ಶ್ರೀನಿವಾಸ ರಾಮಾನುಜನ್ ಅವರು ಕಿರಿಯ ವಯಸ್ಸಿನಲ್ಲಿಯೇ 3,600ಕ್ಕೂ ಹೆಚ್ಚು ಗಣಿತದ ಸೂತ್ರಗಳನ್ನು ಕೊಟ್ಟಿದ್ದಾರೆ. ವಿಶ್ವಶ್ರೇಷ್ಠ ಗಣಿತಜ್ಞರಾಗಿದ್ದಾರೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಂ ಸಜ್ಜನ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಹೆಬಸೂರ ಸರ್ಕಾರಿ ಶಾಲೆಯಲ್ಲಿ ನಡೆದ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ರಾಮಾನುಜನ್ ಅವರು ಮೂವತ್ತೆರಡನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು. ಆದರೆ, ಬದುಕಿದ್ದ ಅಲ್ಪ ಕಾಲಾವಧಿಯಲ್ಲಿಯೇ ಗಣಿತಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ” ಎಂದು ಹೇಳಿದರು.
“ಮೂರನೇ ತರಗತಿಯಲ್ಲಿದ್ದಾಗ ಗಣಿತ ವಿಷಯ ಬೋಧಿಸುತ್ತಿದ್ದ ಗುರುಮಾತೆಯರಿಗೆ ರಾಮಾನುಜನ್ ಮರು ಪ್ರಶ್ನೆ ಹಾಕಿದ್ದರು. ವಿದ್ಯಾರ್ಥಿಗಳು ಗಣಿತ ಕಲಿಕೆಯಲ್ಲಿ ಹಿಂಜರಿಕೆ, ಕೀಳರಿಮೆ, ಸಂಕೋಚ, ಭಯಗಳೆಂಬ ನಕಾರಾತ್ಮಕ ವಿಚಾರಗಳನ್ನು ಕೈಬಿಟ್ಟು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪುರದಪ್ಪ ಗಾಳಿ ಸದಸ್ಯರಾದ ವೆಂಕಣ್ಣ ತಳವಾರ, ಗ್ರಾಮ ಪುರೋಹಿತ ಶಾರದಾ ಕಂಬಳಿ, ದ್ರಾಕ್ಷಾಯಿಣಿ ಕೊರಗರ, ದೇವೇಂದ್ರ ಪತ್ತಾರ, ಸುವರ್ಣ ಮಡಿವಾಳರ, ಸುಧಾ ಕೊಣ್ಣೂರ, ಗೀತಾ ಕೆಂಚರಡ್ಡಿ, ಶೃತಿ ಪೋಲೀಸ್ ಪಾಟೀಲ, ಮೆಹಬೂಬ ಮುಲ್ಲಾನವರ ಉಪಸ್ಥಿತರಿದ್ದರು.