ರಾಹುಲ್ ಗಾಂಧಿ, ಕೇಜ್ರಿವಾಲ್, ಅಖಿಲೇಶ್ ಯಾದವ್ ಅವರನ್ನು ಅಶ್ಲೀಲವಾಗಿ ಚಿತ್ರಿಸಿ, ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ವೈರಲ್ ಮಾಡಲಾಗಿದೆ. ಪೋಸ್ಟರ್ ವೈರಲ್ ಆದ ಬೆನ್ನಲ್ಲೇ, ಮುಸ್ಲಿಂ ಸಮುದಾಯದ ಜನರು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ, ಆಶ್ರುವಾಯುಗಳನ್ನು ಪ್ರಯೋಗಿಸಿದ್ದಾರೆ.
ರಾಜಕೀಯ ನಾಯಕರನ್ನು ಆಶ್ಲೀಲವಾಗಿ ಚಿತ್ರಿಸಿ, ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಪ್ರದೇಶವು ಪ್ರಕ್ಷುಬ್ದಗೊಂಡಿದೆ.
ಆರೋಪಿ ಸುರೇಶ್ ಹಂಚಿಕೊಂಡಿದ್ದ ಪೋಸ್ಟರ್‌ನಲ್ಲಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರನ್ನು ಅರೆನಗ್ನವಾಗಿ ಚಿತ್ರಿಸಲಾಗಿದೆ. ಅವರ ತೊಡೆಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತರುವಂತೆ ಚಿತ್ರಿಸಲಾಗಿದೆ. ಜೊತೆಗೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ಅವಹೇನಾಕಾರಿ ಸಾಲುಗಳನ್ನು ಬರೆಯಲಾಗಿದೆ. ಈ ಪೋಸ್ಟರ್‌ಅನ್ನು ಬಿಜೆಪಿಯೇ ರಚಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಆರೋಪಿ ಸುರೇಶ್ ಮೈಸೂರಿನ ಉದಯಗಿರಿ ಪ್ರದೇಶದವನೇ ಆಗಿದ್ದಾನೆ. ಹೀಗಾಗಿ, ಆತನನ್ನು ಬಂಧಿಸಬೇಕೆಂದು ಆಗ್ರಹಿಸಿ ಸ್ಥಳೀಯ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ಸದ್ಯ, ಆರೋಪಿ ಸುರೇಶ್ ಅಲಿಯಾಸ್ ಪಾಂಡುರಂಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಬಲಗೈ ಬಂಟ, ಮಾತ್ರವಲ್ಲ, ಆತ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾನೆ ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ಕೋಮುಗಲಭೆ ಸೃಷ್ಟಿಸಲು ಹವಣಿಸುತ್ತಿರುವ ಬಿಜೆಪಿ-ಆರ್‌ಎಸ್‌ಎಸ್ ಈ ಸುರೇಶ್‌ನನ್ನು ದಾಳವಾಗಿ ಬಳಸಿಕೊಂಡಿವೆ. ಆತನ ಮೂಲಕ ಪೋಸ್ಟರ್‌ಅನ್ನು ಹರಿಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸೋಮವಾರ ರಾತ್ರಿ ನಡೆದ ಪ್ರತಿಭಟನೆ ವೇಳೆ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನಾಕಾರರ ನಡುವೆ ನುಸುಳಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ತಮ್ಮ ಆರೋಪವು ವಸ್ತುನಿಷ್ಟವಾದುದು ಎಂದು ಲಕ್ಷ್ಮಣ್ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳು ಕಳೆದಿವೆ. ಈ ಒಂದುವರೆ ವರ್ಷದ ಅವಧಿಯಲ್ಲಿ ಸರ್ಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ನಿರಂತರವಾಗಿ ಹವಣಿಸುತ್ತಿದೆ. ಸರ್ಕಾರ ರಚನೆಯಾದ ಆರಂಭದಲ್ಲಿಯೇ ಗ್ಯಾರಂಟಿ ಯೋಜನೆಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಮುಂದಾಗಿದ್ದ ಬಿಜೆಪಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅರ್ಥಿಕತೆ ದಿವಾಳಿಯಾಗುತ್ತದೆ ಎಂದು ಸಾರಿದ್ದವು.
ಆದರೆ, ಗ್ಯಾರಂಟಿ ಯೋಜನೆಗಳಿಗೆ ಉತ್ತಮ ಜನಬೆಂಬಲ ವ್ಯಕ್ತವಾದ ಬಳಿಕ, ಮುಡಾ ಪ್ರಕರಣ – ವಾಲ್ಮೀಕಿ ಹಗರಣವನ್ನು ಮುನ್ನೆಲೆಗೆ ತರಲಾಯಿತು. ಆದರೆ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂಬುದನ್ನು ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದಂತೆಲ್ಲ ಬಿಜೆಪಿ ತನ್ನ ನೆಲೆ ಕಳೆದುಕೊಳ್ಳಲಾರಂಭಿಸಿತು. ಹೀಗಾಗಿ, ಮುಡಾ ಪ್ರಕರಣವನ್ನು ಬಿಜೆಪಿ ಕೈಬಿಟ್ಟಿತು.
ಅದಾದ ಬಳಿಕ, ಬೆಲೆ ಏರಿಕೆಯಂತಹ ವಿಚಾರಗಳೊಂದಿಗೆ ಪ್ರತಿಭಟನೆಗಿಳಿದ ಬಿಜೆಪಿಗೆ, ಇದರಿಂದಲೂ ಹೆಚ್ಚಿನ ಜನ ಬೆಂಬಲ ದೊರೆಯಲಿಲ್ಲ. ಬದಲಾಗಿ ಕೇಂದ್ರದಲ್ಲಿ ಮೋದಿ ಸರ್ಕಾರ ನಿರಂತರವಾಗಿ ಏರಿಸುತ್ತಿರುವ ಬೆಲೆ ಏರಿಕೆ ಬಗ್ಗೆಯೂ ಮಾತನಾಡಬೇಕೆಂಬ ಒತ್ತಾಯ ಕೇಳಿಬಂದವು.
ಹೀಗಾಗಿ, ಅಂತಿಮವಾಗಿ ಬಿಜೆಪಿ-ಆರ್‌ಎಸ್‌ಎಸ್ ತನ್ನ ಯಥಾಪ್ರಕಾರದ ಅಸ್ತ್ರವೆಂಬಂತೆ ಕೋಮುದ್ವೇಷ, ಕೋಮುಗಲಭೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಸುಮಾರು 200-300 ಮಂದಿ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಮುಸ್ಲಿಂ ಟೋಪಿ ಹಾಕಿಕೊಂಡು ಓಡಾಡುತ್ತಿದ್ದಾರೆ. ಸೋಮವಾರ ರಾತ್ರಿ ನಡೆದ ಪ್ರತಿಭಟನೆ ವೇಳೆಯೂ ಅವರೇ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿಯನ್ನು ಉದ್ವಿಘ್ನಗೊಳಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನೇ ಆಗಿರುವ ಆರೋಪಿ ಸುರೇಶ್, ಮೈಸೂರಿನಲ್ಲಿ ಕೋಮುಗಲಭೆ ಉಂಟುಮಾಡುವ, ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಹೇಳನಾಕಾರಿ ಪೋಸ್ಟ್ ಹಾಕಿದ್ದಾನೆ. ಆತನ ಕೃತ್ಯಕ್ಕೆ ಪ್ರತಾಪ್ ಸಿಂಹ ಬೆಂಬಲವಿದೆ. ಇದೀಗ, ವಿಪಕ್ಷ ನಾಯಕ ಆರ್ ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಮೈಸೂರಿಗೆ ತೆರಳುತ್ತಿದ್ದಾರೆ. ಇವರೆಲ್ಲರೂ ಪರಿಸ್ಥಿತಿಯನ್ನು ನಿಭಾಯಿಸುವ, ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮೈಸೂರಿಗೆ ಬರುತ್ತಿಲ್ಲ. ಬದಲಾಗಿ, ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಲು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವರದಿ ಓದಿದ್ದೀರಾ?: ದ್ವೇಷ ಭಾಷಣ ತಡೆಗೆ ವಿಧೇಯಕ; ಶಾಂತಿಯ ತೋಟದ ರಕ್ಷಣೆಗೆ ಅಗತ್ಯ
ಆರ್‌ಎಸ್‌ಎಸ್-ಬಿಜೆಪಿಗರಿಗೆ ಮೈಸೂರಿನಲ್ಲಿ ತಮ್ಮ ರಾಜಕೀಯ ನೆಲೆಯನ್ನು ಗಟ್ಟಿಯಾಗಿ ಇರಿಸಿಕೊಳ್ಳಲು ಗಲಭೆ ಸೃಷ್ಟಿಸಹೊರಟಿದ್ದಾರೆ. ಸೋಮವಾರ ರಾತ್ರಿ, ಪ್ರತಿಭಟನೆ ನಡೆದ ಉದಯಗಿರಿಗೆ ಬಿಜೆಪಿಯ ಪ್ರತಾಪ್ ಸಿಂಹ, ಎಲ್ ನಾಗೇಂದ್ರ, ಗಿರಿಧರ್, ಸಂದೇಶ್ ಸ್ವಾಮಿ ಸೇರಿದಂತೆ ಹಲವರು ಲಗ್ಗೆ ಇಟ್ಟಿದ್ದರು. ಆದರೆ, ಅವರನ್ನು ತಡೆದ ಪೊಲೀಸರು ಸ್ಥಳದಿಂದ ವಾಪಸ್ ಕಳಿಸಿದ್ದಾರೆ. ಆದರೂ, ಅಲ್ಲಿಂದ ಕ್ಯಾತಮಾರನಹಳ್ಳಿಗೆ ಹೋದ ಪ್ರತಾಪ್ ಸಿಂಹ ಮತ್ತು ಇತರ ಬಿಜೆಪಿಗರು ಅಲ್ಲಿ ಸ್ಥಳೀಯರನ್ನು ಸೇರಿಸಿ, ಪ್ರಚೋದನಾಕಾರಿ ಮಾತುಗಳನ್ನಾಡಿದ್ದಾರೆ. ಬಿಜೆಪಿಗರ ಉಪಟಳವನ್ನು ಸಹಿಸಲಾಗದ ಪೊಲೀಸರು, ಅಲ್ಲಿಂದಲೂ ಬಿಜೆಪಿಗರನ್ನು ಓಡಿಸಿದ್ದಾರೆ.
ಈಗ, ಆರ್ ಅಶೋಕ್, ಶೋಭಾ ಕರಂದ್ಲಾಜೆಯೂ ಮೈಸೂರಿಗೆ ಹೋಗುತ್ತಿದ್ದಾರೆ. ಅವರನ್ನು ಮೈಸೂರು ಪ್ರವೇಶಿಸಲು ಬಿಡಬಾರದು. ಅವರು ಮೈಸೂರಿಗೆ ಬಂದರೆ, ಕೋಮುದ್ವೇಷ, ಪ್ರಚೋದನಾಕಾರಿ ಮಾತುಗಳನ್ನಾಡಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುತ್ತಾರೆ. ಅವರನ್ನು ವಾಪಸ್ ಕಳಿಸಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.
ಇನ್ನು, ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ದೂರು ದಾಖಲಿಸಿದ್ದಾರೆ. ಪ್ರತಾಪ್ ಸಿಂಹ ಕುಮ್ಮಕ್ಕಿನಿಂದಲೇ ಆರೋಪಿ ಸುರೇಶ್ ಪೋಸ್ಟ್ ಹಾಕಿದ್ದಾನೆ. ಮೊದಲು ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಆರೋಪಿ ಸುರೇಶ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ, ಅತನ ಕೃತ್ಯದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಬಹಿರಂಗವಾಗುತ್ತದೆ. ಆತನ ಕೃತ್ಯದ ಹಿಂದೆ ಇರುವ ಎಲ್ಲರನ್ನೂ ಬಂಧಿಸಿ, ಕ್ರಮ ಕೈಗೊಳ್ಳಬೇಕು. ಮೈಸೂರಿನಲ್ಲಿ ಕೋಮುಲಗಭೆ ಸೃಷ್ಟಿಯಾಗಲು ಬಿಡಬಾರದು” ಎಂದು ಪೊಲೀಸರನ್ನು ಲಕ್ಷ್ಮಣ್ ಒತ್ತಾಯಿಸಿದ್ದಾರೆ.