ರಾಮನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉಪಕರಣಗಳ ಮೂಲಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಆದರೂ ಕೂಡ ರಾಮನಗರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಮನಗರ ಘಟಕದ ಅಧ್ಯಕ್ಷರಾದ ಹೆಚ್.ಎಸ್. ಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ರಾಮನಗರ ಸಿಇಓಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಜಿಲ್ಲಾ ವ್ಯಾಪ್ತಿ ಅತಿ ಹೆಚ್ಚು ಅಕ್ರಮಗಳು ಕಂಡು ಬರುತ್ತಿವೆ. ದೂರುದಾರರು ದೂರುಗಳನ್ನು ಸಲ್ಲಿಸಿದ ಎಷ್ಟು ದಿನಗಳಾದರೂ ತಪ್ಪಿತಸ್ಥರ ಎದುರು ಕ್ರಮವನ್ನು ತೆಗೆದುಕೊಳ್ಳಲು ತಾವು ವಿಳಂಬ ಮಾಡುತ್ತಿದ್ದೀರಿ. ಈ ವಿಳಂಬ ನಡೆ ಭ್ರಷ್ಟಾಚಾರಕ್ಕೆ ಸಹಕರಿಸಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಈ ಬಗ್ಗೆ ಈಗಾಗಲೇ ದಾಖಲಾಗಿರುವ ಎಲ್ಲ ದೂರುಗಳನ್ನು ತಾವೇ ಖುದ್ದಾಗಿ ಪರಿಶೀಲಿಸಿ ತಪ್ಪಿತಸ್ಥರ ಎದುರು ಪಂಚಾಯತ್ ರಾಜ್ ಅಧಿನಿಯಮಗಳ ಹಾಗೂ ನರೇಗಾ ಯೋಜನೆಯ ನಿಯಮಗಳಡಿ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳ ಎದುರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವಂತೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸಾಮಾಜಿಕ ಹೋರಾಟಗಾರರು ಹಾಗೂ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರು ಮಾಹಿತಿ ಹಕ್ಕಿನಡಿ ಅರ್ಜಿಗಳನ್ನು ಸಲ್ಲಿಸಿ ಮಾಹಿತಿಗಳನ್ನು ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿಯ ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಸರಿಯಾಗಿ ಮಾಹಿತಿಗಳನ್ನು ನೀಡುತ್ತಿಲ್ಲ ಹಾಗೂ ಮೊದಲ ಮೇಲ್ಮನವಿ ವಿಚಾರಣೆಗಳನ್ನು ನಡೆಸುತ್ತಿಲ್ಲ. ಮಾಹಿತಿ ಕಾಯ್ದೆಯನ್ನು ಹಾಗೂ ಅದರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಈ ನಡುವೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಇದನ್ನು ಓದಿದ್ದೀರಾ? ಚನ್ನಪಟ್ಟಣ | ಪ್ರತಿ ಪಂಚಾಯ್ತಿಯಲ್ಲಿ ₹2-5 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ: ಡಿ ಕೆ ಶಿವಕುಮಾರ್
ತಾವುಗಳು ಕೂಡಲೇ ಮಾಹಿತಿ ಹಕ್ಕು ಕಾಯ್ದೆಯ ಗಂಭೀರತೆಯನ್ನು ಕೂಡಲೇ ಎಲ್ಲ ಗ್ರಾಮ ಪಂಚಾಯಿತಿಯ ಪಿಡಿಒಗಳು ಹಾಗೂ ಕಾರ್ಯದರ್ಶಿಗಳಿಗೆ ತಿಳಿಸಿ, ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸುವಂತೆ ತಿಳಿಸಬೇಕು ಹಾಗೂ ಅವರಿಗೆ ಸೂಕ್ತ ತರಬೇತಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಅರ್ಜಿಯನ್ನು ಸ್ವೀಕರಿಸಿ ಜಿಲ್ಲಾ ಪಂಚಾಯಿತಿ ಎಡಿ ಮಾತನಾಡಿ, ತಾವು ಕೊಟ್ಟ ದೂರನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ಸಂಬಂಧಿಸಿದವರ ಎದುರು ಕ್ರಮ ಕೈಗೊಳ್ಳುತ್ತೇವೆ. ನಾವು ತೆಗೆದುಕೊಂಡ ಕ್ರಮಗಳ ಬಗ್ಗೆ ತಮಗೆ ಹಿಂಬರಹವನ್ನು ನೀಡಲಾಗುವುದು ಎಂದರು.
