ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

Date:

Advertisements

ಕಂದಾಯ ಇಲಾಖೆ ಕೆಲಸ ಎಂದರೆ ರೈತರು ಬೆಚ್ಚಿಬೀಳುತ್ತಾರೆ. ಸಕಾಲದಡಿ ಇಂತಿಷ್ಟೇ ಅವಧಿಯಲ್ಲಿ ಕೆಲಸಗಳನ್ನು ಮಾಡಿಕೊಡಬೇಕು ಎನ್ನುವ ನಿಯಮವಿದ್ದರೂ, ಇಲಾಖೆಯಲ್ಲಿ ಒಂದು ಖಾತೆ ಬದಲಾವಣೆಗೆ ವರ್ಷಗಳು ತೆಗೆದುಕೊಳ್ಳುತ್ತಾರೆ. ಸಣ್ಣಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ನಾಡಕಚೇರಿ, ತಹಶೀಲ್ದಾರ್ ಕಚೇರಿ ಸುತ್ತುವಂತೆ ಮಾಡುತ್ತಾರೆ. ಕಂದಾಯ ಇಲಾಖೆಯ ಕರ್ಮಕಾಂಡಗಳ ಬಗೆಗಿನ ಈ ದಿನ ವಿಶೇಷ ಸರಣಿಯ ಮೊದಲ ಕಂತು ಇಲ್ಲಿದೆ.

ಘಟನೆ 1: ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆಯ ವೆಂಕಟಪ್ಪನಿಗೆ ಇರುವುದು ಎರಡು ಎಕರೆ ಜಮೀನು. ಈ ವರ್ಷ ಬರಗಾಲ ಬಂದಿದೆ. ರೈತರಿಗೆ ಬರ ಪರಿಹಾರದ ಹಣ ಸಿಗುವ ಸಾಧ್ಯತೆ ಇದೆ. ಆದರೆ, ವೆಂಕಟಪ್ಪನಿಗೆ ಅದರ ಬಗ್ಗೆ ಸಣ್ಣ ನಿರೀಕ್ಷೆಯೂ ಇಲ್ಲ. ಯಾಕೆಂದರೆ, ಆತನ ಜಮೀನು ಆತನ ಅಣ್ಣನೊಂದಿಗೆ ಜಂಟಿ ಖಾತೆಯಲ್ಲಿದೆ. ಹಾಗಾಗಿ ಆತನಿಗೆ ಸರ್ಕಾರದಿಂದ ಯಾವ ಸೌಲಭ್ಯವೂ ಸಿಗುವುದಿಲ್ಲ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಆತನಿಗೆ ಬೆಳೆ ಪರಿಹಾರ ಧನ, ಬ್ಯಾಂಕ್ ಸಾಲ ಸಿಕ್ಕಿಲ್ಲ. ಮಕ್ಕಳ ವಿದ್ಯಾಭ್ಯಾಸ, ಮದುವೆ ಇತ್ಯಾದಿ ಸಂಕಷ್ಟದ ಸಂದರ್ಭಗಳಲ್ಲಿ ಒಂದಿಷ್ಟು ಜಮೀನನ್ನು ಮಾರಬೇಕೆಂದರೂ ಅದು ಸಾಧ್ಯವಾಗಿಲ್ಲ. ಜಮೀನಲ್ಲಿ ಬೆಳೆ ಬೆಳೆದು ಹೇಗೋ ಬದುಕುತ್ತಿದ್ದಾನೆ ಎನ್ನುವುದೊಂದೇ ಆತನ ಪಾಲಿನ ಜಮೀನಿನಿಂದ ಒದಗಿದ ಪ್ರಯೋಜನ.   

ಜಮೀನನ್ನು ಸರ್ವೆ ಮಾಡಿ ಪ್ರತ್ಯೇಕವಾಗಿ ಸಿಂಗಲ್ ನಂಬರ್ ಪಹಣಿ ಮಾಡಿಕೊಡಲು ವೆಂಕಟಪ್ಪ ಕಂದಾಯ ಇಲಾಖೆಗೆ ತತ್ಕಾಲ್ ಪೋಡಿ ಅರ್ಜಿ ಹಾಕಿದ್ದರು. ಭೂಮಾಪಕರು ನಿಯಮದ ಪ್ರಕಾರ, 21 ದಿನಗೊಳಳಗೆ 11ಇ ಸ್ಕೆಚ್ ತಯಾರಿಸಿ ಅದನ್ನು ಕಚೇರಿಗೆ ಸಲ್ಲಿಸಬೇಕು. ಆದರೆ, ವೆಂಕಟಪ್ಪ ಅರ್ಜಿ ಹಾಕಿದ ಸುಮಾರು ಆರು ತಿಂಗಳ ನಂತರ ಬಂಧ ಸರ್ವೆಯರ್‌ಗಳು ಜಮೀನು ನಕ್ಷೆ ತಯಾರಿಸಿ ಅದನ್ನು ತಾಲ್ಲೂಕು ಕಚೇರಿಗೆ  ನೀಡಲು ಮತ್ತೊಂದು ಆರು ತಿಂಗಳು ತೆಗೆದುಕೊಂಡರು. ಅಷ್ಟಾದ ನಂತರ ಪಹಣೆ ಬರಬೇಕು ಅಂದರೆ, ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಇಬ್ಬರೂ ಥಂಬ್ (ಬೆರಳಚ್ಚು) ಕೊಡಬೇಕು. ನಂತರ ಖಾತೆ ಬದಲಾವಣೆ ಆಗುತ್ತದೆ. ಇವೆಲ್ಲವೂ ನಿಗದಿತ ಅವಧಿಯಲ್ಲೇ ಆಗಬೇಕು ಎಂದು ಸಕಾಲ ಯೋಜನೆಯಲ್ಲಿದೆ. ಆದರೆ, ಪ್ರತ್ಯೇಕ ಪಹಣಿ ಮಾಡಿಕೊಡಲು ಅರ್ಜಿ ಸಲ್ಲಿಸಿ ಒಂದು ವರ್ಷ ಆಗಿದ್ದರೂ ವೆಂಕಟ್ಟಪ್ಪನಿಗೆ ಇನ್ನೂ ಪ್ರತ್ಯೇಕ ಪಹಣಿ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯೂ ಆತನಿಗೆ ಬರ ಪರಿಹಾರ ಹಣ ಸಿಗುವುದಿಲ್ಲ.

Advertisements

ಘಟನೆ 2. ಗೌರಿಬಿದನೂರಿನ ನಾಮಗೊಂಡ್ಲು ಗ್ರಾಮದ ಜಿ ಕೆ ಬೀರಪ್ಪನಿಗೆ ಮೂರು ಎಕರೆ 15 ಕುಂಟೆ ಜಮೀನಿದೆ. ಆ ಜಮೀನು ಒಂದೇ ಕಡೆ ಇಲ್ಲ; ಐದಾರು ಕಡೆ ಬರುತ್ತದೆ. ಐದಾರು ಸರ್ವೆ ನಂಬರ್‌ಗಳಲ್ಲಿದೆ. 15 ಕುಂಟೆ ಜಮೀನು ಒಂದು ಸರ್ವೆ ನಂಬರ್‌ನಲ್ಲಿದೆ. ಅವರ ಅಪ್ಪನ ಹೆಸರಿನಿಂದ ಅವರ ಹೆಸರಿಗೆ ಪೌತಿ ಖಾತೆ ಮಾಡುವಾಗ ಕಚೇರಿಯಲ್ಲಿದ್ದವರು ಬೀರಪ್ಪನ ಇನಿಷಿಯಲ್ ಅನ್ನು ಬಿ ಕೆ ಎಂದು ತಪ್ಪಾಗಿ ನಮೂದಿಸಿದ್ದರು. ಅದನ್ನು ತಾಲ್ಲೂಕು ಆಫೀಸ್‌ನಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದರು ಬೀರಪ್ಪ. ಹಿಂದೆ ಇದ್ದ ಕೇಸ್ ವರ್ಕರ್ ಅಷ್ಟೊತ್ತಿಗೆ ವರ್ಗಾವಣೆ ಆಗಿದ್ದ. ಜಿ ಕೆ ಬೀರಪ್ಪ ಮತ್ತು ಬಿ ಕೆ ವೀರಪ್ಪ ಇಬ್ಬರೂ ಒಂದೇ ಎಂದು ಆತನಿಗೆ ಅರ್ಥ ಮಾಡಿಸುವ ಹೊತ್ತಿಗೆ ಬೀರಪ್ಪನಿಗೆ ಸಾಕುಸಾಕಾಯಿತು. ಅಷ್ಟೆಲ್ಲ ಹೇಳಿದ ಮೇಲೂ ‘ಪಹಣಿಯಲ್ಲಿನ ಹೆಸರು ತಿದ್ದುಪಡಿ ಮಾಡುವ ಅಧಿಕಾರ ನಮಗೆ ಇಲ್ಲ, ನೀವು ಎ ಸಿ ಕಚೇರಿಗೇ ಹೋಗಬೇಕು’ ಎಂದುಬಿಟ್ಟರು ಅಲ್ಲಿನ ಸಿಬ್ಬಂದಿ. ಅಂದರೆ, ಅವರು ಮಾಡಿದ ಸಣ್ಣ ತಪ್ಪನ್ನು ತಿದ್ದಲೂ ಅವರಿಗೆ ಅಧಿಕಾರವಿಲ್ಲ. ಅದಕ್ಕಾಗಿ ಐದು ವರ್ಷಗಳಿಂದ ಬೀರಪ್ಪ ಚಿಕ್ಕಬಳ್ಳಾಪುರದ ಉಪವಿಭಾಗಾಧಿಕಾರಿ ಕಚೇರಿ ಸುತ್ತುತ್ತಲೇ ಇದ್ದಾರೆ. ಇವರಿಗೆ ಹಿಯರಿಂಗ್ ಇದ್ದ ದಿನಾಂಕಗಳಂದು ಒಮ್ಮೆ ಕೂಡ ಎಸಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಯಾವುದೋ ಅರ್ಜೆಂಟ್ ಮೀಟಿಂಗ್ ಇದೆ ಎಂದೋ, ಡಿಸಿ ಕರೆದಿದ್ದಾರೆ ಎಂದೋ, ಫೀಲ್ಡ್ ವಿಸಿಟ್ ಎಂದೋ ಹೇಳಿ ಎಸಿ ಹೊರಗೆ ಹೋಗಿರುತ್ತಿದ್ದರು.

ರೈತಘಟನೆ 3: ಹಾಸನದ ಹಿರಿಸ್ಯಾವೆಯ ಗೋವಿಂದೇಗೌಡನಿಗೆ ಒಂದು ಎಕರೆ 20 ಕುಂಟೆ ಜಮೀನಿದೆ. ಆದರೆ, ಅದು ಪ್ರತ್ಯೇಕ ಸರ್ವೆ ನಂಬರ್‌ನಲ್ಲಿಲ್ಲ. ಆತನ ತಾತನ ಅಣ್ಣತಮ್ಮಂದಿರ ಜೊತೆಗೆ ಜಂಟಿ ಖಾತೆಯಲ್ಲಿದೆ. ಅದೇ ಸರ್ವೆ ನಂಬರ್ ನಂಬರ್‌ನಲ್ಲಿರುವ ಆತನ ಸಂಬಂಧಿ ತನ್ನ ಪಾಲಿನ ಒಂದು ಎಕರೆ ಜಮೀನನ್ನು ಬೇರೊಬ್ಬರಿಗೆ ಮಾರಿದ್ದ. ಆಗ, ಕೈಬರಹದ ಪಹಣಿಗಳಿದ್ದ ಕಾಲದಲ್ಲಿ, ಆತನ ಪಾಲಿನ ಒಂದು ಎಕರೆ ರಿಜಿಸ್ಟರ್ ಮಾಡಿಕೊಡುವ ಬದಲು ಕಂದಾಯ ಇಲಾಖೆಯ ಸಿಬ್ಬಂದಿ ಗೋವಿಂದೇಗೌಡನ ಪಾಲಿನ ಒಂದೂವರೆ ಎಕರೆ ಪೈಕಿ ಒಂದು ಎಕರೆ ರಿಜಿಸ್ಟರ್ ಮಾಡಿಕೊಟ್ಟುಬಿಟ್ಟಿದ್ದರು. ಆತನ ಹೆಂಡತಿಗೆ ತೀವ್ರ ಕಾಯಿಲೆಯಾಗಿ ಆಸ್ಪತ್ರೆ ಖರ್ಚಿಗೆ ಹಣ ಬೇಕಾದಾಗ ಜಮೀನು ಮಾರಲು ಹೋದಾಗ ನೋಡಿದರೆ, ಗೋವಿಂದೇಗೌಡನ ಹೆಸರಿನಲ್ಲಿ ಇದ್ದದ್ದು ಕೇವಲ 20 ಕುಂಟೆ ಮಾತ್ರ. ಅದನ್ನು ಸರಿಪಡಿಸಲು ಮೊದಲು ಗ್ರಾಮಲೆಕ್ಕಿಗ, ನಂತರ ರೆವಿನ್ಯೂ ಇನ್ಸ್‌ಪೆಕ್ಟರ್, ಅದರ ನಂತರ ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಎಡತಾಕಿದ ಗೋವಿಂದೇಗೌಡ. ಅವರೆಲ್ಲ ‘ಇದು ನಮ್ಮ ಪರಿಧಿಯಲ್ಲಿಲ್ಲ, ಎಸಿ ಆಫೀಸ್‌ಗೆ ಹಾಸನಕ್ಕೆ ಹೋಗಬೇಕು’ ಎಂದರು. ಸರಿ ಗೌಡ ಹಾಸನದ ಎಸಿ ಕಚೇರಿಯಲ್ಲಿ ತನ್ನ ಅಹವಾಲು ಸಲ್ಲಿಸಿದ. ಅವರು ‘ನಿನ್ನ ಜಮೀನು ಎಷ್ಟಿತ್ತು ಅನ್ನೋದಕ್ಕೆ ದಾಖಲೆಗಳನ್ನು ತೆಗೆದುಕೊಂಡು ಬಾ’ ಎಂದರು. ಸೇಲ್ ಡೀಡ್, ಮ್ಯುಟೇಷನ್, 50 ವರ್ಷಗಳ ಕೈ ಬರಹದ ಪಹಣಿ, ಸರ್ವೆ ನಕ್ಷೆ ಹೀಗೆ ಒಂದೊಂದೇ ದಾಖಲೆಗೆ ಬೇಡಿಕೆ ಇಡುತ್ತಲೇ ಹೋದರು ಎಸಿ ಕಚೇರಿ ಸಿಬ್ಬಂದಿ. ಆಕಾರ್ ಬಂದ್, ಅಟ್ಲಾಸ್ ಎಂದು ಗೋವಿಂದೇಗೌಡ ಜೀವನದಲ್ಲಿ ಕೇಳದೇ ಇದ್ದ ಹೆಸರಿನ ದಾಖಲೆಗಳನ್ನೆಲ್ಲ ತಂದುಕೊಟ್ಟ. ಜೊತೆಗೆ ಆತನ ಜಮೀನು ಎಷ್ಟಿತ್ತು ಎಂದು ಸಾಕ್ಷಿ ಹೇಳಲು ತನ್ನ ಸರ್ವೆ ನಂಬರ್‌ನಲ್ಲಿದ್ದ ಅಷ್ಟೂ ಜನರನ್ನು ಹತ್ತಾರು ಬಾರಿ ಎಸಿ ಕೋರ್ಟಿಗೆ ಕರೆದೊಯ್ದ. ಇದೆಲ್ಲ ಶುರುವಾಗಿ ಎಂಟು ವರ್ಷಗಳಾಗಿವೆ. ಓಡಾಟ, ಊಟ, ತಿಂಡಿಗೆಂದು ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಕಾಯಿಲೆ ಬಿದ್ದಿದ್ದ ಆತನ ಹೆಂಡತಿ ತೀರಿಕೊಂಡು ಇಬ್ಬರು ಚಿಕ್ಕಮಕ್ಕಳನ್ನು ಆತನೇ ಕಷ್ಟಪಟ್ಟು ನೋಡಿಕೊಳ್ಳುವಂತಾಗಿದೆ. ಆದರೆ, ಇವತ್ತಿಗೂ ಆತನ ಜಮೀನು ವಿವಾದ ಬಗೆಹರಿದಿಲ್ಲ. ಆತನ ಪೂರ್ತಿ ಜಮೀನು ಆತನ ಹೆಸರಿಗೆ ಬಂದಿಲ್ಲ.

ಇವು ಕಂದಾಯ ಇಲಾಖೆಯ ಅವ್ಯವಸ್ಥೆಯಿಂದ ರೈತರು ಅನುಭವಿಸುತ್ತಿರುವ ಸಂಕಟವನ್ನು ಹೇಳುವ ಮೂರು ಘಟನೆಗಳಷ್ಟೆ. ಹೋಬಳಿ ಮಟ್ಟದ ನಾಡ ಕಚೇರಿ, ತಾಲ್ಲೂಕು ಮಟ್ಟದ ತಹಶೀಲ್ದಾರ್ ಕಚೇರಿ, ಜಿಲ್ಲಾ ಮಟ್ಟದ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ಇಂಥ ಲಕ್ಷಾಂತರ ಪ್ರಕರಣಗಳಿವೆ. ಅವನ್ನು ಬಗೆಹರಿಸಿಕೊಂಡು ತಮ್ಮ ಬದುಕಿನ ಬವಣಿ ನೀಗಿಸಿಕೊಳ್ಳಲು ರೈತರು ದಿನನಿತ್ಯ ತಹಶೀಲ್ದಾರ್ ಕಚೇರಿಗಳಿಗೆ ಅಲೆಯುತ್ತಲೇ ಇರುತ್ತಾರೆ. ಅದು ಅನೇಕ ರೈತರ ಪಾಲಿಗೆ ಅವರ ದಿನಚರಿಯ ಒಂದು ಭಾಗವೇ ಆಗಿಬಿಟ್ಟಿದೆ. ಕೆಲವು ವಂಶಪಾರಂಪರ್ಯವಾಗಿ ಬಂದ ಆಸ್ತಿ ಹಿಸ್ಸೆ ಮಾಡಿಕೊಳ್ಳುವಾಗ ಉಂಟಾದ ಸಮಸ್ಯೆಗಳು. ಕೆಲವು ಕಂದಾಯ ಅಧಿಕಾರಿಗಳ ಬೇಜವಾಬ್ದಾರಿಯಿಂದ (ಹೆಸರು, ಜಮೀನು ಅಳತೆ ತಪ್ಪಾಗಿ ನಮೂದಿಸುವುದು ಇತ್ಯಾದಿ) ಉದ್ಭವಿಸಿದ ಸಮಸ್ಯೆಗಳು. ಸಮಸ್ಯೆ ಹೇಗೇ ಹುಟ್ಟಿಕೊಳ್ಳಲಿ, ಅದನ್ನು ಬಗೆಹರಿಸಿಕೊಳ್ಳಬೇಕು ಎಂದರೆ, ರೈತರು ವಿಪರೀತ ಶ್ರಮ ಹಾಕಬೇಕು. ತಿಂಗಳುಗಟ್ಟಲೇ, ಕೆಲವೊಮ್ಮೆ ವರ್ಷಗಟ್ಟಲೇ ಕೆಲಸ ಕಾರ್ಯ ಬಿಟ್ಟು ಕಚೇರಿಗಳಿಗೆ ಅಲೆಯಬೇಕು.

ಈ ಸುದ್ದಿ ಒದಿದ್ದೀರಾ: ಕಂದಾಯ ಇಲಾಖೆ | ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿಲ್ಲದಿದ್ದರೆ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ; ಪ್ರಧಾನ ಕಾರ್ಯದರ್ಶಿ ಎಚ್ಚರಿಕೆ

ಖಾತೆ ಬದಲಾವಣೆಗಾಗಿ ಅಲೆದು ಅಲೆದು ಸುಸ್ತಾದ ಅಜ್ಜಿಯೊಬ್ಬರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಬಾಗಿಲಲ್ಲಿ ಮಲಗಿ ಪ್ರತಿಭಟನೆ ಮಾಡಿದ್ದ ಘಟನೆ 2022ರ ಜುಲೈನಲ್ಲಿ ನಡೆದಿತ್ತು.

ಕಂದಾಯ ಇಲಾಖೆ ಖಾತೆ ಬದಲಾವಣೆ ಸಂಬಂಧ ಅಧಿಕಾರಿಗಳು ಅನಗತ್ಯ ವಿಳಂಬ ಮಾಡಿದ್ದರಿಂದ ರೋಸಿಹೋದ ಅಜ್ಜಿ ತಾಲ್ಲೂಕು ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದರು. ಕೊನೆಗೆ ಉಪವಿಭಾಗಾಧಿಕಾರಿಗಳು ಮಧ್ಯಪ್ರವೇಶಿಸಿ, ಒಂದು ತಿಂಗಳಲ್ಲಿ ಕೆಲಸ ಮಾಡಿಕೊಡುವುದಾಗಿ ಹೇಳಿದ ನಂತರ ಅಜ್ಜಿ ಮನೆಗೆ ಹೋಗಿದ್ದರು.

ಮುಂದುವರೆಯುತ್ತದೆ..

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X