ಯುಬಿಡಿಟಿ ಉಳಿಸಿ ಅಭಿಯಾನದಡಿ ಎಐಡಿಎಸ್ಓ ಮತ್ತು ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ದಾವಣಗೆರೆ ಬಂದ್ ಭಾಗಶಃ ಯಶಸ್ವಿಯಾಗಿದ್ದು, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು. ವಾಹನಗಳ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು.
‘ಯುಬಿಡಿಟಿ ಉಳಿಸಿ, ಪೇಮೆಂಟ್ ಸೀಟು ನಿಲ್ಲಿಸಲು’ ಒತ್ತಾಯಿಸಿ ನಡೆಸಿದ ದಾವಣಗೆರೆ ಬಂದ್ ಪ್ರತಿಭಟನೆಯ ಸಮಯದಲ್ಲಿ ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಯುಬಿಡಿಟಿ ಉಳಿಸಿ, ಪೇಮೆಂಟ್ ಸೀಟ್ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್ಒ ದಾವಣಗೆರೆ ಬಂದ್‌ಗೆ ಕರೆ ನೀಡಿತ್ತು. ಇದಕ್ಕೆ ಯುಬಿಡಿಟಿ ವಿದ್ಯಾರ್ಥಿಗಳ ಹೋರಾಟ ಸಮಿತಿ, ರೈತ ಸಂಘಟನೆ ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ಬಂದ್ ಹಿನ್ನೆಲೆಯಲ್ಲಿ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಎಐಡಿಎಸ್ ಒ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಶಶಿಕಲಾ, ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಸುಮನ್, ಭಾರತಿ, ಪರಶುರಾಮ, ನಾಗಸ್ಮಿತ, ಅನಿಲ್ ಹಾಗೂ ಹಲವು ರಾಜ್ಯ ನಾಯಕರನ್ನೊಳಗೊಂಡಂತೆ ಯುಬಿಡಿಟಿ ವಿದ್ಯಾರ್ಥಿ ಹೋರಾಟ ಸಮಿತಿಯ ವಿದ್ಯಾರ್ಥಿಗಳನ್ನು, ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಂಧನದ ವೇಳೆ ಸರ್ಕಾರದ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ದ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದೆ. ಈ ನಡೆ ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಯುಬಿಡಿಟಿ ರಾಜ್ಯದ ಏಕೈಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು. ಬಡ, ಮಧ್ಯಮ ವರ್ಗದ ಜನರ ಮಕ್ಕಳಿಗೆ ಆಶಾಕಿರಣವಾಗಿದೆ. ಇದನ್ನೂ ಕೂಡ ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿದೆ. ಇದರ ವಿರುದ್ಧ ಹೋರಾಟ ನಡೆಸಲು ಮುಂದಾದರೆ ಪ್ರತಿಭಟನೆ ನಡೆಸುವವರನ್ನು ಬಂಧಿಸಿ ಹಕ್ಕನ್ನು ಕಿತ್ತುಕೊಳ್ಳುವ ಸರ್ಕಾರದ ನಡೆಗೆ ನಮ್ಮ ವಿರೋಧ ಇದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸೀಟುಗಳನ್ನು ಸಂಪೂರ್ಣವಾಗಿ ಬಡ ವಿದ್ಯಾರ್ಥಿಗಳಿಗೆ ಮೀಸಲಿರಿಸದೆ, ಶೇಕಡ 50ರಷ್ಟು ಸೀಟುಗಳನ್ನು ಆಡಳಿತ ಮಂಡಳಿಯಿಂದ ಪೇಮೆಂಟ್ ಸೀಟುಗಳಾಗಿ ಮಾರಾಟ ಮಾಡಲು ನಿರ್ಧರಿಸಿರುವುದು ಬಡವರ ,ಹಿಂದುಳಿದವರ, ಮಧ್ಯಮ ವರ್ಗದವರ ಮಕ್ಕಳ, ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದುಕೊಂಡಂತಾಗಿದೆ. ಒಂದೆಡೆ ಸರಕಾರವೇ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುತ್ತದೆ. ಇನ್ನೊಂದೆಡೆ ಇದೆಲ್ಲದನ್ನು ವಿರೋಧಿಸಿದ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತದೆ. ಇದು ರಾಜ್ಯ ಸರಕಾರ ವಿದ್ಯಾರ್ಥಿಗಳ ಹೋರಾಟದ ಹಕ್ಕಿನ ಮೇಲೆ ಮಾಡುತ್ತಿರುವ ದಮನಕಾರಿ ನೀತಿಯಾಗಿದೆ. ಈ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಎಐಡಿಎಸ್‌ಒ ರಾಜ್ಯ ಸಮಿತಿಯು ಆಗ್ರಹಿಸಿದೆ.
