ಕಾಣದ ದೆವ್ವಗಳು ಈ ಜಗತ್ತಿನಲ್ಲಿಲ್ಲ ಬದಲಾಗಿ ಕಾಡುವ ದೆವ್ವಗಳು ಮನುಷ್ಯ ರೂಪದಲ್ಲಿದೆ ಎಂದು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.
ಸಾಗರ ತಾಲೂಕು ಆನಂದಪುರ ಸಮೀಪದ ಎಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಗ್ರಾಮ ಸಭೆಯಲ್ಲಿ ಮೂಢನಂಬಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಇದೆ ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕ ವಿಚಾರಧಾರೆಗಳನ್ನು ಮೂಡಿಸುತ್ತಿರುವುದು ಶ್ಲಾಘನೀಯ. ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿಯುತ್ತಿದೆ. ಆದರೆ ನಾವುಗಳು ಇನ್ನು ಮೌಢ್ಯದ ಸಂಕೋಲೆಯಲ್ಲಿ ಜೀವಂತವಾಗಿ ಸಾಯುತ್ತಾ ಇದ್ದೇವೆ. ಇದರಿಂದ ನಾವುಗಳು ಹೊರಬರಬೇಕು, ಮೊದಲು ಮಹಿಳೆಯರು ಜಾಗೃತರಾಗಬೇಕು ಇದರಿಂದ ಇಡೀ ಕುಟುಂಬ ಜಾಗೃತವಾಗಲು ಸಾಧ್ಯವಾಗುತ್ತದೆ. ಪೊಳ್ಳು ಜ್ಯೋತಿಷಿಗಳು ಭವಿಷ್ಯ ಹೇಳುತ್ತಾರೆ. ಅವರ ಭವಿಷ್ಯ ಅವರ ಕೈಯಲ್ಲಿ ಇರುವುದಿಲ್ಲ, ಇನ್ನು ನಮ್ಮ ಭವಿಷ್ಯ ಹೇಳುತ್ತಾರಂತೆ. ನಾವು ಪಂಚಾಂಗದ ಕಡೆ ಗಮನ ಹರಿಸದೆ ಪಂಚ ಅಂಗಗಳ ಕಡೆ ಗಮನ ಹರಿಸಬೇಕು. ಯಾರು ಯಾರ ಹಣೆಬರ ಬರೆಯಲು ಸಾಧ್ಯವಿಲ್ಲ. ನಮ್ಮ ಭವಿಷ್ಯ ನಾವೇ ರೂಪಿಸಿಕೊಳ್ಳಬೇಕು. ಮೌಢ್ಯವನ್ನು ಬುಡ ಸಮೇತ ಕಿತ್ತೊಗೆಯಬೇಕು. ವಿಜ್ಞಾನದ ಕಡೆ ನಮ್ಮ ನಡೆ ಸಾಗಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಭಿವೃದ್ಧಿದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸುತ್ತಮುತ್ತಲಿನ ಊರಿನ ಮಹಿಳೆಯರು ಉಪಸ್ಥಿತರಿದ್ದರು.
