ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಾಗಿದ್ದ ಶಿಕ್ಷಕರೋರ್ವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕೊಟ್ಟೂರು ಕುಪ್ಪಿನಕೆರೆ ಕ್ರಾಸ್ ಬಳಿ ನಡೆದಿದೆ.
ಕೆ ಮುನಿಯಪ್ಪ (56) ಮೃತ ಶಿಕ್ಷಕ. ಇವರು ಮೂಲತ ಹರಪನ ಹಳ್ಳಿ ತಾಲೂಕಿನ ಹುಣಸೆಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.
ಬೆಳಗ್ಗೆ 9ರ ಸುಮಾರಿಗೆ ಕೊಟ್ಟೂರಿನಿಂದ ಕೂಡ್ಲಿಗಿ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಶಾಲಾ ಬಸ್ ಡಿಕ್ಕಿಯಾಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತ ಶಿಕ್ಷಕ ಮುನಿಯಪ್ಪ ಕೊಟ್ಟೂರು ತಾಲೂಕಿನ ಅಮ್ಮನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು .ಸದ್ಯ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಕೊಠಡಿ ಮೇಲ್ವಿಚಾರಣೆಗೆ ನೇಮಕಗೊಂಡಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಬಳಿಕ ಸಾರ್ವಜನಿಕರ ನೆರವಿನಿಂದ ಪಟ್ಟಣದ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಕಲ್ಪಿಸಿದರು.
