ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಕೊಡಮಾಡುವ ಪ್ರತಿಷ್ಠಿತ ʼಸಾಹಿತ್ಯ ವಿಭೂಷಣʼ ಪ್ರಶಸ್ತಿ ಕವಿ, ಶಿಕ್ಷಕ, ಲೇಖಕ, ರಂಗಭೂಮಿ ಹಾಗೂ ಕುಂಚ ಕಲಾವಿದ ಅಡ್ಕಸ್ಥಳ ಕಬೀರ್ ಅವರಿಗೆ ಲಭಿಸಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಅಡ್ಕಸ್ಥಳ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿರುವ ಕಬೀರ್ ಅವರು, 8 ಅನುವಾದ ಕೃತಿಗಳು ಮತ್ತು 2 ಕವನ ಸಂಕಲನಗಳನ್ನು ಸಾಹಿತ್ಯ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ಪ್ರಸಿದ್ಧ ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಹುಮುಖ ಪ್ರತಿಭೆಯಾಗಿದ್ದಾರೆ.
ಕೇರಳದ ಗಡಿನಾಡಿನಿಂದ ಬಂದು ಕರ್ನಾಟಕದ ಗಡಿನಾಡಿನಲ್ಲಿ ಸೇವೆ ಸಲ್ಲಿಸುತ್ತಾ ಸಂಘ ಸಂಸ್ಥೆಗಳಿಂದ ʼಗಡಿನಾಡಿನ ಕಿಡಿʼ ಎಂಬ ಬಿರುದನ್ನೂ ಪಡೆದಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕೊಳೆಗೇರಿಗಳ ಜನ ನೀರು ನೆರಳು ಬೆಳಕಿಲ್ಲದೆ ನರಳಬೇಕಿರುವುದು ನಾಗರಿಕ ಸಮಾಜದ ನಾಚಿಕೆಗೇಡು
ತನ್ನ ವಿಶಿಷ್ಟ ಸೇವೆಗಾಗಿ ಈಗಾಗಲೇ ಹಲವಾರು ಪ್ರಶಸ್ತಿ, ಪುರಸ್ಕಾರ, ಪಾರಿತೋಷಕಗಳನ್ನು ಪಡೆದಿದ್ದು, ಇದೀಗ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ರಾಷ್ಟ್ರಮಟ್ಟದ ಸಾಹಿತ್ಯ ವಿಭೂಷಣ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
