ಸಾಮಾಜಿಕ ಬದಲಾವಣೆ ಜವಾಬ್ದಾರಿ ಸಾಹಿತಿಗಳ ಮೇಲಿದೆ. ಗಟ್ಟಿ ಸಾಹಿತ್ಯದಿಂದ ಮಾತ್ರ ಸಮಾಜದಲ್ಲಿ ಕ್ರಾಂತಿಯಾಗಲು ಸಾಧ್ಯ ಎಂದು ಹಿರಿಯ ಕಲಾವಿದ ಬಕ್ಕಪ್ಪ ದಂಡಿನ್ ಹೇಳಿದರು
ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ಜಿಲ್ಲೆಯ ಉದಯೋನ್ಮುಖ ಕವಿಗಳಾದ ಅಜೇಯ ಪಿ.ಸಂಗಣ್ಣೋರ ಅವರ ʼಮೊಗ್ಗುʼ ಕವನ ಸಂಕಲನ ಹಾಗೂ ರಾಜು ಮಾರುತಿ ಪವಾರ ಅವರ ʼವಸಂತದೂತʼ ಮಕ್ಕಳ ಗೀತ ನಾಟಕ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನಕ್ಷರಸ್ಥ ಜನಪದರು ತಮ್ಮ ಭಾವನೆಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ. ಅಂತಹ ಅಮೂಲ್ಯವಾದ ಜಾನಪದ ಸಾಹಿತ್ಯ ಇಂದಿನ ಯುವ ಸಮೂಹ ಅಧ್ಯಯನ ಮಾಡಬೇಕು. ವಸಂತದೂತ ಕೃತಿ ಪರಿಸರ ಕಾಳಜಿ ಕುರಿತು ನಿರೂಪಿಸಿದರೆ, ಮೊಗ್ಗು ಕೃತಿ ತಾಯಿಯ ಮಮತೆ, ಕಾಳಜಿ ಮೇಲೆ ಬೆಳಕು ಚೆಲ್ಲುತ್ತದೆ. ಎರಡು ಕೃತಿಗಳಲ್ಲಿ ಬಂಡಾಯ ಭಾವನೆ ಒಳಗೊಂಡಿವಾಗಿದೆʼ ಎಂದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀಕುಮಾರ ಅತಿವಾಳೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಸಮಾಜದಲ್ಲಿ ಗಟ್ಟಿ ಸಾಹಿತ್ಯ ರಚಿಸುವ ಸಾಹಿತಿಗಳಿಗೆ ಸಮಾಜದಲ್ಲಿ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ಯುವ ಬರಹಗಾರರು ಬರವಣೆಗೆಗೆ ಮುಂದಾಗಬೇಕು. ಅತಿವಾಳೆ ಪ್ರತಿಷ್ಠಾನದಿಂದ ಮುಂದಿನ ದಿನಗಳಲ್ಲಿ ಕಾವ್ಯ ಕಮ್ಮಟಗಳು ಏರ್ಪಡಿಸಿ ಹೊಸ ಪ್ರತಿಭೆಗಳನ್ನು ಗುರುತಿಸಲು ಪ್ರಯತ್ನಿಸಲಾಗುವುದು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಸಾಹಿತ್ಯ ಅಕಾಡೆಮಿಗಳಿಂದ ಜಿಲ್ಲೆಯ ಸಾಂಸ್ಕೃತಿಕ ಬೆಳವಣಿಗೆಗೆ ಶ್ರಮಿಸಲಾಗುವುದುʼ ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ರಾಮಚಂದ್ರ ಗಣಾಪುರ ಅವರು ʼವಸಂತದೂತʼ ಕುರಿತು ಮಾತನಾಡಿ, ʼಪ್ರಕೃತಿ ಮತ್ತು ಮಾನವ ನಡುವಿನ ಸಂಘರ್ಷಮಯ ಕುರಿತು ವಸಂತದೂತ ಕೃತಿಯಲ್ಲಿ ತಿಳಿಸುತ್ತದೆ. ಕಾವ್ಯ ನಾಟಕದಲ್ಲಿ ಭಾಷೆ, ಪದ ಬಳಕೆ, ನಿರೂಪಣೆ ಶೈಲಿ ಉತ್ತಮವಾಗಿದೆ. ವಸಂತದೂತ ಗೀತ ನಾಟಕ ರಂಗದ ಮೇಲೆ ಪ್ರದರ್ಶಿಸಲು ಎಲ್ಲ ಅರ್ಹತೆಗಳು ಹೊಂದಿದೆʼ ಎಂದರು.
ಪತ್ರಕರ್ತ ರಾಜೇಶ್ ಶಿಂಧೆ ಅವರು ಮೊಗ್ಗು ಕವನ ಸಂಕಲನ ಕುರಿತು ಮಾತನಾಡಿ, ʼ ಮೊಗ್ಗು ಕೃತಿಯಲ್ಲಿ ಹೆಚ್ಚಿನ ಕವಿತೆಗಳು ತಾಯಿಯ ವಾತ್ಸಲ್ಯ, ನೋವಿನ ಕುರಿತಾಗಿವೆ. ಇದರಲ್ಲಿನ ಹಲವು ಕವಿತೆಗಳಲ್ಲಿ ಸಮಾಜಪರ ಕಾಳಜಿ ವ್ಯಕ್ತವಾಗುತ್ತದೆ. ಲೇಖಕ ಅಜಯ್ ಅವರು ತಮ್ಮ ಚೊಚ್ಚಲ ಕೃತಿಯಲ್ಲೇ ಸಮಾಜದ ಅವ್ಯವಸ್ಥೆ ತಿದ್ದುವ ಕಾರ್ಯಕ್ಕೆ ಮುನ್ನುಡಿ ಬರೆದಿರುವ ಕಾರಣಕ್ಕೆ ಇದೊಂದು ಮಹತ್ವದ ಕೃತಿ ಎನ್ನಬಹುದುʼ ಎಂದರು.

ಸಾಹಿತಿ ಕನ್ಯಾಕುಮಾರಿ ಮೂಲಗೆ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿ, ʼಎರಡು ಭಿನ್ನ ಆಯಾಮದಿಂದ ಮೂಡಿ ಬಂದ ಕೃತಿಗಳಲ್ಲಿ ಸಮಕಾಲೀನ ಸಂಕಟ, ಸವಾಲು, ವಾಸ್ತವದ ಅನಾವರಣ ಹಿಡಿದಿಟ್ಟಿದ್ದಾರೆ. ಈಗಷ್ಟೇ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿರುವ ಇಬ್ಬರು ಯುವ ಲೇಖಕರು ಗಟ್ಟಿ ಸಾಹಿತ್ಯ ರಚನೆಗೆ ತೊಡಗಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆʼ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಂಧರ್ವಾ ಸೇನಾ, ಸಂತೋಷ ಮಣಗೇರೆ, ಸುನೀತಾ ಪಾಟೀಲ್, ಚಿತ್ರಸೇನ್ ಫುಲೆ ಹಾಗೂ ಕೃತಿಯ ಲೇಖಕರಾದ ಅಜೇಯ ಪಿ.ಸಂಗಣ್ಣೋರ ಹಾಗೂ ರಾಜು ಮಾರುತಿ ಪವಾರ ಮಾತನಾಡಿದರು.
ಕವಿಗಳಾದ ಚೇತನಕುಮಾರ ಖೇಳಗಿಕರ್, ಶೃತಿ ಎಸ್. ಶೇರಿಕಾರ, ಅವಿನಾಶ ಸೋನೆ, ರವಿದಾಸ ಕಾಂಬಳೆ, ವಿಜಯಲಕ್ಷಿ ಗೌತಮಕರ್, ಅನೀಲ್ ಎಸ್. ಐನಾಕರ್, ಅಶ್ವಜೀತ ದಂಡಿನ, ಕುನಾಲ ಡಿ. ಐನಾಕರ್, ಅಭಯ ಬಿದ್ರೆ, ಎಚ್. ಬಿ. ಪ್ರಿಯಂಕಾ ಅವರು ತಮ್ಮ ಸ್ವರಚಿತ ಕವಿತೆ ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಬಸ್-ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು
ಕಾರ್ಯಕ್ರಮದಲ್ಲಿ ಜನಪದ ಕಲಾವಿದ ಶುಂಭುಲಿಂಗ ವಾಲ್ದೊಡ್ಡಿ, ಹಿರಿಯ ಸಾಹಿತಿ ಶಿವಕುಮಾರ ನಾಗವಾರ, ಕುಪೆಂದ್ರ ಶಾಸ್ತ್ರಿ, ಗಗನ ಫುಲೆ, ಪತ್ರಕರ್ತ ಬಾಲಾಜಿ ಕುಂಬಾರ್ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ದಿಲೀಪಕುಮಾರ ಮೋಘಾ ನಿರೂಪಿಸಿದರು. ಅಜೀತ್ ಎನ್. ನೇಳಗಿ ಸ್ವಾಗತಿಸಿದರು. ಅವಿನಾಶ ಸೋನೆ ವಂದಿಸಿದರು.