‘ಈದಿನ’ದ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದ ‘ಓದುಗರ ಸಮಾವೇಶ’

Date:

Advertisements

“ಮಹಾಭಾರತದ ಕಾಂಡವ ದಹನದ ಕಥೆ ನೆನಪಾಗುತ್ತಿದೆ. ಅಗ್ನಿ ದೇವರಿಗೆ ಅಜೀರ್ಣವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ಅರ್ಜುನ ಮತ್ತು ಕೃಷ್ಣರು ಕಾಂಡವ ಎಂಬ ಕಾಡಿಗೆ ಬೆಂಕಿ ಇಡುತ್ತಾರೆ. ಕಾಡಿನಲ್ಲಿದ್ದ ಮನುಷ್ಯರು, ಪ್ರಾಣಿ, ಪಕ್ಷಿಗಳು ತಪ್ಪಿಸಿಕೊಳ್ಳದಂತೆ ಕೃಷ್ಣ, ಅರ್ಜುನ ಕಾಯುತ್ತಾರೆ. ಆ ವೇಳೆ ಕಾಡಿನಿಂದ ಹೊರಗೆ ಹೋಗಿದ್ದ ಹಕ್ಕಿಯೊಂದು ವಾಪಸ್ ಬಂದು ಆಘಾತಗೊಳ್ಳುತ್ತದೆ. ತಕ್ಷಣ ಕೊಳದತ್ತ ಹಾರಿ, ನೀರಿನಲ್ಲಿ ಮುಳುಗಿ, ಮತ್ತೆ ಬೆಂಕಿಯತ್ತ ಬಂದು ರೆಕ್ಕೆಗೆ ಮೆತ್ತಿದ ಹನಿಯನ್ನು ಸಿಂಪಡಿಸಿ ಉರಿ ಹಾರಿಸುವ ಪ್ರಯತ್ನ ಮಾಡುತ್ತದೆ. ಮತ್ತೆ ಈ ಕೆಲಸವನ್ನು ಮುಂದುವರಿಸುತ್ತದೆ. ಅದನ್ನು ನೋಡಿದ ಒಬ್ಬಾತ, ‘ಅಯ್ಯೋ ಹಕ್ಕಿ, ಅಷ್ಟು ದೊಡ್ಡ ಬೆಂಕಿಯನ್ನು ನೀನು ಹಾರಿಸಬಲ್ಲೆಯಾ? ಈ ಹುಚ್ಚಾಟವೇಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಹಕ್ಕಿ, ‘ಇಷ್ಟು ವರ್ಷ ಜೀವಿಸಲು ಅವಕಾಶ ಕೊಟ್ಟ ಕಾಡು ಸುಟ್ಟು ಹೋಗುತ್ತಿದೆ. ನನ್ನ ಕೈಲಾದ ಮಟ್ಟಿಗೆ ರಕ್ಷಿಸುತ್ತೇನೆ’ ಎನ್ನುತ್ತದೆ. ಈ ಪಕ್ಷಿಯೇ ಮಹಾಭಾರತ ನಿಜವಾದ ಹಿರೋ. ನನಗೆ ಈದಿನ.ಕಾಮ್ ಈ ಹಕ್ಕಿಯ ರೀತಿ ಕಾಣಿಸುತ್ತಿದೆ. ಸಂವಿಧಾನ ಕಂಡ ಕನಸು ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲಿ, ತಮ್ಮ ರೆಕ್ಕೆಯಲ್ಲಿ ಹಿಡಿದು ಕೊಡಬಹುದಾದಷ್ಟು ನೀರನ್ನು ಹೊತ್ತು ಹೊರಟಿರುವ ಮಾಧ್ಯಮ ಈದಿನ. ಇದಕ್ಕಾಗಿ ನೀವು ಹೆಚ್ಚೇನೂ ಮಾಡಲಾಗದಿದ್ದರೂ ಪ್ರೀತಿಯಿಂದ ಒಮ್ಮೆ ಮೈದಡವಿರಿ..”

ಹೀಗೆ ಬಣ್ಣಿಸಿದ್ದು ನಾಡಿನ ಪ್ರಖರ ರಾಜಕೀಯ ವಿಶ್ಲೇಷಕರೂ, ಅಜೀಂಪ್ರೇಮ್‌ ಜೀ ವಿವಿಯ ಪ್ರಾಧ್ಯಾಪಕರೂ ಆದ ಎ.ನಾರಾಯಣ ಅವರು. ಬೆಂಗಳೂರಿನ ಪುರಭವನದಲ್ಲಿ ನವೆಂಬರ್ 30ರಂದು ನಡೆದ ‘ಈ ದಿನ ಓದುಗರ ಸಮಾವೇಶ’ವು ಇಂತಹ ಹಲವು ಮೆಚ್ಚುಗೆಯ ಮಾತುಗಳಿಂದ ತುಂಬಿ ಹೋಯಿತು.

ರಾಯಚೂರಿನಿಂದ ಬಂದಿದ್ದ ಸಾಮಾನ್ಯ ಓದುಗರೊಬ್ಬರು ಈದಿನದ ಬಳಗದೊಂದಿಗೆ ಮಾತನಾಡುತ್ತಾ, “ಸಿಎಂ ಬರ್ತಾರೆ ಅಂತ ಬಂದಿಲ್ಲ ರೀ, ನಮ್ಮೂರ ಸುದ್ದಿಯೊಂದು ಈ ದಿನದಲ್ಲಿ ಬಂದಿತ್ತು. ಆಮೇಲೆ ಊರಿಗೆ ಅಧಿಕಾರಿಗಳು ಬಂದ್ರು, ಅಭಿವೃದ್ಧಿ ಮಾಡ್ತೀವಿ ಅಂದ್ರು” ಎನ್ನುವುದನ್ನು ನೆನೆದರು.

Advertisements
ಓದುಗರ ಸಮಾವೇಶ 1

ಶಿವಮೊಗ್ಗದ ಕೆ.ಆರ್.ಪುರಂ ಸರ್ಕಾರಿ ಶಾಲೆಯ ನಾಲ್ವರು ಶಿಕ್ಷಕರು (ರಾಮಾಚಾರಿ, ಮಾಲತೇಶ್, ದಾನೇಶ್ವರಿ, ಶೋಭಾ) ರಜೆ ಹಾಕಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದಕ್ಕೊಂದು ವಿಶೇಷ ಕಾರಣವೂ ಇತ್ತು. “14 ಮಕ್ಕಳಷ್ಟೇ ಇದ್ದ ಈ ಶಾಲೆಯಲ್ಲಿ ಈಗ 250ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. 2018ರಲ್ಲಿ ಮುಚ್ಚುವ ಹಂತಕ್ಕೆ ತಲುಪಿತ್ತು. ಆದರೆ ಶಿಕ್ಷಕರ ಇಚ್ಛಾಶಕ್ತಿಯಿಂದಾಗಿ ಅದರ ಸ್ವರೂಪವೇ ಬದಲಾಯಿತು. ಸರ್ಕಾರಿ ಶಾಲೆಗಳೆಂದರೆ ಪ್ರಯೋಜನಕ್ಕೆ ಬಾರದವು ಎಂದು ಬಿಂಬಿಸುವವರ ನಡುವೆ, ಮೊಟ್ಟ ಮೊದಲಿಗೆ ಈದಿನ.ಕಾಮ್‌ ನಮ್ಮ ಶಾಲೆಯ ಬಗ್ಗೆ ಸುದ್ದಿ ಪ್ರಕಟಿಸಿತು. ಅದನ್ನು ನೋಡಿಕೊಂಡು, ವಿವಿಧ ಮಾಧ್ಯಮಗಳು ವರದಿ ಮಾಡಿದವು. ಈ ಕಾರಣಕ್ಕೆ ನಾವು ನಾಲ್ವರು ಶಿಕ್ಷಕರು ರಜೆ ಹಾಕಿ, ಕಾರ್ಯಕ್ರಮಕ್ಕೆ ಬಂದಿದ್ದೇವೆ” ಎಂದು ಪ್ರೀತಿ ತೋರಿದರು.

‘ಓದುಗರ ಸಮಾವೇಶ’ವು ಇಂತಹ ಹಲವಾರು ಓದುಗರ ಪ್ರತಿಸ್ಪಂದನೆಗೆ ಸಾಕ್ಷಿಯಾಯಿತು. ದೂರದ ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಮೈಸೂರು, ತುಮಕೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ- ಹೀಗೆ ರಾಜ್ಯದ ಮೂಲೆಮೂಲೆಗಳಿಂದಲೂ ಆಗಮಿಸಿದ್ದ ಜನರಿಂದಾಗಿ ಸಭಾಂಗಣ ಕಿಕ್ಕಿರಿದು ತುಂಬಿತ್ತು. ‘ಇದು ನಮ್ಮ ಮಾಧ್ಯಮ’ ಎಂಬ ಪ್ರೀತಿ, ‘ತಪ್ಪು ನಡೆಯದಿರಿ ಎಂಬ ಎಚ್ಚರಿಕೆ’ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ರಾತ್ರಿಯೆಲ್ಲ ಪ್ರಯಾಣಿಸಿ, ರಾಜಧಾನಿ ತಲುಪಿದ್ದ ಅವರೊಳಗೆ ಈದಿನದ ಮೇಲಿರುವ ಗೌರವ, ಅಭಿಮಾನ ನೋಡಿ ತಂಡದ ಜವಾಬ್ದಾರಿ ಹೆಚ್ಚಿತು.

ಓದುಗರ ಸಮಾವೇಶ 2

ಓದುಗರೊಂದಿಗೆ ಮುಖಾಮುಖಿಯಾಗುವ ಧೈರ್ಯವನ್ನು ಮುಖ್ಯವಾಹಿನಿ ಮಾಧ್ಯಮಗಳು ಕಳೆದುಕೊಂಡ ಈ ಕಾಲಘಟ್ಟದಲ್ಲಿ ಮಾಧ್ಯಮ ಸಂಸ್ಥೆಯೊಂದು ‘ಓದುಗರ ಸಮಾವೇಶ’ ಹಮ್ಮಿಕೊಂಡಿರುವುದೇ ಮಹತ್ವದ ವಿದ್ಯಮಾನ ಎಂದು ಓದುಗರೊಬ್ಬರು ಹೊಗಳಿದರು.

ಪ್ರಾತಿನಿಧಿಕವಾಗಿ ಐವರು ಓದುಗರು ವೇದಿಕೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರೂ, ಈದಿನ ತಂಡದೊಂದಿಗೆ ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕವೂ ತಮ್ಮ ಅಭಿಪ್ರಾಯ ತಿಳಿಸಿದವರ ಸಂಖ್ಯೆ ದೊಡ್ಡದಿದೆ.

ಮಾಧ್ಯಮವೊಂದರ ವಿಶ್ವಾಸಾರ್ಹತೆ ಬೆಳೆಯುವುದೇ ಹೀಗೆ. ಸಮುದಾಯದ ಜೊತೆ ಬೆರೆತ, ಅವರ ನೋವುಗಳಿಗೆ ಕಿವಿಯಾದ ‘ಈದಿನ’ ಹುಟ್ಟಿ ಎರಡು ವರ್ಷ ಪೂರೈಸಿದ ಈ ಹೊತ್ತಿನ ತುರ್ತುಗಳನ್ನು ಈದಿನ ಸಮುದಾಯ ಬಳಗದ ಮುಖಸ್ಥರಾದ ಡಾ.ವಾಸು ಹೆಚ್.ವಿ. ಓದುಗರ ಮುಂದಿಟ್ಟರು.

‘ನಮ್ಮದು ಪಕ್ಷಪಾತಿ ಮಾಧ್ಯಮ. ನಾವು ಈ ದೇಶದ ಬಹುಸಂಖ್ಯಾತ ನೊಂದ ಸಮುದಾಯಗಳ ಪರ, ದೂಷಣೆಗೆ ಒಳಗಾದ ಅಲ್ಪಸಂಖ್ಯಾತರ ಪರ, ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳ ಪರ..’ ಎಂದು ಸ್ಪಷ್ಟವಾಗಿ ಘೋಷಿಸಿದರು.

ಓದುಗರ ಸಮಾವೇಶ 4

‘ಪತ್ರಿಕಾ ಕ್ಷೇತ್ರವನ್ನು ನಾಲ್ಕನೇ ಅಂಗ ಎನ್ನುತ್ತಾರೆ. ಅದನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೂ ಕರೆಯುತ್ತಾರೆ. ಆದರೆ ಅವುಗಳು ಸಾಕುನಾಯಿಗಳಾಗಿ ಬದಲಾದವು. ಮಡಿಲ ಮಾಧ್ಯಮ (ಗೋದಿ ಮೀಡಿಯಾ) ಎಂಬ ಮಾತು ಚಾಲ್ತಿಗೆ ಬಂತು. ಆದರೆ ಈಗ ಮಾಧ್ಯಮಗಳು ಸಾಕು ನಾಯಿಯೂ ಆಗಿಲ್ಲ, ಬೇಟೆ ನಾಯಿಗಳಾಗಿ ಬದಲಾಗಿವೆ. ದೆಹಲಿಯಲ್ಲಿ ರೈತರು ಪ್ರತಿಭಟನೆ ಕೂತಿದ್ದಾಗ, ಅವರ ಮೇಲೆ ಟ್ಯಾಂಕರ್ ಹರಿಸಬೇಕು ಎಂದು ನ್ಯೂಸ್ ರೂಮ್‌ನಿಂದ ಕರೆ ಕೊಡಲಾಯಿತು, ಕೋವಿಡ್ ಸಮಯದಲ್ಲಿ ವ್ಯಾಪಾರ ಮಾಡಲು ಹೋದ ಬಡವರಿಗೆ ಬಿಸಿಬಿಸಿ ಕಜ್ಜಾಯ ಕೊಡಬೇಕು ಎಂದು ಮಾಧ್ಯಮಗಳಿಂದ ಠರಾವು ಬಂತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಾಧ್ಯಮಗಳು ಪ್ರಭುತ್ವದ ಮುಖಗಳಾದಾಗ, ಜನಸಂಘಟನೆಗಳು ಸೇರಿ ಕಟ್ಟಿದ, ಜನರೇ ರೂಪಿಸಿದ ಮಾಧ್ಯಮ ‘ಈದಿನ’, ಅದು ಹುಟ್ಟಿಕೊಳ್ಳಲು ಇದ್ದ ಸಂದಿಗ್ಧ ಪರಿಸ್ಥಿತಿಯನ್ನು ವಾಸು ಅವರು ಮನದಟ್ಟು ಮಾಡಿಸಿದರು. ಈದಿನದ ಸೈದ್ಧಾಂತಿಕ ಬದ್ಧತೆಯನ್ನು, ಕೋಮುವಾದದ ಬಗ್ಗೆ ಇರುವ ಸ್ಪಷ್ಟ ವಿರೋಧವನ್ನು, ತಳಸಮುದಾಯಗಳತ್ತ ಪಕ್ಷಪಾತಿಯಾಗಿರುವುದನ್ನು ಗಟ್ಟಿ ದನಿಯಲ್ಲಿ ಹೇಳಿದರು.

‘ಸರ್ಕಾರದ ವಿರುದ್ಧ ಕಟುವಾಗಿಯೂ ಬರೆದಿದ್ದೇವೆ, ಗ್ಯಾರಂಟಿಗಳಂತಹ ಕಲ್ಯಾಣ ಕಾರ್ಯಕ್ರಮಗಳ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದ್ದಾಗ, ಗ್ಯಾರಂಟಿಗಳ ಪರ ನಾವು ಕ್ಯಾಂಪೇನ್ ಮಾಡಿದ್ದೇವೆ. ಆ ಕಾರಣಕ್ಕೆ ನಮ್ಮ ವಿರುದ್ಧವೂ ಕ್ಯಾಂಪೇನ್ ನಡೆದಿದೆ’ ಎಂದು ನೆನೆದರು.

ಓದುಗರ ಸಮಾವೇಶ 8

ಅರುಣ್, ಜಂಬೆ ಬಾಲು ಮತ್ತು ಇಂಡಿಯನ್ ಫೋಕ್ ಬ್ಯಾಂಡ್ ತಂಡ ಆರಂಭದಲ್ಲಿ ನಡೆಸಿಕೊಂಡ ಸಂಗೀತ ಕಾರ್ಯಕ್ರಮವೂ ಇಡೀ ಈದಿನದ ಆಶಯವನ್ನು ಪ್ರತಿನಿಧಿಸುವ ಹಾಡುಗಳಿಂದ ತುಂಬಿತ್ತು. ಚಿಂತನ್ ವಿಕಾಸ್ ಅವರ ತಂಡ ರಾಗ ಸಂಯೋಜನೆ ಮಾಡಿ ಹಾಡಿರುವ ಭಾರತ ಸಂವಿಧಾನ ಪೀಠಿಕೆಯ ನಿನಾದ ಸಭಾಂಗಣದಲ್ಲಿ ಆಗಾಗ್ಗೆ ಮೊಳಗುತ್ತಿತ್ತು ಮತ್ತು ಭಾಷಣ ಮಾಡಿದವರ ಮಾತುಗಳಲ್ಲೂ ಸಂವಿಧಾನ ಆಶಯ ವ್ಯಕ್ತವಾಗುತ್ತಿತ್ತು.

ಮಾಸ್‌ ಮೀಡಿಯಾ ಫೌಂಡೇಷನ್‌ನ ಕಾರ್ಯದರ್ಶಿ ಹಾಗೂ ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರಾಗಿರುವ ಯು.ಎಚ್‌.ಉಮರ್ ಸ್ವಾಗತ ಭಾಷಣ ಮಾಡಿ, ಅತಿಥಿಗಳನ್ನು ಪರಿಚಯಿಸಿದರು. ಪ್ರಭುತ್ವಕ್ಕೆ ನಡುಕ ಹುಟ್ಟಿಸಿ, ಅದರ ದ್ವೇಷಕ್ಕೂ ಗುರಿಯಾದ ‘ದಿ ವೈರ್’ ಡಿಜಿಟಲ್ ಮಾಧ್ಯಮದ ಸಂಪಾದಕಿ ಸೀಮಾ ಚಿಸ್ತಿ, ಆದಿವಾಸಿ ಮತ್ತು ನೊಂದ ಸಮುದಾಯಗಳ ಹೆಣ್ಣುಮಕ್ಕಳೇ ನಡೆಸುತ್ತಿರುವ ಅಪರೂಪದ ಮಾಧ್ಯಮ ಚಂಬಲ್ ಮೀಡಿಯಾದ (ಖಬರ್ ಲೆಹರಿಯಾ) ನಿರ್ದೇಶಕಿ ಪ್ರಿಯಾ ತುವಸ್ಸೆರಿ, ಅವರೊಟ್ಟಿಗೆ ಓದುಗ ಪ್ರತಿನಿಧಿಗಳಾದ ತುಮಕೂರಿನ ಇಂದಿರಮ್ಮ, ವಿಜಯಪುರದ ಭುವನೇಶ್ವರಿ ಕಾಂಬ್ಳೆ, ಕುಂದಾಪುರದ ಸುಶೀಲ ನಾಡಾ, ಯಾದಗಿರಿಯ ವಿಶ್ವನಾಟೇಕರ್, ಮೈಸೂರಿನ ಅಸಾದುಲ್ಲಾ, ಧಾರವಾಡದ ಸಿ.ಜಿ.ಪಾಟೀಲ್‌ ವೇದಿಕೆಯಲ್ಲಿದ್ದರು. ಈದಿನ ಸಂಪಾದಕರಾದ ಬಸವರಾಜು ಮೇಗಲಕೇರಿ, ಕನ್ಸಲ್ಟಿಂಗ್ ಎಡಿಟರ್ ಡಿ.ಉಮಾಪತಿ ಮತ್ತು ಮಾಸ್ ಮೀಡಿಯಾ ಫೌಂಡೇಶನ್‌ನ ಅಧ್ಯಕ್ಷರಾದ ಗುರುಪ್ರಸಾದ್ ಕೆರಗೋಡು ಹಾಗೂ ಈದಿನದ ಗವರ್ನಿಂಗ್ ಕೌನ್ಸಿಲ್ ಸದಸ್ಯರು ಹಾಜರಿದ್ದರು.

ಓದುಗರ ಅನಿಸಿಕೆ, ಅತಿಥಿಗಳ ಭಾಷಣ, ಎ.ನಾರಾಯಣ ಅವರ ವಿಶೇಷ ಉಪನ್ಯಾಸ ಮತ್ತು ಅಧ್ಯಕ್ಷತೆ ವಹಿಸಿದ್ದ ಪ್ರೊ.ಸಬಿಹಾ ಭೂಮಿಗೌಡ ಅವರ ಮಾತುಗಳವರೆಗೂ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಜರಿದ್ದದ್ದು ಓದುಗರಿಗೆ ವಿಶೇಷವೂ, ಸೋಜಿಗವೂ ಅನಿಸಿತು.

ಓದುಗರ ಸಮಾವೇಶ 5

ಭವಿಷ್ಯದ ಪೀಳಿಗೆಗೆ ಹಸ್ತಾಂತರ

ಕಳೆದ ಐವತ್ತು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಕಂಡಿರುವ ಪಲ್ಲಟ, ಸಾಧನೆ, ವೈಫಲ್ಯ, ಮುಂದೆ ಇಡಬೇಕಾದ ಹೆಜ್ಜೆಗಳನ್ನು ದಾಖಲಿಸಿ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ… ಮುಂದಿನ ದಿಕ್ಕು’ ಹೆಸರಲ್ಲಿ ಈದಿನ ಹೊರತಂದಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆಗೊಳಿಸಿದರು. ಪ್ರತಿಗಳನ್ನು ಪುಟಾಣಿ ಮಕ್ಕಳ ಕೈಗೆ ಹಸ್ತಾಂತರಿಸಿದ್ದು ಈದಿನದ ಒಟ್ಟು ಆಶಯವನ್ನು ಪ್ರತಿಬಿಂಬಿಸಿತು. ಮುಂದಿನ ಪೀಳಿಗೆಯು ಈ ನಾಡಿನ ಸೌಹಾರ್ದತೆ, ಸಮತೆಯ ತೇರನ್ನು ಎಳೆಯಬೇಕೆಂಬ ದೂರದೃಷ್ಟಿಯನ್ನು ಈ ಸಂದರ್ಭ ಸಂಕೇತಿಸಿತು.

ಓದುಗರ ಮನದಾಳದ ಮಾತುಗಳು

ಇಂದಿರಮ್ಮ ಮಾತನಾಡಿ, ‘ಮುಖ್ಯವಾಹಿನಿ ಮಾಧ್ಯಮಗಳು ಭ್ರಮೆಗಳನ್ನು ಹುಟ್ಟಿಸುತ್ತಿವೆ, ಹಿಂಸೆಯನ್ನು ಪ್ರಚಾರ ಮಾಡುತ್ತಿವೆ, ಸುಳ್ಳುಗಳನ್ನು ಬಿತ್ತಿರಿಸಿ ಸಮಾಜದ ಸ್ವಾಸ್ಥ್ಯ ಕದಡುತ್ತಿವೆ. ಪರ್ಯಾಯ ಮಾಧ್ಯಮ ಬೇಕೆಂದು ಅನಿಸುತ್ತಿರುವಾಗ ಹುಟ್ಟಿದ್ದೇ ಈದಿನ’ ಎಂದು ಅಭಿಪ್ರಾಯಪಟ್ಟರು.

ಧಾರವಾಡದ ಸಿ.ಜಿ.ಪಾಟೀಲ್ ಮಾತನಾಡಿ, ‘ದ್ವೇಷ ರಾರಾಜಿಸುವಾಗ ಈದಿನ.ಕಾಮ್ ಮರುಭೂಮಿಯಲ್ಲಿ ಓಯಾಸಿಸ್ ಥರ ಹುಟ್ಟಿಕೊಂಡಿತು’ ಎಂದ ಬಣ್ಣಿಸಿದರು. ‘ನ್ಯೂಸ್ ಚಾನೆಲ್‌ಗಳನ್ನು ನೋಡುವುದನ್ನೇ ಬಿಟ್ಟಿದ್ದೆ. ಆದರೆ ಈದಿನ ಬಂದ ಮೇಲೆ ಸುದ್ದಿಗಳನ್ನು ಗಮನಿಸುತ್ತಿದ್ದೇನೆ’ ಎಂದು ಖುಷಿ ಹಂಚಿಕೊಂಡರು.

ಓದುಗರ ಸಮಾವೇಶ 3

ಕುಂದಾಪುರದ ಸುಶೀಲ ನಾಡಾ ಮಾತನಾಡಿ, ‘ನಿಜವಾದ ಸಮಸ್ಯೆಗಳನ್ನು ಮಾಧ್ಯಮಗಳು ಫೋಕಸ್ ಮಾಡುವುದಿಲ್ಲ. ಈದಿನ.ಕಾಂ ಜನರ ಸಮಸ್ಯೆಗಳನ್ನು ವರದಿ ಮಾಡುತ್ತಿದೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿಸಿದರು.

ವಿಜಯಪುರದ ಡಾ.ಭುವನೇಶ್ವರಿ ಮಾತನಾಡಿ, ‘ಎದ್ದೇಳು ಕರ್ನಾಟಕ ಚಳವಳಿ ಮೂಲಕ ಈದಿನ ಪರಿಚಯವಾಯಿತು. ಗಡಿ ಜಿಲ್ಲೆಯವರೆಗೂ ಈ ಮಾಧ್ಯಮ ತಲುಪಿದೆ. ನಮ್ಮ ಸಮಸ್ಯೆಗಳನ್ನು ಈದಿನದಲ್ಲಿ ಬರೆದು ಪ್ರಕಟಿಸಿದ್ದೇನೆ. ಇದು ನಮ್ಮ ಮಾಧ್ಯಮ’ ಎಂದರು.

ಮೈಸೂರಿನ ಅಸಾದುಲ್ಲಾ ಮಾತನಾಡಿ, ‘ವಿಧಾನಸಭೆ ಚುನಾವಣೆ ವೇಳೆ ಈದಿನ.ಕಾಂ ಸಮೀಕ್ಷೆಯೊಂದನ್ನು ಮುಂದಿಟ್ಟಿತ್ತು. ಅನೇಕರು ಅಪಹಾಸ್ಯವನ್ನೂ ಮಾಡಿದ್ದರು. ಆದರೆ ಈದಿನ ಸಮೀಕ್ಷೆ ಹೇಳಿದ್ದೇ ಸತ್ಯವಾಯಿತು. ಈ ಮಾಧ್ಯಮ ಜನರ ಮಧ್ಯದಲ್ಲಿ ಹೋಗಿ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಓದುಗರ ಸಮಾವೇಶ 6

ಪತ್ರಕರ್ತೆಯರ ದಿಟ್ಟ ನುಡಿಗಳು

ಪತ್ರಕರ್ತೆ ಸೀಮಾ ಚಿಸ್ತಿ ಮಾತನಾಡಿ, ‘ಪ್ರಜಾಪ್ರಭುತ್ವದ ಆಧಾರಸ್ತಂಭ ಮೀಡಿಯಾ ಎಂಬುದು ಈಗ ಜೋಕ್ ಆಗಿದೆ. ಆದರೆ ಮಾಧ್ಯಮಗಳು ಅಗತ್ಯವಿದ್ದು, ಸ್ವತಂತ್ರ ಮಾಧ್ಯಮಗಳು ಅಸ್ತಿತ್ವ ಉಳಿಸಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಸಾವಿರಾರು ಪತ್ರಿಕೆಗಳು ಭಾರತದಲ್ಲಿವೆ. ಮುನ್ನೂರಕ್ಕೂ ಹೆಚ್ಚು ಮಾಧ್ಯಮಗಳಿವೆ. ಆದರೆ ವರ್ಡ್ ಪ್ರೆಸ್ ಫ್ರೀಡಂ ಇಂಡೆಕ್ಸ್‌ನಲ್ಲಿ 180 ರಾಷ್ಟ್ರಗಳ ಪೈಕಿ ಕೊನೆಯ 21 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಪರ್ಯಾಯ ಮಾಧ್ಯಮಗಳು ಹುಟ್ಟಿಕೊಂಡವು. ಈ ಹತ್ತು ವರ್ಷಗಳು ಪರೀಕ್ಷೆಯ ಕಾಲವಾಗಿತ್ತು. ಪ್ರಧಾನಿ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಲಿಲ್ಲ. ಕೋವಿಡ್ ಸಂದರ್ಭದಲ್ಲಿ ವಿವಿಧ ದೇಶದ ಪ್ರಧಾನಿಗಳು, ಅಧ್ಯಕ್ಷರು ಪತ್ರಕರ್ತರ ಪ್ರಶ್ನೆಗಳಿಗೆ ಎದುರಾದರು. ಮೋದಿಯವರು ಆ ವೇಳೆಯೂ ಮಾಧ್ಯಮಗಳ ಮುಂದೆ ಬರಲಿಲ್ಲ ಎಂದು ಕುಟುಕಿದರು.

ಓದುಗರ ಸಮಾವೇಶ 7

ಚಂಬಲ್ ಮೀಡಿಯಾದ ಪ್ರಿಯಾ ತುವಸ್ಸೆರಿ ಮಾತನಾಡಿ, ‘ಕೆಲವೇ ಕೆಲವು ಪತ್ರಕರ್ತರು ಮಾತ್ರ ಗ್ರಾಮೀಣ ಬಿಕ್ಕಟ್ಟುಗಳ ಕುರಿತು ಮಾತನಾಡುತ್ತಿದ್ದಾರೆ. ಮುಖ್ಯವಾಹಿನಿಗಳು ಗ್ರಾಮೀಣ ಪ್ರಾತಿನಿಧ್ಯವನ್ನು ಕಡೆಗಣಿಸಿವೆ. ನಮ್ಮ ಖಬರ್ ಲಹೇರಿಯ ಅಲಕ್ಷಿತ ಗ್ರಾಮೀಣ ಸಮುದಾಯಗಳನ್ನು ಫೋಕಸ್ ಮಾಡಿತು’ ಎಂದರು.  ಮಹಿಳೆಯರೇ ಮುನ್ನಡೆಸುತ್ತಿರುವ ಈ ಮಾಧ್ಯಮದ ಕುರಿತ ವಿಡಿಯೊವನ್ನು ಪ್ರದರ್ಶಿಸಿದರು.

ಕರ್ನಾಟಕ ಎಂಬ ಹೆಸರಿಟ್ಟು 50 ವರ್ಷಗಳಾದ ಹಿನ್ನೆಲೆಯಲ್ಲಿ ‘ಐವತ್ತು ವರ್ಷಗಳಲ್ಲಿನ ಕರ್ನಾಟಕದ ರಾಜಕಾರಣ’ ಕುರಿತು ಉಪನ್ಯಾಸ ನೀಡಿದ ಪ್ರೊ.ಎ.ನಾರಾಯಣ ಅವರು, ‘1973ರಿಂದ ಮುಂದಿನ ಹದಿನೈದು ವರ್ಷಗಳಲ್ಲಿ ನಡೆದ ಘಟನಾವಳಿಗಳು, ನಂತರದ 35 ವರ್ಷಗಳ ಚರಿತ್ರೆಯನ್ನು ರೂಪಿಸಿದವು. ಮೊದಲ ಹದಿನೈದು ವರ್ಷಗಳ ಘಟ್ಟದಲ್ಲಿ ದೇವರಾಜ ಅರಸು ಅವರ ಆಡಳಿತ ಬಹಳ ಪ್ರಮುಖವಾಗಿದೆ. ಯಾಕೆಂದರೆ ಆ ಅವಧಿಯಲ್ಲಿ ಸಾಮಾಜಿಕ ಪರಿವರ್ತನೆಗಳು ನಡೆದವು” ಎಂದು ವಿಶ್ಲೇಷಿಸಿದರು.

ಸಿಎಂ ಸಿದ್ದರಾಮಯ್ಯನವರು ಮಾತನಾಡಿ, “ಇಂದು ಡಿಜಿಟಲ್ ಮಾಧ್ಯಮಗಳು ಹೆಚ್ಚು ಸತ್ಯವನ್ನು ಹೇಳುತ್ತಿವೆ” ಎಂದಿದ್ದು ಈದಿನದಂತಹ ಪರ್ಯಾಯ ಮಾಧ್ಯಮಗಳ ಅಗತ್ಯತೆಯನ್ನು ಸಾರಿತು.

ಇದನ್ನೂ ಓದಿರಿ: ಟಿವಿ, ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ, ಡಿಜಿಟಲ್ ಮಾಧ್ಯಮಗಳು ಹೆಚ್ಚು ಸತ್ಯ ಹೇಳುತ್ತಿವೆ: ಸಿಎಂ ಸಿದ್ದರಾಮಯ್ಯ

ವಿಶೇಷ ಸಂಚಿಕೆಗೆ ಕಾತರ

ಬೃಹತ್ ಗಾತ್ರದ ವಿಶೇಷ ಸಂಚಿಕೆಯನ್ನು ನೋಡಿದ ಅನೇಕ ಓದುಗರು, “ಇಂದೇ ಏಕೆ ನಮಗೆ ಸಂಚಿಕೆಯನ್ನು ತಲುಪಿಸಲು ಆಗುತ್ತಿಲ್ಲ? ಸಮಾವೇಶದಲ್ಲಿ ಇದೊಂದು ಕೊರತೆ ಅನಿಸಿತು. ಡಿಸೆಂಬರ್ 29ಕ್ಕೆ ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದೀರಿ. ಕಾಯುತ್ತಿದ್ದೇವೆ” ಎಂದು ತಿಳಿಸಿದರು.

ಕಳೆದೊಂದು ದಶಕದಿಂದ ಸದ್ದಿಲ್ಲದೇ ನಡೆಯುತ್ತಿರುವ ಚಳವಳಿಯೇ- ಮುಖ್ಯವಾಹಿನಿ ಮಾಧ್ಯಮ ವಿರೋಧಿ ಮತ್ತು ಪರ್ಯಾಯ ಮಾಧ್ಯಮ ಕಟ್ಟುವ ಚಳವಳಿ. ಜನರೇ ಮಾಧ್ಯಮಗಳಾದ ಕಾಲಘಟ್ಟದಲ್ಲಿ, ಜನರೇ ಕಟ್ಟಿಕೊಂಡ ಮಾಧ್ಯಮಗಳ ಪೈಕಿ ಈದಿನವೂ ಒಂದು. ಇದಕ್ಕೆ ಸಮುದಾಯಗಳ ನಾಡಿಮಿಡಿತದ ಅರಿವಿದೆ, ನೊಂದ ಜನರ ದನಿ ಇದೆ, ಕೊಲ್ಲುವ ಜನರ ಬಗ್ಗೆ ಕಾಠಿಣ್ಯವಿದೆ, ಸಮಸಮಾಜ ಕಟ್ಟುವ ತುಡಿತವಿದೆ, ಸತ್ಯ ನ್ಯಾಯ ಪ್ರೀತಿಯ ಸ್ಪರ್ಶವಿದೆ ಎಂಬುದನ್ನು ಢಾಳಾಗಿ ಕಾಣಿಸಿದ್ದು ‘ಓದುಗರ ಸಮಾವೇಶ’. ಈದಿನದ ಜವಾಬ್ದಾರಿಯನ್ನು ಈ ಕಾರ್ಯಕ್ರಮವು ಮತ್ತಷ್ಟು ಹೆಚ್ಚಿಸಿದೆ.

WhatsApp Image 2024 12 04 at 9.04.54 PM 2
WhatsApp Image 2024 12 04 at 9.04.54 PM 3
WhatsApp Image 2024 12 04 at 9.55.56 PM
WhatsApp Image 2024 12 04 at 9.04.54 PM 1
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. 30ನವೆಂಬರ್ ಕಾರ್ಯ ಅದ್ಭುತ.
    ನಿಮ್ಮ ಸಾಮಾಜಿಕ ಕಳಕಳಿ. ನೊಂದವರ ಧ್ವನಿ. ತುಳಿತಕ್ಕೊಳಗಾದವರ. ದುರ್ಬಲರ. ಅಸಹಾಯಕರ. ಮಹಿಳೆಯರಪರ. ದೀನದಲಿತರ ಪರ. ಅಶೃಷ್ಯರಪರ. ನಿಮ್ಮ ನಿಲುವು. ಬದ್ಧತೆ. ಯಾವ ಕಾಲಕ್ಕೂ ಬದಲಾಗದಿರಲಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ.
    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X