ಸುಧಾಕರ್ ಇವಾಗಿಂದ ನಿನಗೆ ಸ್ಟಾರ್ಟ್, ನೂರಿದೆ ಎಂದು ನಿನಗೆ ಹೇಳಿದ್ದೇನೆ. ಭ್ರಷ್ಟಾಚಾರ ಮಾಡಬೇಡ ಎಂದು ಮೆಸೇಜ್ ಮಾಡಿದ್ದೇನೆ. ಬಿಜೆಪಿ ನಿನ್ನೊಬ್ಬನದಾ, ಅಸೂಯೆಗೂ ಒಂದು ಮಿತಿ ಇದೆ. ಇನ್ನು ಎಷ್ಟು ಅಂತ ಮಾಡ್ತೀಯಾ, ಮನುಷ್ಯನಾಗಿರು ಎಂದು ಬಿಜೆಪಿ ಮುಖಂಡ ಸಂದೀಪ್ ಬಿ ರೆಡ್ಡಿ ಗುಡುಗಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಧಾಕರ್ ಭ್ರಷ್ಟಾಚಾರ ಮಾಡಬೇಡ, ನಿನ್ನ ಹೆತ್ತವರಿಗೆ ಗೌರವ ತರುವ ಕೆಲಸ ಮಾಡು ಎಂದು ಮೆಸೇಜ್ ಮಾಡಿದ್ದೇನೆ. ಚಿಕ್ಕಬಳ್ಳಾಪುರ ಎಂದರೆ ನನಗೆ ಪ್ರಾಣ. ದ್ವೇ಼ಷ ರಾಜಕಾರಣ ಮಾಡುವುದಿಲ್ಲ ನಾನು. ನನಿಗೆ ಹೆಂಡತಿ ಮಕ್ಕಳಿದ್ದಾರೋ, ನೀನೊಬ್ಬನೇನಾ ಬದುಕಬೇಕಿರೋದು, ನಿಂದೊಬ್ಬಂದ ಪ್ರಪಂಚ, ಹೊಟ್ಟೆಹುರಿಗೂ ಒಂದು ಮಿತಿ ಇಲ್ಲವಾ ಎಂದು ಗರಂ ಆದರು.
ಯಾರಾದರೂ ಬೆಳೆದರೆ ಸಾಕು ಅವರ ವಿರುದ್ಧ ಅಟ್ರಾಸಿಟಿ ಕೇಸು ಹಾಕಿಸುವುದು. ನಿನಗೆ ಬೇಕಾದನ್ನು ನೀನು ಮಾಡಿಕೋ, ಪ್ರಕೃತಿ ವಿರುದ್ಧ ಹೋಗಬೇಡ, ಎಷ್ಟು ದಿನ ಈ ಪಾಪದ ಹೊರೆ ಹೊರುತ್ತೀಯಾ ಸುಧಾಕರ? ಮನುಷ್ಯನಾಗಿ ಬದುಕಪ್ಪ, ನಾಲ್ಕು ದಿನಗಳ ಜೀವನ ಇದು, ನಿನಗೆ ಬೇಕಾದನ್ನು ಮಾಡಿಕೊ, ಬೇರೆಯವರಿಗೆ ಯಾಕೆ ತೊಂದರೆ ಕೊಡುತ್ತೀಯಾ? ಎಲ್ಲದಕ್ಕೂ ಮಿತಿ ಇದೆ ಎಂದು ಕಿಡಿಕಾರಿದರು.
2019ರಲ್ಲಿ ಹೋಬಳಿ ಉಸ್ತುವಾರಿ ಕೊಟ್ಟಾಗ ನನ್ನ ತನು, ಮನ, ಧನಗಳನ್ನ ಅರ್ಪಿಸಿ ಕೆಲಸ ಮಾಡಿದ್ದೇನೆ. ಇಡೀ ಹೋಬಳಿಯಲ್ಲಿ ಅಧಿಕ ಮತ ಪಡೆಯಲು ನನ್ನದೂ ಸಹ ಪಾಲಿದೆ. 2023ರಲ್ಲಿ ನೀವು ನನಗೆ ಕೊಡಬಾರದ ಕಷ್ಟ ಕೊಟ್ಟರೂ ಸಹ ನಿಮ್ಮ ವಿರುದ್ಧ ಕೆಲಸ ಮಾಡಿಲ್ಲ. ಆದರೆ, ಇನ್ಮುಂದೆ ನೈತಿಕವಾಗಿ ನಿನ್ನ ವಿರುದ್ಧ ಕೆಲಸ ಮಾಡುತ್ತೇನೆ ಸುಧಾಕರ್ ಆಕ್ರೋಶಗೊಂಡರು.
ನಿನ್ನ ಕಿರುಕುಳ ತಡೆಯಲಾಗದೆ ನನಗೊಂದು ತಡೆಗೋಡೆ ಬೇಕಿತ್ತು. ಅದಕ್ಕಾಗಿಯೇ ನಾನು ರಾಜಕೀಯಕ್ಕೆ ಬಂದೆ. ನಾನು ರಾಜಕೀಯಕ್ಕೆ ಬಂದಿದ್ದೇ ನಿನ್ನಿಂದ. ಇವತ್ತು ನಿನ್ನ ಬಲೆ ನೀನೆ ಎಣೆದುಕೊಂಡಿದ್ದೀಯಾ. ನೀನು ಮಾಡಿರುವ ಅನಾಚಾರಗಳ ವಿರುದ್ಧ ಕೆಲಸ ಮಾಡುತ್ತೇನೆ. ಪಕ್ಷದ ವಿರುದ್ಧ ಎಂದಿಗೂ ಕೆಲಸ ಮಾಡುವುದಿಲ್ಲ. ನೀನು ಮಾಡಿರುವ ಅನಾಚಾರ ನನಗೆ ಗೊತ್ತಿದೆ ಎಂದು ಹೇಳಿದ್ದೇನೆ. ಹಾಗಿದ್ದರೂ ನೀನು ನನಗೆ ಅಡ್ಡಿಪಡಿಸುತ್ತಿದ್ದೀಯಾ. ಪ್ರತಿಯೊಂದು ಅನಾಚಾರಗಳನ್ನು ಬಯಲಿಗೆಳೆಯುತ್ತೇನೆ. ನಿನ್ನ ಅನಾಚಾರಗಳ ಕುರಿತು ನ್ಯಾಯಧೀಶ ಮೈಕಲ್ ಡಿ ಕುನ್ನಾ ಅವರಿಗೆ ದಾಖಲೆ ಸಮೇತ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.
ಕೋವಿಡ್ ಲಾಕ್ ಡೌನ್ ವೇಳೆ ಹೆಣಗಳು ಬಿದ್ದು ಸಾಯುತ್ತಿದ್ದ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಚೆನ್ನೈ ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಕಳಿಸಿ ಕ್ಯಾಶ್ ಮಾಡಿಕೊಂಡಿರುವ ಮೂಲ ದಾಖಲೆಗಳು ನನ್ನ ಬಳಿ ಇವೆ. ನ್ಯಾಯಮೂರ್ತಿಗಳಾದ ಮೈಕಲ್ ಡಿ ಕುನ್ನಾ ಅವರನ್ನು ಭೇಟಿ ಮಾಡಿ ಅಕ್ರಮದ ದಾಖಲೆಗಳನ್ನು ಕೊಡುತ್ತೇನೆ ಎಂದು ಹೇಳಿದರು.
ನೀನು ಮಾಡಿರುವ ಅನಾಚಾರಗಳ ಕುರಿತು ಸಾಕ್ಷಿ ಸಮೇತ ದಾಖಲೆ ಕೊಡಲು ನಾನು ಸಿದ್ಧ. ಇನ್ಮೇಲೆ ಇನ್ನೊಂದು ಅಧ್ಯಾಯ ಶುರು. ನಿನ್ನ ಗ್ರಹಾಚಾರ ಶುರು ಆಯಿತು. ನೀನಾ ನಾನ ನೋಡೋಣ ಎಂದು ಸವಾಲೆಸೆದರು.
ಇಷ್ಟು ದಿನಗಳ ಕಾಲ ಬುದ್ದಿ ಹೇಳಿದ್ದೇವೆ, ಅವರು ಮಿತಿ ಮೀರಿದೆ. ಹಾಗಾಗಿ ನಾವು ಇದನ್ನ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇನೆ. ಒಬ್ಬ ಮಂತ್ರಿಯಾಗಿ ಈ ರೀತಿ ಮಾಡಲು ನಾಚಿಕೆಯಾಗಬೇಕು. ಇವತ್ತು ಸಾಗರೋಪಾದಿಯಲ್ಲಿ ನನಗೆ ಜನರಿಂದ ಸಂದೇಶಗಳು ಬರುತ್ತಿವೆ. ಮನುಷ್ಯನಾಗು, ನನ್ನ ಹಣ ನಾನು ಜನರಿಗೆ ಖರ್ಚು ಮಾಡುತ್ತೇನೆ. ನಿನ್ನ ಹಂಗಲ್ಲಿ ಯಾರೂ ಇಲ್ಲ, ನೀನ್ಯಾವನು ಅದನ್ನ ಪ್ರಶ್ನೆ ಮಾಡಲು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸುಧಾಕರ್ ಅವರು ಭ್ರಷ್ಟರು, ಇಂತಹ ಕೆಲಸ ಮಾಡಬೇಡಿ, ತಿದ್ದಿಕೊಳ್ಳಿ ಎಂದು ಹೇಳಿದ್ದೇವೆ, ಅವರು ಸೋತಮೇಲೆ ಮಂಕಾಗಿದ್ದರು, ಆದ ಕಾರಣ ನಾವೆಲ್ಲರೂ ಹೋಗಿ ಬುದ್ದಿ ಹೇಳಿದ್ದೆವು. ಇನ್ಮುಂದೆ ಈ ರೀತಿ ಆಗುವುದಿಲ್ಲ ಎಂದು ಹೇಳಿದ್ದರು. ಆ ಕಾರಣಕ್ಕಾಗಿ ಅವರ ಪರ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪಕ್ಷದ ನಾಯಕರು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ತೀರ್ಮಾನ ತೆಗೆದುಕೊಂಡರು ನನಗೆ ಒಪ್ಪಿಗೆ ಇದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಹೇಳಿದರು.
ನೇಮಕಾತಿ ತಡೆಯಲ್ಲಿ ನೂರಕ್ಕೆ ನೂರರಷ್ಟು ಸಂಸದ ಸುಧಾಕರ್ ಅವರ ಪಾತ್ರವಿದೆ. ಅವರೊಬ್ಬ ಹೀನ ಮನಸ್ಥಿತಿಯ ಮನುಷ್ಯ, ಅವರು ಭಯ ಮತ್ತು ಅಸೂಯೆಯಿಂದ ಈ ರೀತಿಯ ಕೆಲಸಗಳನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಜಿಲ್ಲಾಧ್ಯಕ್ಷನಾಗಿ ನೇಮಕವಾದ ಕೂಡಲೇ ಪಕ್ಷದ ವಿರುದ್ಧ ಮಾತಾಡಿದ್ದು, ರಾಜ್ಯಾಧ್ಯಕ್ಷರ ವಿರುದ್ಧ ಗುಡುಗಿದ್ದು ಅವರ ಸಣ್ಣ ಮನಸ್ಥಿತಿಯನ್ನು ತೋರುತ್ತದೆ. ನನ್ನನ್ನ ಯಾರೂ ಸಹ ಬಿಟ್ಟುಕೊಟ್ಟಿಲ್ಲ. ಈ ವಿದ್ಯಾಮಾನದಿಂದ ಎಲ್ಲರಿಗೂ ನೋವಾಗಿದೆ ಎಂದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಚೀನಾಕ್ಕೆ ತಲೆನೋವಾಗಿರುವ ಜನಸಂಖ್ಯೆ- ಭಾರತ ಕಲಿಯಬೇಕಿರುವ ಪಾಠಗಳು!
ಈ ಎಲ್ಲಾ ಬೆಳವಣಿಗಗಳಿಂದ ನನಗೆ ಜನ ಬೆಂಬಲ ಹೆಚ್ಚಾಗಿದೆ. ಸಾಗರೋಪಾದಿಯಲ್ಲಿ ಜನ ಸಂದೇಶ ಕಳಿಸುತ್ತಿದ್ದಾರೆ. ಇಷ್ಟೆಲ್ಲಾ ಪ್ರೀತಿಗೆ ಕಾರಣವಾದ ಸುಧಾಕರ್ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದರು.