರಿನೀರಿನ ಶಿಕ್ಷೆ (ಅಂಡಮಾನ್ ದ್ವೀಪದ ಕಠಿಣ ಕಾರಾಗೃಹ), 2 ಮಂದಿಗೆ ಜೀವಾವಧಿ ಶಿಕ್ಷೆ, 23 ಮಂದಿಗೆ ಜೈಲು ಶಿಕ್ಷೆ, 8 ಮಂದಿಗೆ ಗಲ್ಲು ಶಿಕ್ಷೆಯಾಯಾತು.
9 ಮೇ 1940ರಂದು ಬೆಳಗಾವಿಯಲ್ಲಿ ನಾಗಪ್ಪ ಸುಳ್ಳದ, ಮಲ್ಲಶೇಟ್ಟಿ ಅಕ್ಕಿ, ಗಿರಿಯಪ್ಪ ಜೋಗಿ, ಮಹಾಲಿಂಗಯ್ಯ ಹಿರೇಮಠ, ಬಸಪ್ಪ ಯಲಿಗಾರ, ಪತ್ರೆಪ್ಪ ಹರಗೋಲ ಇವರನ್ನು ಗಲ್ಲಿಗೇರಿಸಲಾಯಿತು. 9 ಜೂನ್ 1940ರಂದು ರಾಮಪ್ಪ ಶಡ್ಲಗೇರಿ, ಶಾಕಂಬ್ರಪ್ಪ ಗೌರಿ ಇವರನ್ನು ಗಲ್ಲಿಗೆರಿಸಲಾಯಿತು. ಈ ಎಂಟು ಮಂದಿ, ಸ್ವಾತಂತ್ರ್ಯದ ಕನಸಿಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದರು.
ಅವರು ಬಲಿದಾನ ವೇದಿಕೆಯತ್ತ ಹೆಜ್ಜೆ ಹಾಕಿದಾಗ, ತಮ್ಮ ಕುಟುಂಬಗಳ ಕಣ್ಣೀರನ್ನು ತೊಳೆದು, ದೇಶ ಬಾಳಲಿ ಎಂಬ ಮಾತನ್ನು ಉಳಿಸಿದರು.
ಈ ವೀರರ ಕುಟುಂಬಗಳು ದುಃಖದಲ್ಲಿ ಮುಳುಗಿದ್ದಾಗ, ತೀರ್ಪು ನಿರ್ಣಯಿಸಿದ ಲೀಲೆ, ರಾಸ್ತೆ ಮತ್ತು ಕರ್ನಲ್ ಓಬ್ರಾಯನ್ ದಂಪತಿಗಳು, ರಾಜಾಸಾಹೇಬನ ಗಾರ್ಡನ್ ಪಾರ್ಟಿಯಲ್ಲಿ ಹರ್ಷೋತ್ಸವದಲ್ಲಿ ನಿರತರಾಗಿದ್ದರು. ರಕ್ತದಲ್ಲಿ ತೇಲುತ್ತಿದ್ದ ಹೋರಾಟದ ನೆಲದ ಮೇಲೆ, ಅಧಿಕಾರದ ಮಧದಲ್ಲಿ ಸಂಗೀತ ಮತ್ತು ನೃತ್ಯದ ಶಬ್ದಗಳು ಕೇಳಿಬರುತ್ತಿದ್ದವು.
ರಾಮದುರ್ಗ ಸ್ವಾತಂತ್ರ್ಯ ಹೋರಾಟವು ಕೇವಲ ಸ್ಥಳೀಯ ಹೋರಾಟವಲ್ಲ. ಅದು ದೇಶದಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಒಂದು ಪ್ರಬಲ ಧ್ವನಿಯಾಗಿತ್ತು. ಆದರೆ, ಈ ಘಟನೆಗಳ ದಾಖಲೆಗಳು ಇಂದಿಗೂ ಪಠ್ಯಪುಸ್ತಕಗಳಲ್ಲಿ ಕಾಣಿಸದಿರುವುದು ಇತಿಹಾಸದ ಅನ್ಯಾಯ. ವೀರರ ಹೆಸರುಗಳನ್ನು ಮರೆಯದೇ ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಈ ಕಾರ್ಯವನ್ನು ಡಾ.ಅಣ್ಣಪ್ಪ ವಗ್ಗರ ಮತ್ತು ಮಲ್ಲಿಕಾರ್ಜುನ ಜರಕುಂಟಿ ಇವರು ರಾಮದುರ್ಗ ವಿಮೋಚನಾ ಹೋರಾಟ ಎಂಬ ಕೃತಿಯ ಮೂಲಕ ಜೀವಂತವಾಗಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು