ಮೀಲಾದುನ್ನಬಿ ವಿಚಾರವಾಗಿ ಆರಂಭಗೊಂಡ ಸೋಷಿಯಲ್ ಮೀಡಿಯಾ ವಾಗ್ವಾದದಿಂದಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ನಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಈದ್ ಮೀಲಾದ್ ಮೆರವಣಿಗೆಗೆ ಸಂಬಂಧಿಸಿದಂತೆ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಹಸೈನಾರ್ ಎಂಬವರ ಪ್ರಚೋದನಕಾರಿ ಹೇಳಿಕೆಯಿಂದಾಗಿ ಈ ಬೆಳವಣಿಗೆ ನಡೆದಿದೆ. ಬಿ ಸಿ ರೋಡ್ನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಬೆಳಗ್ಗಿನಿಂದಲೇ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರು, ಆಡಿಯೋ ಸಂದೇಶ ರವಾನಿಸಿದವರು ತಾಕತ್ತಿದ್ದರೆ ಬರಲಿ ಎಂದು ಸವಾಲು ಹಾಕಿದ್ದರು.
ಅಲ್ಲದೇ, ಪೊಲೀಸ್ ಬ್ಯಾರಿಕೇಡ್ಗಳನ್ನು ತಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಎನ್.ಯತೀಶ್, ಬಂಟ್ವಾಳದ ಬಿ.ಸಿ ರೋಡ್ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ದ.ಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೈಕಂಬ ಮಸೀದಿಯ ಮೀಲಾದ್ ಮೆರವಣಿಗೆಯ ಮಾರ್ಗವನ್ನು ನಾವು ಬದಲಾವಣೆ ಮಾಡಿಲ್ಲ. ಹಿಂದೂ ಸಂಘಟನೆಯವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದರು. ಹಾಗಾಗಿ, ಬಿ.ಸಿ ರೋಡ್ ಜಂಕ್ಷನ್ನಲ್ಲಿ ಅವಕಾಶ ನೀಡಿದ್ದೆವು. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇವೆ” ಎಂದು ತಿಳಿಸಿದರು.
“ಪ್ರಚೋದನಾಕಾರಿ ಆಡಿಯೋ ಹರಿಯಬಿಟ್ಟ ಇಬ್ಬರ ಮೇಲೆಯೂ ಕ್ರಮವಾಗಿದೆ. ಶರೀಫ್ ಹಾಗೂ ಹಸೈನಾರ್ ಇಬ್ಬರನ್ನು ಬಂಧಿಸಿದ್ದೇವೆ. ಗಣೇಶ ಚತುರ್ಥಿ ಹಾಗೂ ಮೀಲಾದುನ್ನಬಿ ಮುನ್ನವೇ ಶಾಂತಿ ಸಭೆ ಮಾಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಬಿ.ಸಿ ರೋಡಿನಲ್ಲಿ ಬಂದೋಬಸ್ತ್ ಮುಂದುವರೆಸುತ್ತೇವೆ” ಎಂದು ತಿಳಿಸಿದ್ದಾರೆ.
