ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಲಿಂಗಾಯತ ಸಮುದಾಯದ ಎಲ್ಲ 102 ಒಳಪಂಡಗಳಿಗೆ (ವೀರಶೈವ ಸೇರಿ) ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಪುನಃ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಲಿಂಗಾಯತ ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ.
ಬೀದರ್‌ನಲ್ಲಿ ಬೆಂಗಳೂರಿನ ಕುಂಬಳಗೂಡು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ʼ12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಹಾಗೂ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಕಳೆದ 3 ದಶಕಗಳಿಂದ ಲಿಂಗಾಯತ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಣೆಗೆ ಮುಂದಾಗುತ್ತಿಲ್ಲʼ ಎಂದರು.
ʼ2017ರಲ್ಲಿ ಲಿಂಗಾಯತರ ಹೋರಾಟಕ್ಕೆ ಮಣಿದು ನೀವೇ (ಸಿದ್ದರಾಮಯ್ಯನವರು) ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನದಾಸ ನೇತೃತ್ವದಲ್ಲಿ 7 ಜನ ತಜ್ಞರ ನಿಯೋಗ ರಚಿಸಿದ್ದೀರಿ. ಅದೇ ವರದಿ ಆಧರಿಸಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಮತ್ತು ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತರ ಸೌಲಭ್ಯ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದೀರಿ. ಆದರೆ ತಾವು ಕಳುಹಿಸಿದ ಶಿಫಾರಸು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು ವಾಪಸ್ ಕಳಿಹಿಸಿತುʼ ಎಂದರು.
ಈ ಹಿನ್ನಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಿದ್ದಪಿಡಿಸಿದ ಪ್ರಸ್ತಾವನೆಯನ್ನು ಮರು ಪರಿಶೀಲಿಸಿ, ಸೂಕ್ತ ಆಧಾರ ಹಾಗೂ ತಿದ್ದುಪಡಿಗಳೊಂದಿಗೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕುʼ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ವ್ಯಕ್ತಿ ಸಾವು
ಈ ಸಂದರ್ಭದಲ್ಲಿ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಹಾಗೂ ಪ್ರಮುಖರಾದ ಶಿವರಾಜ ಪಾಟೀಲ್ ಅತಿವಾಳ, ಸತ್ಯದೇವಿ ಮಾತಾಜಿ, ಡಾ.ಮಹೇಶ ಬಿರಾದರ್, ರಮೇಶ ಬಿರಾದರ್, ರವಿಕಾಂತ್ ಬಿರಾದರ್, ಬಿ.ವಿ.ಜಗದೀಶ್ವರ, ಶಿವಶರಣಪ್ಪಾ ಪಾಟೀಲ್ ಸೇರಿದಂತೆ ಇತರರಿದ್ದರು.