ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ “ತೇಜಸ್ವಿ ಸಾಹಿತ್ಯಯಾನ ಹಾಗೂ ಯುವ ಸ್ಪಂದನ” ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಟಕಕಾರ, ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ, ತೇಜಸ್ವಿ ಪರಿಸರದ ಕುರಿತು ಬರೆದು ಕಾಡಿನ ಸಾಹಿತಿಯಾದರು. ಮೀನು ಹಿಡಿಯುವ ಕೆಲಸದ ಮೂಲಕ ತಾಳ್ಮೆ ಕಲಿತು ಅದರ ಸಿಹಿಯನ್ನುಣಿಸಿದರು. ಕನ್ನಡ ಸಾಹಿತ್ಯಕ್ಕೆ ಹೆಚ್ಚು ಓದುಗರ ಸಂಖ್ಯೆಯನ್ನು ವಿಸ್ತರಿಸಿದ ಕೀರ್ತಿಗೆ ತೇಜಸ್ವಿ ಭಾಜನರು. ತೇಜಸ್ವಿಯವರು ಇಂದಿನ ಯುವಪೀಳಿಗೆಯ ಆಶಾಕಿರಣ ಎಂದು ನುಡಿದರು.
ನಾಡಿನ ಬಹುದೊಡ್ಡ ಸಾಂಸ್ಕೃತಿ ರಾಯಭಾರಿ ಕುವೆಂಪು ಅವರ ಸುಪುತ್ರರಾಗಿ ಜನಿಸಿದ ತೇಜಸ್ವಿ ತಂದೆಯ ಯಾವುದೇ ಛಾಯೆಯನ್ನೂ ಮೈಗೂಡಿಸಿಕೊಳ್ಳದೆ ತಾನು ನಡೆದದ್ದೇ ದಾರಿ ಎಂಬಂತೆ ನಡೆದು ಹತ್ತಾರು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಹತ್ತು ಹಲವು ಅನ್ಯ ಭಾಷಾಕೃತಿಗಳನ್ನು ಕನ್ನಡೀಕರಿಸಿ ಉಪಕರಿಸಿದ್ದಾರೆ ಎಂದು ವಿವರಿಸಿದರು.
ತೇಜಸ್ವಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಜಿ.ಎಚ್ ರಾಮಯ್ಯ, ಪ್ರಗತಿಶೀಲ ಚಳುವಳಿಯ ಧಾರೆಯಲ್ಲಿ ಧುಮುಕಿ ಸಮೂಹವಾದದ ಚಿಂತನೆಗಳನ್ನು ಬಿತ್ತಿದರು. ಸರಳ ಬರಹದ ಸಂಕೀರ್ಣ ವಿಚಾರಧಾರೆಗಳ ಚಿಂತಕ ತೇಜಸ್ವಿ. ಹಿಂದಿನ ಬೆಂಚಿನ ವಿದ್ಯಾರ್ಥಿಯಾಗಿದ್ದವರು. ಹಲವು ಸಂಕಷ್ಟಗಳ ನಡುವೆ ತಮ್ಮ ಚಿಂತನೆಯ ಮೊನಚು ಹಂಚಿಕೊಂಡರು. ಕತೆಗಾರರಾಗಿ, ಪರಿಸರ ತಜ್ಞರಾಗಿ, ಪಕ್ಷಿಲೋಕದ ಸಂಶೋಧಕರಾಗಿ, ಸೂಕ್ಷ್ಮ ಸಂವೇದನೆಯ ದೊಡ್ಡ ವ್ಯಕ್ತಿಯಾಗಿ ರೂಪುಗೊಂಡದ್ದು ಇತಿಹಾಸ. ನಾಡಿನಲ್ಲಿ ಬಾಲ್ಯ ಕಳೆದು ಕಾಡಿಗೆ ಬಂದು ಇಡೀ ಜಗತ್ತನ್ನು ನಿರುತ್ತರದ ಮೂಲಕ ಕನ್ನಡ ಜಗತ್ತಿಗೆ ತೆರೆದು ತೋರಿಸಿದರು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ತೇಜಸ್ವಿಯವರ ಸಾಹಿತ್ಯ ಯುವ ಸಮುದಾಯದ ದಾರಿದೀಪ. ಆ ನಿಟ್ಟಿನಲ್ಲಿ ಯುವ ಸಮುದಾಯ ಓದನ್ನು ಗೀಳಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ ಪ್ರಾಸ್ತಾವಿಕವಾಗಿ ಮಾತನಾಡಿದರು.
2023 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಸಿದ್ಧರಾಜು ಅವರನ್ನು ಗೌರವಿಸಲಾಯಿತು. 7 ಚಿನ್ನದ ಪದಕ ಪಡೆದ ವಿಶಾಲಾಕ್ಷಿ.ವೈ.ಬಿ ಮತ್ತು 1 ಚಿನ್ನದ ಪದಕ ಪಡೆದ ಸಾಗರ್.ಬಿ.ಸಿ ಇವರನ್ನು ಗೌರವಿಸಲಾಯಿತು.
ನ್ಯೂ ಎಕ್ಸ್ ಪರ್ಟ್ ಕಾಲೇಜು ಸಂಸ್ಥಾಪಕ ಕಾರ್ಯದರ್ಶಿ ಪ್ರಾಂಶುಪಾಲರು ಡಾ.ಡಿ.ಆರ್.ರವಿಕುಮಾರ್ ಅಧ್ಯಕ್ಷ ಭಾಷಣದಲ್ಲಿ ಸಂಸ್ಥೆಯ ಹೆಸರಿನಲ್ಲಿ ಕ.ಸಾ.ಪ.ಗೆ ದತ್ತಿ ನಿಧಿ ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಸಮಾಜ ಸೇವಕರಾದ ಆರ್.ಎನ್.ಶ್ರೀನಿವಾಸ್ , ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ವನರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ನಂಜುಂಡಿ ಬಾನಂದೂರು, ಕಸಾಪ ಸಂಚಾಲಕ ಬಿ.ಟಿ.ರಾಜೇಂದ್ರ ಕೂಟಗಲ್ ಹೋಬಳಿ ಘಟಕದ ಅಧ್ಯಕ್ಷ ದೇವರಾಜ್, ಪ್ರಕಾಶ್, ಕುಮಾರ್ ಭಾಗವಹಿಸಿದ್ದರು.
ಹಿರಿಯ ಗಾಯಕ ಚೌ.ಪು.ಸ್ವಾಮಿ ಗಾಯನ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಅರುಣ್ ಆನುಮಾನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು ಚಂದ್ರಶೇಖರ್ ಉಪಪ್ರಾಂಶುಪಾಲರು ವಂದಿಸಿದರು.
