ಕಂದಾಯ ಕರ್ಮಕಾಂಡ-4 | ಇಲಾಖೆಯಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರಕ್ಕೆ ಅಂಕುಶ ಹಾಕುವರೇ ಸಚಿವ ಕೃಷ್ಣಬೈರೇಗೌಡ?

Date:

Advertisements
ರೈತನ ಬದುಕು ಕಡು ಕಷ್ಟದ್ದು. ಉತ್ತು ಬಿತ್ತಿ ಬೆಳೆ ಬೆಳೆದು ಅದನ್ನು ಮಾರಿ ಒಂದಿಷ್ಟು ಕಾಸು ನೋಡಿದರೆ, ಅದೇ ಅದೃಷ್ಟ ಎಂದುಕೊಳ್ಳುವ ಪರಿಸ್ಥಿತಿ ರೈತರದ್ದು. ಇಂಥ ಸ್ಥಿತಿಯಲ್ಲೂ ರೈತರ ಅರ್ಧ ಆಯಸ್ಸು ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆಯುವುದರಲ್ಲೇ ಸವೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಕಂದಾಯ ಸಚಿವ ಕೃಷ್ಣ ಬೈರೇಗೌಡರು ದಕ್ಷರು. ಉತ್ತಮ ಕೆಲಸಗಾರರು. ತಬರನ ಮಕ್ಕಳ ಬದುಕಿನ ಸಂಕಟವನ್ನು ಕೃಷಿಕ ಕುಟುಂಬದ ಹಿನ್ನೆಲೆಯ ಕೃಷ್ಣಬೈರೇಗೌಡರು ಕೊಂಚವಾದರೂ ನೀಗುವಂತಾಗಲಿ.

ಕಂದಾಯ ಇಲಾಖೆಯಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು 2022ರ ಜನವರಿ 4ರಂದು ಕೋಲಾರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು. ‘ಕೆರೆ, ರಾಜಕಾಲುವೆ, ಗುಂಡು ತೋಪುಗಳು, ಕಣ್ಮರೆಯಾಗುತ್ತಿವೆ. ಉಳ್ಳವರಿಂದ ಹಣ ಪಡೆದು ಅದನ್ನು ತಮ್ಮಪ್ಪನ ಆಸ್ತಿ ಎನ್ನುವಂತೆ ಅಧಿಕಾರಿಗಳು ಖಾಸಗಿಯವರಿಗೆ ಪರಭಾರೆ ಮಾಡುತ್ತಿದ್ದಾರೆ. ಪಹಣಿ ಮತ್ತಿತರ ಜಮೀನಿನ ದಾಖಲೆ ಪತ್ರಗಳ ಸಣ್ಣ ತಿದ್ದುಪಡಿಗಳಿಗೂ ರೈತರು ತಿಂಗಳುಗಟ್ಟಲೇ ಕಾಯಬೇಕಾಗಿದೆ. ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿದ್ದಾರೆ. ಇಲಾಖೆ ಅಧಿಕಾರಿಗಳೇ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಪತ್ರ ಸೃಷ್ಟಿಸುತ್ತಿದ್ದಾರೆ. ಕಂದಾಯ ಇಲಾಖೆ ಸಕಾಲಕ್ಕೆ ರೈತರ ಮತ್ತು ಸಾರ್ವಜನಿಕರ ಕೆಲಸ ಮಾಡಿಕೊಡುವುದಿಲ್ಲ. ಸಣ್ಣ ಕೆಲಸಕ್ಕೂ ಜನರನ್ನು ವರ್ಷಗಟ್ಟಲೇ ಕಚೇರಿಗೆ ಅಲೆಸುತ್ತಾರೆ’ ಎಂದೆಲ್ಲ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಂದಾಯ ಇಲಾಖೆಯ ಅವ್ಯವಸ್ಥೆಯ ವಿರುದ್ಧ ಕಾಲದಿಂದ ಕಾಲಕ್ಕೆ ಇಂಥ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಕನಿಷ್ಠ ತಿಂಗಳಿಗೊಮ್ಮೆಯಾದರೂ ರೈತರು, ಕಾರ್ಮಿಕರು, ಮಹಿಳೆಯರು ಹೀಗೆ ನಾನಾ ಜನವರ್ಗಗಳು ವಿವಿಧ ಕಾರಣಗಳಿಗೆ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆಗಳನ್ನು ನಡೆಸುತ್ತಲೇ ಇರುತ್ತವೆ. ಆದರೆ, ಇಲಾಖೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಯಾವ ಪ್ರತಿಭಟನೆಯೂ ತಮ್ಮನ್ನು ಏನೂ ಮಾಡಲಾಗದು ಎಂದು ಅಧಿಕಾರಿಗಳು ಭಾವಿಸಿದ್ದಾರೆ.

ಹುಟ್ಟು ಸಾವು ಸಹಜ ಪ್ರಕ್ರಿಯೆ. ಹಾಗೆ ಸತ್ತವರ ಹೆಸರಿನಲ್ಲಿ ಜಮೀನು, ಮನೆ ಇದ್ದರೆ, ಅವರ ವಾರಸುದಾರರು ಕಂದಾಯ ಇಲಾಖೆಗೆ ಹೋಗಿ ಅದನ್ನು ತಮ್ಮ ಹೆಸರಿಗೆ ಪವತಿ ಖಾತೆ ಮಾಡಿಸಿಕೊಳ್ಳಬೇಕು. ಹಾಗೆ ಹೋದವರು ಕಂದಾಯ ಇಲಾಖೆಯ ಅವ್ಯವಸ್ಥೆ, ಭ್ರಷ್ಟಾಚಾರವನ್ನು ಅನುಭವಿಸಲೇಬೇಕು. ಹೀಗೆ ಒಂದಿಲ್ಲೊಂದು ರೀತಿ ಕಂದಾಯ ಇಲಾಖೆಯ ಅಧಿಕಾರಿಗಳ ಲಂಚಾವತಾರದಿಂದ ಯಾರೂ ಪಾರಾಗಲು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ಇದೆ.

Advertisements

ಕಂದಾಯತಮ್ಮ ನ್ಯಾಯಯುತ ಕೆಲಸ ಮಾಡಿಸಿಕೊಳ್ಳಲು ಬಂದ ಸಾರ್ವಜನಿಕರಿಂದ ಅನ್ಯಾಯಯುತವಾಗಿ ಲಂಚ ಕೀಳುವುದು; ಸರ್ಕಾರದ ಜಮೀನನ್ನು ಅನ್ಯಾಯಯುತವಾಗಿ ಖಾಸಗಿಯವರು ಪರಭಾರೆ/ಒತ್ತುವರಿ ಮಾಡಲು ಸಹಕರಿಸಿ ಲಂಚ ಹೊಡೆಯುವುದು ಕಂದಾಯ ಇಲಾಖೆಯಲ್ಲಿ ವ್ಯಾಪಕವಾಗಿ ನಡೆಯುತ್ತಲೇ ಇದೆ.

ಅಧಿಕಾರಿಗಳು ಅಷ್ಟು ವ್ಯಾಪಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರೆ, ಅದಕ್ಕೆ ಕಾರಣ ನಮ್ಮ ಶಾಸಕರು ಹಾಗೂ ಸಚಿವರು. ಅವರು ಹೊಡೆಯುವ ಲಂಚದಲ್ಲಿ ಕಮಿಷನ್ ಪಡೆಯುವ, ಹಣ ಪಡೆದು ಅಧಿಕಾರಿಗಳಿಗೆ, ತಹಶೀಲ್ದಾರ್‌ಗಳಿಗೆ ಹುಲುಸಾದ ಜಾಗಕ್ಕೆ ಪೋಸ್ಟಿಂಗ್ ನೀಡುವ ಶಾಸಕರು, ಮಂತ್ರಿಗಳಿಗೆ ಆ ಅಧಿಕಾರಿಯ ಭ್ರಷ್ಟಾಚಾರ ತಡೆಯುವ ನೈತಿಕ ಶಕ್ತಿ ಇರುವುದಿಲ್ಲ. ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿ ಕೂಡ ನೋಡಬೇಕಾಗಿದೆ. ಅದರ ಅರ್ಥ ವೈಯಕ್ತಿಕವಾಗಿ ಆರ್ ಅಶೋಕ್ ಲಂಚ ಪಡೆದು ಪೋಸ್ಟಿಂಗ್ ನೀಡಿದ್ದಾರೆಂದಲ್ಲ; ಒಟ್ಟು ಸರ್ಕಾರವೇ ಕಮಿಷನ್ ದಂಧೆಯಲ್ಲಿ ಮುಳುಗಿದ್ದಾಗ ಅಧಿಕಾರಿಗಳ ಲಂಚಾವತಾರಕ್ಕೆ ಕುಮ್ಮಕ್ಕು ಸಿಕ್ಕಿ ಅದು ಮತ್ತಷ್ಟು ಹೆಚ್ಚಾಗುತ್ತದೆ.

ಈ ಸುದ್ದಿ ಓದಿದ್ದೀರಾ: ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಆಗದಿರುವುದು ಮತ್ತು ಲಂಚಾವತಾರ ಹೆಚ್ಚಾಗಿರುವುದಕ್ಕೆ ಸಿಬ್ಬಂದಿಯ ತೀವ್ರ ಕೊರತೆಯೂ ಒಂದು ಕಾರಣ. ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ಸಿಬ್ಬಂದಿಯ ಕೊರತೆ ಇದೆ. ಸರ್ವೆಯರ್‌ಗಳ ಕೊರತೆಯಿಂದ ರಾಜ್ಯದಲ್ಲಿ ಆಗಸ್ಟ್ 31, 2023ಕ್ಕೆ 2.89 ಲಕ್ಷ ಭೂಮಾಪನದ ಅರ್ಜಿಗಳು ಬಾಕಿ ಇವೆ. ರಾಜ್ಯದಲ್ಲಿ ಸರ್ಕಾರಿ ಭೂಮಾಪಕರು ಮತ್ತು ಲೈಸೆನ್ಸೆಡ್ ಸರ್ವೆಯರ್‌ಗಳು ಸೇರಿ 4590 ಸರ್ವೆಯರ್‌ಗಳಿದ್ದು, ಒಬ್ಬೊಬ್ಬರಿಗೆ 63 ಅರ್ಜಿಗಳು ಬಾಕಿ ಉಳಿದಂತಾಗಿದೆ. ಪ್ರತಿ ತಿಂಗಳು ಒಂದು ಲಕ್ಷ ಹೊಸ ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಿದರ್ಶನ ತೆಗೆದುಕೊಂಡರೆ, ಜಿಲ್ಲಾಧಿಕಾರಿಯಿಂದ ಹಿಡಿದು ಗ್ರಾಮ ಲೆಕ್ಕಿಗರವರೆಗೆ ಕಂದಾಯ ಇಲಾಖೆಯಲ್ಲಿ ಒಟ್ಟು 656 ಹುದ್ದೆಗಳು ಮಂಜೂರಾಗಿವೆ. ಅವುಗಳ ಪೈಕಿ 434 ಹುದ್ದೆಗಳು ಭರ್ತಿಯಾಗಿದ್ದರೆ, 222 ಹುದ್ದೆಗಳು ಖಾಲಿ ಇವೆ. ಹೀಗೆ ಸಿಬ್ಬಂದಿಯ ಮೇಲೆ ವಿಪರೀತ ಕಾರ್ಯಬಾಹುಳ್ಯವಿದೆ ಎನ್ನುವುದು ನಿಜ. ಆದರೆ, ಅದು ಯಾವ ರೀತಿಯಲ್ಲೂ ಭ್ರಷ್ಟಾಚಾರಕ್ಕೆ ಸಮರ್ಥನೆಯಾಗಕೂಡದು. ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಆದರೆ, ಕೆಲವು ಕಡೆ ಅವರು ಸಾರ್ವಜನಿಕರನ್ನು ಕಾಯಂ ಸಿಬ್ಬಂದಿಗಿಂತಲೂ ಹೆಚ್ಚು ಸುಲಿಗೆ ಮಾಡುತ್ತಾರೆ ಎನ್ನುವ ಆರೋಪಗಳಿವೆ.    

ಕೃಷ್ಣಬೈರೇಗೌಡಕಂದಾಯ ಇಲಾಖೆಯ ಭಾಗವಾದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 2023-24ನೇ ಸಾಲಿನಲ್ಲಿ 25 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಜನರಿಗೆ ಉತ್ತಮ ಆಡಳಿತ ಮತ್ತು ಸೇವೆ ನೀಡಿದರೆ ಮಾತ್ರ ಸರ್ಕಾರ ತನ್ನ ತೆರಿಗೆ ಸಂಗ್ರಹದ ಗುರಿ ಮಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣಬೈರೇಗೌಡರು ಉತ್ತಮ ಆರಂಭವನ್ನು ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ: ಕಂದಾಯ ಕರ್ಮಕಾಂಡ-2 | ಶಾನುಭೋಗರ ಕೈಬರಹ, ರೈತರ ಹಣೆಬರಹ!

ಕೃಷ್ಣಬೈರೇಗೌಡರ ಕೆಲಸದ ಬಗ್ಗೆ ಜನರಲ್ಲಿ ಭರವಸೆ ಹುಟ್ಟಲು ಅವರ ಮೂರು ತಿಂಗಳ ಕಾರ್ಯಶೈಲಿಯೇ ಕಾರಣ. ಅವರು ಕಂದಾಯ ಸಚಿವರಾಗಿ ಬಂದ ಮೇಲೆ ಇಲಾಖೆಯ ಹಲವು ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗಿದೆ. ಕಳೆದ ಐದಾರು ವರ್ಷಗಳಿಂದ ವಿಚಾರಣಾ ಹಂತದಲ್ಲಿದ್ದ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ 225 ಅಧಿಕಾರಿಳಿಗೆ ತ್ವರಿತ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ತಹಶೀಲ್ದಾರ್ ಹಂತದ ಅಧಿಕಾರಿಗಳು ಹಲವರಿದ್ದಾರೆ ಎನ್ನುವುದು ಗಮನಾರ್ಹ. ಬೆಂಗಳೂರು ಉತ್ತರದ ಎಸಿ ಶಿವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮತ್ತೊಂದು ಮುಖ್ಯ ಸಾಧನೆ ಕಡತಗಳ ವಿಲೇವಾರಿ; ಒಂದು ಸಣ್ಣ ಕೆಲಸಕ್ಕೂ ವರ್ಷಗಟ್ಟಲೇ ಅವಧಿ ತೆಗೆದುಕೊಂಡು ನಟೋರಿಯಸ್ ಆಗಿದ್ದ ಕಂದಾಯ ಇಲಾಖೆ ಕೃಷ್ಣ ಬೈರೇಗೌಡರು ಸಚಿವರಾದ ನಂತರ ಕಡತಗಳ ವಿಲೇವಾರಿಯಲ್ಲಿ 40ಕ್ಕೂ ಹೆಚ್ಚಿನ ಸರ್ಕಾರದ ಇಲಾಖೆಗಳ ಪೈಕಿ ಜುಲೈ ತಿಂಗಳಲ್ಲಿ ಎರಡನೇ ಸ್ಥಾನ ಪಡೆದಿತ್ತು.

ಒತ್ತುವರಿಯಾದ ಭೂಮಿಯನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೃಷ್ಣಭೈರೇಗೌಡ ಆದೇಶಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಯ ಆಡಿಟ್‌ಗೆ ಆದೇಶ ನೀಡಲಾಗಿದೆ. ಒತ್ತುವರಿ ಸಂಬಂಧ ಬೆಂಗಳೂರು ನಗರದಲ್ಲಿ 14,660 ಪ್ರಕರಣಗಳು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 1,292 ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳಲ್ಲಿ ಮರು ಅತಿಕ್ರಮಣ ನಡೆಯುತ್ತಿದೆ ಎಂದು ಸಚಿವರು ಹೇಳಿದ್ದಾರೆ.     

ಈ ಸುದ್ದಿ ಓದಿದ್ದೀರಾ: ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!               

ಕೃಷ್ಣ ಬೈರೇಗೌಡರು ದಕ್ಷ ಆಡಳಿತಗಾರರು. ಅವರಿಗೆ ರಶ್ಮಿ ಮಹೇಶ್ ಮತ್ತು ರಾಜೇಂದ್ರ ಕುಮಾರ್ ಕಟಾರಿಯಾ ಅವರಂಥ ಉತ್ತಮ ಐಎಎಸ್ ಅಧಿಕಾರಿಗಳು ಹೆಗಲೆಣೆಯಾಗಿದ್ದಾರೆ. ಇವರ ಸಹಕಾರದಿಂದ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ವೇಳೆಗೆ ಕೆಲಸಕ್ಕೆ ಹಾಜರಾಗದಿದ್ದರೆ ಮತ್ತು ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿ ಇಲ್ಲದಿದ್ದರೆ, ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಎಚ್ಚರಿಕೆ ನೀಡಿದ್ದಾರೆ. ಹೀಗೆ ಇಲಾಖೆಯ ಕಾರ್ಯಶೈಲಿಯಲ್ಲಿ ಬದಲಾವಣೆ ತರಲು ಸಚಿವರು ಹಾಗೂ ಅವರ ತಂಡ ಮುಂದಾಗಿದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಅವರ ಪಕ್ಷದ ಶಾಸಕರು ಎಲ್ಲರೂ ಸಹಕಾರ ನೀಡಿದರೆ ಮಾತ್ರ ಅವರು ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ.  

ರೈತನ ಬದುಕು ಕಡು ಕಷ್ಟದ್ದು. ಉತ್ತು ಬಿತ್ತಿ ಬೆಳೆ ಬೆಳೆದು ಅದನ್ನು ಮಾರಿ ಒಂದಿಷ್ಟು ಕಾಸು ನೋಡಿದರೆ, ಅದೇ ಅದೃಷ್ಟ ಎಂದುಕೊಳ್ಳುವ ಪರಿಸ್ಥಿತಿ ರೈತರದ್ದು. ಇಂಥ ಸ್ಥಿತಿಯಲ್ಲೂ ರೈತರ ಅರ್ಧ ಆಯಸ್ಸು ಕಂದಾಯ ಇಲಾಖೆ ಕಚೇರಿಗಳಿಗೆ ಅಲೆಯುವುದರಲ್ಲೇ ಸವೆಯುತ್ತಿದೆ. ತಬರನ ಮಕ್ಕಳ ಬದುಕಿನ ಸಂಕಟವನ್ನು ಕೃಷಿಕ ಕುಟುಂಬದ ಹಿನ್ನೆಲೆಯ ಕೃಷ್ಣಬೈರೇಗೌಡರು ಕೊಂಚವಾದರೂ ನೀಗುವಂತಾಗಲಿ.                                  

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X