ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಕಗ್ಗಲೀಪುರ ವೃತ್ತ ರೈತ ನಿಯೋಗ ರೈತರ ಜ್ವಲಂತ ಸಮಸ್ಯೆಗಳಾದ ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳ, ಪೋಡಿ ಸಮಸ್ಯೆ ಹಾಗೂ ಇನ್ನಿತರ ರೈತರ ತೊಡಕುಗಳ ಬಗ್ಗೆ ವಿಧಾನಸೌಧದಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಹಾಗೂ ಯಶವಂತಪುರ ಶಾಸಕರಾದ ಸೋಮಶೇಖರ್ ಜೊತೆ ಸಭೆ ಸೇರಿ ಚರ್ಚಿಸಲಾಯಿತು.
ಸಾಕಷ್ಟು ವರ್ಷಗಳಿಂದ ರೈತರು ಸಮಸ್ಯೆ ಅನುಭವಿಸುತ್ತಾ ಬಂದಿದ್ದು ಕಾನೂನಾತ್ಮಕ ನೆಲೆಯಲ್ಲಿ ಪರಿಹಾರ ಒದಗಿಸುವ ಬಗ್ಗೆ ಮಾತನಾಡಿದ ಸಂತೋಷ್ ಹೆಗ್ಡೆಯವರು ವಿಧಾನಸೌಧಕ್ಕೆ ಬರಬಾರದು ಎಂಬ ತಮ್ಮ ಸಂಕಲ್ಪ ಮುರಿದು ರೈತಪರ ಕಾಳಜಿಯಿಂದ ವಿಧಾನಸೌಧಕ್ಕೆ ಕಾಲಿರಿಸಿದ್ದೇನೆ. ರೈತರನ್ನು ಹಿಂಸಿಸುವುದು ಸರಿಯಲ್ಲ. ಕಾನೂನಿನಲ್ಲಿ ರೈತರಿಗೆ ಅವಕಾಶವಿದೆ. ಉಳ್ಳವರಿಗೆ ಪರಿಹಾರ ಒದಗಿಸಿ ರೈತರನ್ನು ಶೋಷಿಸುತ್ತಿರುವುದು ಸರಿಯಲ್ಲ. ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪೋಡಿ ಸಮಸ್ಯೆ, ರೈತರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ, ಸೋಮನಹಳ್ಳಿ ಗೇಟ್ ಟೋಲ್ ಹಾಗೂ ರೈತರ ಇನ್ನಿತರ ವಿಚಾರವಾಗಿ ನಾಲ್ಕು ತಿಂಗಳ ಹಿಂದೆ ಕನಕಪುರದಲ್ಲಿ ಸಂತೋಷ್ ಹೆಗ್ಡೆಯವರ ಮುಂದಾಳತ್ವದಲ್ಲಿ ನಾಲ್ಕು ಸಾವಿರ ರೈತರು ಸೇರಿ ಬೃಹತ್ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗೆ ಯಶವಂತಪುರದ ಶಾಸಕರಾದ ಸೋಮಶೇಖರ್ ಸ್ಪಂದಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಜೊತೆಗೆ ರೈತರ ನಿಯೋಗ ಚರ್ಚಿಸಲು ಸಮಯ ನಿಗದಿ ಪಡಿಸಿದ್ದರು.
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ, “ಸುಪ್ರೀಂ ಕೋರ್ಟ್ ಮಾರ್ಗಸೂಚಿ ಹಾಗೂ ಇನ್ನಿತರ ಕಾನೂನಾತ್ಮಕ ತೊಡಕುಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಎರಡು ತಿಂಗಳ ಕಾಲಾವಕಾಶ ಕೇಳಿ, ರೈತರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲು ಸರಕಾರ ಬದ್ದವಾಗಿದೆ” ಎಂದರು.
ಯಶವಂತಪುರ ಕ್ಷೇತ್ರದ ಶಾಸಕರಾದ ಸೋಮಶೇಖರ್ ಕೂಡ ಸಮಸ್ಯೆಗಳ ಪರಿಹಾರ ಒದಗಿಸಲು ಮುಖ್ಯಮಂತ್ರಿಯವರ ಬಳಿ ಮಾತನಾಡುತ್ತೇನೆ ಎಂದು ಗಮನಾರ್ಹವಾಗಿ ಸ್ಪಂದಿಸಿದರು. .
ವಿಧಾನ ಪರಿಷತ್ ಸದಸ್ಯರಾದ ಮೋಹನ್ ಕೊಂಡಾಜಿ ಸಹ ರೈತರ ಜೊತೆಗೂಡಿದ್ದರು. ಜೊತೆಗೆ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾದ ಕುಮಾರಸ್ವಾಮಿ, ರೈತ ಮುಖಂಡ ನದೀಂಪಾಷ, ಕೆ ಆರ್ ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ, ವೆಂಕಟೇಶ್ , ಶೀನಿವಾಸ್, ಕಾಣಿಕ್, ನಾಗಭೂಷಣ ರೆಡ್ಡಿ, ಮಂಜಣ್ಣ , ಹಾಗೂ ಮುಂತಾದ ರೈತ ಮುಖಂಡರು ಉಪಸ್ಥಿತರಿದ್ದರು.


