ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ಆಯಾಮ ನೀಡಿದ್ದ ಸ್ವಯಂ ಘೋಷಿತ ಹಿಂದೂ ಹೋರಾಟಗಾರ್ತಿ ರಶ್ಮಿ ಸಮಂತ್, ತನ್ನ ಟ್ವಿಟರ್‌ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೊತೆಗಿದ್ದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ಘಟನೆಯನ್ನು ಕಳೆದ ಜು.24ರಂದು ಟ್ವೀಟ್ ಮಾಡಿದ್ದ ಸಂದರ್ಭದಲ್ಲಿ ಉಡುಪಿ ಮೂಲದ ರಶ್ಮಿ ಸಮಂತ್ ಅವರ ಟ್ವಿಟರ್‌ನ ಪ್ರೊಫೈಲ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗಿದ್ದ ಫೋಟೋ ಕೂಡ ಇತ್ತು. ಘಟನೆಗೆ ಹಿಂದೂ-ಮುಸ್ಲಿಂ ಆಯಾಮವನ್ನು ಕೊಟ್ಟಿದ್ದೂ ಅಲ್ಲದೇ, ವಿಡಿಯೋವನ್ನು ಮುಸಲ್ಮಾನರ ವಾಟ್ಸಾಪ್ ಗ್ರೂಪ್‌ಗಳಿಗೆ ಹರಿಬಿಡಲಾಗಿದೆ ಎಂದು ಹಲವು ದಾರಿ ತಪ್ಪಿಸುವ ಸುಳ್ಳು ಮಾಹಿತಿಯನ್ನೂ ಹಂಚಿಕೊಂಡಿದ್ದರು.
ಇದನ್ನು ಓದಿದ್ದೀರಾ? ಉಡುಪಿ ವಿಡಿಯೋ ಪ್ರಕರಣಕ್ಕೆ ಕೋಮು ಆಯಾಮ ಬೆರೆಸಿದ ರಶ್ಮಿ ಸಮಂತ್ ಯಾರು ಗೊತ್ತೆ?
ರಶ್ಮಿಯವರ ಟ್ವೀಟ್ ಅನ್ನು ಗಮನಿಸಿ ಬಿಜೆಪಿ ಮತ್ತು ಸಂಘಪರಿವಾರದವರು ಮಾತನಾಡತೊಡಗಿದರು. ಬಿಜೆಪಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ರಶ್ಮಿಯವರ ಮನೆಗೆ ಪೊಲೀಸರು ಹೋಗಿದ್ದು ಯಾಕೆ ಎಂಬ ಪ್ರಶ್ನೆಯನ್ನೂ ಕೂಡ ಎತ್ತಿದ್ದರು. ಪ್ರಕರಣದ ಬಗ್ಗೆ ಮಾಧ್ಯಮಗಳು ಕೂಡ ಮಾತನಾಡಿದಾಗ, ಅದು ದೇಶಾದ್ಯಂತ ಸುದ್ದಿಯಾಗತೊಡಗಿತು.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ರಶ್ಮಿ ಸಮಂತ್ ಅವರ ಟ್ವಿಟರ್‌ನ ಪ್ರೊಫೈಲ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗಿದ್ದ ಫೋಟೋ ಮಾಯವಾಗಿದೆ. ಆದರೆ ಈ ಫೋಟೋ ಗೂಗಲ್‌ನಲ್ಲಿ ಇನ್ನೂ ಕೂಡ ಲಭ್ಯವಿದೆ.
‘ಯಾಕೆ ಮೇಡಂ ಫೋಟೋ ಡಿಲೀಟ್ ಮಾಡಿದ್ದೀರಿ’ ಎಂದು ಹಲವು ಮಂದಿ ಪ್ರಶ್ನಿಸಿದ್ದರೂ, ಆಕೆಯಿಂದ ಇನ್ನೂ ಉತ್ತರ ಬಂದಿಲ್ಲ. ಆದರೆ ಉಡುಪಿ ಪ್ರಕರಣಕ್ಕೆ ಸಂಬಂಧಿಸಿ ‘ಗೋದಿ ಮೀಡಿಯಾ’ಗಳಲ್ಲಿ ಸಂದರ್ಶನ ಮತ್ತು ತಮ್ಮ ಅನುಮಾನಗಳನ್ನು ತಿಳಿಸುವಲ್ಲಿಯೇ ನಿರತರಾಗಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗಳಾಗಿಯೂ ರಶ್ಮಿ ಸಮಂತ್ ಅವರು ಸುಳ್ಳು ಸುದ್ದಿ ಹರಡಿರುವುದು ಸ್ಪಷ್ಟವಾಗಿದ್ದರೂ ಅವರ ಮೇಲೆ ಯಾಕೆ ದೂರು ದಾಖಲಾಗಿಲ್ಲ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬಂದಿದೆ.