ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ಮುಲ್) ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1.5 ರೂ. ಕಡಿತ ಮಾಡಿದೆ. ಬರದ ಪರಿಸ್ಥತಿಯಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಜಿಲ್ಲೆಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಯ ಏಳು ತಾಲೂಕುಗಳು ಬರಪೀಡತವೆಂದು ಸರ್ಕಾರ ಘೋಷಿಸಿದೆ. ಬರ ಪರಿಹಾರ ಬಿಡುಗಡೆ ಮಾಡಿ, ಜಾನುವಾರಗಳಿಗೆ ನೀರು, ಮೇವು ಖರೀದಿಗೆ ಬಳಸುವಂತೆ ಹೇಳಿದೆ. ಆದರೆ, ಇದೇ ಸಂದರ್ಭದಲ್ಲಿ ಮನ್ಮುಲ್ ಹಾಲಿನ ದರ ಕಡಿತ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ” ಎಂದು ಮಂಡ್ಯದ ರೈತ ಸಂತೋಷ್ ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಯ ಬಹುತೇಕ ಲಕ್ಷಾಂತರ ಜನರು ಹೈನುಗಾರಿಕೆ ಮಾಡಿಕೊಂಡು ಬದುಕು ದೂಡುತ್ತಿವೆ. ಈ ಹಿಂದೆ, ಮಳೆ ಚೆನ್ನಾಗಿ ಆಗಿ ಹಾಲು ಉತ್ಪಾದನೆ ಹೆಚ್ಚಾದಾಗ ಮಾತ್ರ ಹಾಲಿನ ದರ ಕಡಿತ ಮಾಡುತ್ತಿದ್ದರು. ಈಗ, ಬರ ಇದ್ದರೂ ಹಾಲಿನ ದರ ಕಡಿತ ಮಾಡಿದ್ದಾರೆ. ಸಹಕಾರ ತತ್ವವನ್ನೇ ಬುಡಮೇಲು ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ರಾಜ್ಯದ ಯಾವುದೇ ಹಾಲು ಒಕ್ಕೂಟವು ಹಾಲಿನ ದರ ಕಡಿತ ಮಾಡಬಾರದು ಎಂದು ಪಶುಸಂಗೋಪನಾ ಸಚಿವರು ಇತ್ತೀಚೆಗಷ್ಟೇ ಹೇಳಿದ್ದರು. ಆದರೂ, ಮನ್ಮುಲ್ ಹಾಲಿನ ದರ ಇಳಿಸಿದೆ. ಮೇವು, ಹಾಲು ಉತ್ಪಾದನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗೊತ್ತಿದ್ದರೂ, ಹಾಲು ಒಕ್ಕೂಟ ಇಂತಹ ಧೋರಣೆಯನ್ನು ಅನುಸರಿಸುತ್ತಿದೆ. ಕೂಡಲೇ, ಹಾಲಿನ ದರ ಕಡಿತ ಮಾಡಿರುವ ಆದೇಶವನ್ನು ಹಿಂಪಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ.