“ಶಾಸಕ ಅಶೋಕ ಪಟ್ಟಣ ಅವರು ಇದೇ ರಸ್ತೆಯಲ್ಲಿ ಓಡಾಡ್ತ ಇರ್ತಾರೆ. ಆದರೂ, ರಸ್ತೆ ಸರಿ ಮಾಡಬೇಕು ಅಂತ ಅವರಿಗೆ ಅನ್ನಿಸಿಲ್ಲ. ಇದಕ್ಕಿಂತ ದೌರ್ಭಾಗ್ಯ ನಮಗೆ ಇನ್ನೇನಿದೆ”…ಹೀಗಂತ ಆಕ್ರೋಶ ಹೊರ ಹಾಕಿರುವುದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಜನ.
ಹೌದು. ಹಲಗತ್ತಿ ಗ್ರಾಮದ ರಸ್ತೆ ಸಂಪೂರ್ಣವಾಗಿ ಹಾಳಾಗಿ ವರ್ಷಗಳೇ ಕಳೆದಿದೆ. ಆದರೂ, ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಮುಂದಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹಲಗತ್ತಿ ಗ್ರಾಮದ ವಿಜಯಲಕ್ಷ್ಮಿ, “ಈ ರಸ್ತೆಯಲ್ಲಿ ಬೇರೆ ಬೇರೆ ಜಿಲ್ಲೆಯ ವಾಹನಗಳು ಸಂಚಾರ ಮಾಡುತ್ತವೆ. ಇದು ಮುಖ್ಯ ರಸ್ತೆ ಬೆರೆ. ಶಾಸಕರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಎಲೆಕ್ಷನ್ ಬಂದಾಗ ಓಟು ಹಾಕಿಸಿಕೊಳ್ಳುತ್ತಾರೆ. ಆಮೇಲೆ ನಾಪತ್ತೆಯಾಗ್ತಾರೆ. ಜನರು ಪ್ರತಿಭಟನೆ ನಡೆಸಿದಾಗ, ರಸ್ತೆಗೆ ಮಣ್ಣು ಹಾಕಿ ಪ್ಯಾಚ್ ವರ್ಕ್ ಮಾಡ್ತಾರೆ. ಅದು ಮತ್ತೆ ಹಾಳಾಗುತ್ತದೆ. ಹಲವು ವರ್ಷಗಳಿಂದ ಇದುವೇ ಪುನರಾವರ್ತನೆಯಾಗ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಕೊರಿಯರ್ ಕೆಲಸ ಮಾಡುವ ಫಾರೂಕ್ ಜೈನೆಖಾನ ಮಾತನಾಡಿ, “ನಾನು ಕೊರಿಯರ್ ಕೆಲಸ ಮಾಡುತ್ತಿರುವುದರಿಂದ ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಓಡಾಡುವುದೇ ಬಹಳ ತ್ರಾಸದ ಕೆಲಸ” ಎಂದು ತಿಳಿಸಿದ್ದಾರೆ.
“ರಸ್ತೆ ಹಾಳಾಗಿರುವುದರಿಂದ ನಮ್ಮ ವಾಹನಗಳು ಸಹ ಹಾಳಾಗುತ್ತಿವೆ. ನಾವು ಓಟು ಹಾಕಿದ್ದೆಲ್ಲ ವ್ಯರ್ಥವಾಗಿದೆ. ಈ ರಸ್ತೆಯ ಸಮಸ್ಯೆಯ ಕುರಿತು ವಿಡಿಯೋ ಮಾಡಿ, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿದ್ದಲ್ಲದೇ, ಶಾಸಕರು, ಸಂಸದರು ಹಾಗೂ ಪ್ರಧಾನಿಯವರಿಗೂ ಟ್ಯಾಗ್ ಮಾಡಿದ್ದೇನೆ. ಆದರೂ ಈವರೆಗೆ ಯಾರೂ ಕೂಡ ಸ್ಪಂದಿಸಿಲ್ಲ. ನಿಮ್ಮ ಸುದ್ದಿಯನ್ನು ನೋಡಿದ ಮೇಲಾದರೂ ರಸ್ತೆ ದುರಸ್ತಿ ಮಾಡಲಿ” ಎಂದು ಫಾರೂಕ್ ಆಗ್ರಹ ವ್ಯಕ್ತಪಡಿಸಿದ್ದಾರೆ.

ಹಲಗತ್ತಿಯ ಮಾರ್ಗವಾಗಿ ವಿಜಯಪೂರ, ಬಾಗಲಕೋಟೆ, ಧಾರವಾಡ ಮತ್ತು ರಾಮದುರ್ಗ ತಾಲೂಕಿನ ಹಳ್ಳಿಗಳಿಗೆ ದಿನ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಆದರೆ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆಯ ತುಂಬೆಲ್ಲಾ ಗುಂಡಿಗಳೇ ತುಂಬಿ ಹೋಗಿವೆ.
ಇದನ್ನು ಓದಿದ್ದೀರಾ? ಬೇಲೆಕೇರಿ ಅದಿರು ಪ್ರಕರಣ | ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಏಳು ವರ್ಷ ಜೈಲು ಶಿಕ್ಷೆ, 9 ಕೋಟಿ ದಂಡ
ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡಬೇಕಾದರೆ, ವಾಹನ ಸವಾರರು ಹರಸಾಹಸ ಮಾಡಬೇಕಾಗುತ್ತದೆ. ಆದರೆ, ಕೆಲವೊಮ್ಮೆ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುತ್ತಾರೆ. ಮಳೆ ನಂತರ ಮತ್ತೆ ರಸ್ತೆ ಹಾಳಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಆದಷ್ಟು ಬೇಗನೆ ರಾಮದುರ್ಗ ತಾಲೂಕಿನ ಶಾಸಕರಾದ ಅಶೋಕ ಪಟ್ಟಣ ರಸ್ತೆ ದುರಸ್ತಿ ಮಾಡಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಈ ವರದಿಯ ಬಳಿಕ ದುರಸ್ತಿ ಮಾಡುವ ಕಾರ್ಯಕ್ಕೆ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು