ಅಲೆಮಾರಿಗಳ ಅಭಿವೃದ್ಧಿಗಾಗಿ ಬಳ್ಳಾರಿ ಜಿಲ್ಲಾ ಗುಡಿಸಲು ಮುಕ್ತ, ಟೆಂಟ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುತ್ತೇನೆ. ಬಳ್ಳಾರಿಯಲ್ಲಿ ಅಲೆಮಾರಿಗಳ ಸಮುದಾಯ ಭವನಕ್ಕೆ ಒಂದು ಎಕರೆ ಸರ್ಕಾರಿ ಜಮೀನು, 5 ಕೋಟಿ ರೂ. ಹಣ ಮೀಸಲಿಡುತ್ತೇವೆ ಎಂದು ಸಚಿವ ಬಿ ನಾಗೇಂದ್ರ ಭರವಸೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಕರ್ನಾಟಕ ರಾಜ್ಯ ಎಸ್ಸಿಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಆಯೋಜಿಸಿದ್ದ ಎಸ್‌ಸಿ/ಎಸ್‌ಟಿ, ಅಲೆಮಾರಿಗಳ ಜಾಗೃತಿ ಸಮಾವೇಶಕ್ಕೆ ಸಚಿವರು ಚಾಲನೆ ನೀಡಿದರು.
ಸಮಾವೇಶದಲ್ಲಿ ಮಾತನಾಡಿದ ಬಳ್ಳಾರಿ ಶಾಸಕ ಭರತ್ ರೆಡ್ಡಿ, “ಅಲೆಮಾರಿಗಳು ಹಾಗೂ ಹಿಂದುಳಿದವರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ನಾವು ಸದಾ ಸಿದ್ಧರಾಗಿದ್ದೇವೆ. ಅಲೆಮಾರಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ” ಎಂದರು.
ಸಂವಿಧಾನದ ಪೀಠಿಕೆ ಓದಿ, ಬುದ್ಧ-ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಸಮಾವೇಶದಲ್ಲಿ ಕಂಪ್ಲಿ ಶಾಸಕ ಗಣೇಶ್, ಮಾಜಿ ಲೋಕಸಭಾ ಸದಸ್ಯ ಉಗ್ರಪ್ಪ, ಶಿವಕುಮಾರ್ ಕೆ, ಮುತ್ತುರಾಜ್, ಸುನಿಲ್ ಹೇಳವರ, ಶ್ರೀನಿವಾಸ್, ಮದ್ದಿ ದೊಡ್ಡ ಚಮಲಪ್ಪ, ಚೌಡಪ್ಪ, ಕಿನ್ನರಿ ಶೇಷಪ್ಪ, ವೆಂಕಟೇಶ ಶಂಕರ ಬಂಡೆ ವೆಂಕಪ್ಪ, ಅಂಜಿ, ಸಿ ಕೆ ಮಂಜುನಾಥ್ ಇದ್ದರು.