ರೈಲ್ವೆ ನೇಮಕಾತಿಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ಸರಕಾರವು ಆದೇಶಿಸಿದ್ದು, ಇದು ಕನ್ನಡಿಗರಿಗೆ ಸಿಕ್ಕ ಅಭೂತಪೂರ್ವ ಗೆಲುವು. ಇದಕ್ಕೆ ಕಾರಣರಾದ ಕನ್ನಡಪರ ಹೋರಾಟಗಾರರು ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷರಾದ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಕನಕಪುರದ ರಾಜಾರಾವ್ ರಸ್ತೆಯಲ್ಲಿನ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಇಂಗ್ಲಿಷ್, ಮತ್ತು ಹಿಂದಿಯಲ್ಲಿ ಬರೆಯಬೇಕಾದ ಸಂದಿಗ್ಧ ಪರಿಸ್ಥಿತಿಯಿದ್ದು, ಇದರಿಂದ ಪ್ರತಿಭಾನ್ವಿತ ವಿಧ್ಯಾರ್ಥಿಗಳು ಆಯ್ಕೆಯಿಂದ ವಂಚಿತರಾಗುತ್ತಿದ್ದರು. ಇದು ಕನ್ನಡಿಗರಿಗೆ ಆಗುತ್ತಿದ್ದ ವಂಚನೆಯಾಗಿದ್ದು, ಕನ್ನಡಿಗರಿಗೆ ಅತಿ ಹೆಚ್ಚು ಹುದ್ದೆಗಳನ್ನು ಮೀಸಲಿಡುವ ಮೂಲಕ ಕನ್ನಡಿಗರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಜಾಫರ್ ಷರೀಫ್, ಚಂದ್ರಶೇಖರ್ ಮೂರ್ತಿ, ಮಲ್ಲಿಕಾರ್ಜುನ ಖರ್ಗೆ ಕೂಡ ಕರ್ನಾಟಕದಿಂದ ಸಂಸದರಾಗಿ ಒಕ್ಕೂಟ ರೈಲ್ವೆ ಖಾತೆ ಸಚಿವರಾಗಿದ್ದರೂ ಈಡೇರಿಸಲಾಗದ ಭರವಸೆಯನ್ನು ವಿ ಸೋಮಣ್ಣ ಈಡೇರಿಸಿದ್ದು ಶ್ಲಾಘನೀಯ. ಅನೇಕ ಕನ್ನಡಪರ ಹೋರಾಟಗಾರರು ಈ ಹೋರಾಟ ಮಾಡಿ ಹಲವಾರು ಕೇಸು ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದಿದ್ದರು. ಅವರೆಲ್ಲರೂ ಈಗ ಪ್ರಾತಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ಕನಕಪುರದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನಿಯೋಗ ವಿ ಸೋಮಣ್ಣರನ್ನು ಖುದ್ದು ಭೇಟಿ ಮಾಡಿ ಅಭಿನಂದನೆಗಳನ್ನು ಸಲ್ಲಿಸಲಿದ್ದೇವೆ. ಹಾಗೇಯೇ ದೇವೆಗೌಡರು ಪ್ರಧಾನಿಯಾಗಿದ್ದಾಗ ಘೋಷಣೆಯಾಗಿದ್ದ ಬೆಂಗಳೂರು-ಸತ್ಯಮಂಗಲ ರೈಲು ಮಾರ್ಗದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಆ ಕನಸನ್ನು ಕೂಡ ವಿ.ಸೋಮಣ್ಣ ನನಸಾಗಲಿ ಎಂದು ಹೇಳಿದರು.
ರಾಜ್ಯ ರೈತ ಸಂಘದ ಸಂಚಾಲಕರಾದ ಚೀಲೂರು ಮುನಿರಾಜು ಮಾತನಾಡಿ, ರೈಲ್ವೆ ನೇಮಕಾತಿಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ರೈಲ್ವೆಯಲ್ಲಿ ಕನ್ನಡಿಗರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ರೈಲ್ವೆ ನೇಮಕಾತಿಯಲ್ಲಿ ದಕ್ಷಿಣ ಭಾರತದ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವ ಅಗತ್ಯವಿದೆ. ಸಾಮಾನ್ಯ ರೈತರ ಮಕ್ಕಳೂ ಕೂಡ ಕನ್ನಡದಲ್ಲಿ ಪರೀಕ್ಷೆ ಬರೆದು ಒಕ್ಕೂಟ ರೈಲ್ವೆಯಲ್ಲಿ ಉದ್ಯೋಗಿಗಳನ್ನಾಗಿ ಕಾಣಲು ಹರ್ಷವೆನಿಸುತ್ತದೆ ಎಂದರು.
ಇದನ್ನು ಓದಿದ್ದೀರಾ? ರಾಮನಗರ | ಉಪಕರಣಗಳ ಮೂಲಕ ಉದ್ಯೋಗ ಖಾತ್ರಿ ಕೆಲಸ: ಸೂಕ್ತ ಕ್ರಮಕ್ಕೆ ಮಾಹಿತಿ ಹಕ್ಕು ವೇದಿಕೆ ಒತ್ತಾಯ
ಕನ್ನಡ ಭಾಸ್ಕರ್ ಮಾತನಾಡಿ, ರೈಲ್ವೆ ನೇಮಕಾತಿಯಲ್ಲಿ ಕನ್ನಡಕ್ಕೆ ಸಿಕ್ಕ ಪ್ರಾಶಸ್ತ್ಯ ಸ್ವಾಗತಾರ್ಹವಾಗಿದ್ದು, ರೈಲಿನಲ್ಲಿ ಕನ್ನಡ ಭಾಷೆಯಲ್ಲಿ ಸೂಚನೆಗಳನ್ನು ಬರೆಯಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಸ್ಟುಡಿಯೋ ಚಂದ್ರು, ಕೆಆರ್ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ, ಸಾಮಾಜಿಕ ಹೋರಾಟಗಾರ ಚೀರಣಕುಪ್ಪೆ ರಾಜೇಶ್, ರೈತ ಸಂಘದ ನವೀನ್ ಉಪಸ್ಥಿತರಿದ್ದರು.

RRB ALp