ಅಲ್ಪಸಂಖ್ಯಾತರ ಸಮುದಾಯದ ಪಿಎಚ್‌ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುವ ಸಂಶೋಧನಾರ್ಥಿಗಳಿಗೆ ಪ್ರತಿ ವರ್ಷ ನೀಡುವ ಫೆಲೋಶಿಪ್ ಹಣ ಕಡಿತಗೊಳಿಸಿದ್ದನ್ನು ಖಂಡಿಸಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.
2019 ಮತ್ತು 2020ರಲ್ಲಿ ಪಿಎಚ್ ಡಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಎಂಫಿಲ್ ಅಭ್ಯರ್ಥಿಗಳಿಗೆ ಎರಡು ವರ್ಷಕ್ಕೆ ಪ್ರತಿ ತಿಂಗಳು 25 ಸಾವಿರ ರೂ.ಗಳನ್ನು ಜೆಆರ್‌ಎಫ್ ಮಾದರಿಯಲ್ಲಿ ನೀಡಲಾಗುತ್ತಿತ್ತು. ಹತ್ತು ಸಾವಿರ ನಿರ್ವಹಣಾ ವೆಚ್ಚವಾಗಿ ಭರಿಸಲಾಗುತ್ತಿತ್ತು. ಆದರೆ, ಈ ಬಾರಿ ಹಿಂದೆ ನೀಡಿದ ಫೆಲೋಶಿಪ್‌ಗಿಂತ ತುಂಬಾ ಕಡಿಮೆ ನೀಡುತ್ತಿರುವುದನ್ನು ಸರ್ಕಾರದ ಆದೇಶದಲ್ಲಿ ನೋಡಬಹುದು.
ಅಂದರೆ, 28.06.2022, 05.08.2022ರ ಆದೇಶದ ಅನ್ವಯ, 2022–23ನೇ ಸಾಲಿನಿಂದ ಜಾರಿಗೆ ಬರುವಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಪಿಎಚ್‌ಡಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಅವಧಿಗೆ ಮತ್ತು ಎಂಫಿಲ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಎರಡು ವರ್ಷದ ಅವಧಿಗೆ ಒಂದು ಕೋರ್ಸ್ ಗೆ ಒಂದು ಬಾರಿ ಮಾತ್ರ ಪ್ರತಿ ತಿಂಗಳು 10 ಸಾವಿರಗಳನನು ಜೆಆರ್‌ಎಫ್ ಮಾದರಿಯಲ್ಲಿ ಫೆಲೋಶಿಪ್ ನೀಡಲು ಸರ್ಕಾರ ಆದೇಶಿಸಿದ್ದು ಇದು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂದು ಅವರು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಮೊದಲು ನೀಡುತ್ತಿದ್ದ 25 ಸಾವಿರ ಅಭ್ಯರ್ಥಿಗಳಿಗೆ ಸಾಕಾಗುತ್ತಿರಲಿಲ್ಲ. ಅಂಥದರಲ್ಲಿ ಎರಡು ವರ್ಷಗಳಿಗೆ 10 ಸಾವಿರ ನೀಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಮಾದರಿಯಾಗಿದೆ. ಆದರೆ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಬದಲು ಅನುದಾನ ಕಡಿತಗೊಳಿಸುತ್ತಿರುವುದು ಸಮರ್ಥನೀಯವಲ್ಲ.
ಕಳೆದ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಪಸಂಖ್ಯಾತರು ಅದರಲ್ಲಿ ಮುಸ್ಲಿಮರೇ ನಿರ್ಣಯಕ ಪಾತ್ರ ವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದನ್ನು ರಾಜ್ಯದ ಜನರಿಗೆ ಗೊತ್ತಿರುವಂತಹದ್ದು ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಈ ಹಿಂದೆ ನೀಡುತ್ತಿದ್ದ 25 ಸಾವಿರ ನೀಡುತ್ತಿದ್ದ ಮೊತ್ತ 30 ಸಾವಿರ ಹೆಚ್ಚಿಸಿ ನಿರ್ವಾಹಣ ವೆಚ್ಚ 10 ಸಾವಿರ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಜೀಜ್ ಜಾಗೀರ್ದಾರ್, ಜಿ ಅಂಬರೀಶ್, ನಿರಂಜನ್ ಕುಮಾರ್, ವೆಂಕಟೇಶ್, ವಿನಯ್ ಕುಮಾರ್, ಲಕ್ಷ್ಮಣ್ ಇದ್ದರು.