ಐದು ದಿನಗಳ ಕಲ್ಯಾಣ ಕರ್ನಾಟಕದ ಪ್ರಥಮ ಜಾಂಬೊರೇಟ್ ಪರಂಪರೆ ನಗರ ಬೀದರ್‌ನಲ್ಲಿ ಗುರುವಾರ
ಆರಂಭಗೊಂಡಿತು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ಹಮ್ಮಿಕೊಂಡ ಜಾಂಬೊರೇಟ್‌ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಲರವ ಕಂಡು ಬಂದಿತು.
ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಪರಿಸರದಲ್ಲಿ ತೆರೆದ ಜೀಪ್‌ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖರ ಮೆರವಣಿಯೊಂದಿಗೆ ಜಾಂಬೊರೇಟ್ ಚಟುವಟಿಕೆಗಳಿಗೆ ಚಾಲನೆ ದೊರಕಿತು.
ಬ್ಯಾಂಡ್ ಜತೆಗೆ ತೆರೆದ ಜೀಪ್‌ನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಾಂಬೋರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ ಅವರ
ಮೆರವಣಿಗೆ ನಡೆಯಿತು. ಸಮವಸ್ತ್ರ ಧರಿಸಿದ್ದ ಸ್ಕೌಟ್ಸ್ ಹಾಗೂ ಗೈಡ್ಸ್ ಗಳು ಗಣ್ಯರ ಮೇಲೆ ಪುಷ್ಪವೃಷ್ಟಿ ಮಾಡಿದರು. ಜಾಂಬೊರೇಟ್ ಗೀತೆ ಹಾಡಿ, ನರ್ತನ ಮಾಡಿ ಸಂಭ್ರಮಿಸಿದರು.
ನೆಹರೂ ಕ್ರೀಡಾಂಗಣದಿಂದ ಮೊಹನ್ ಮಾರ್ಕೆಟ್, ಹಳೆಯ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಜಾಥಾ ಜರುಗಿತು.

ಕೈಯಲ್ಲಿ ಆಯಾ ಜಿಲ್ಲೆಗಳ ಬ್ಯಾನರ್ ಹಿಡಿದುಕೊಂಡಿದ್ದ ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ಗಳು ಜಾಂಬೊರೇಟ್ ಗೀತೆ ಹಾಡುತ್ತ ಶಿಸ್ತಿನಿಂದ ಸಾಗಿದರು. ಬ್ಯಾಂಡ್ ಜಾಥಾದ ಮೆರುಗು ಹೆಚ್ಚಿಸಿತು. ವಿದ್ಯಾರ್ಥಿಗಳಿಂದ ಘೋಷವಾಕ್ಯಗಳು ಮೊಳಗಿದವು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 3500 ಸ್ಕೌಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ಗಳು ಭಾಗವಹಿಸಿದ್ದರು. ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಜಾಥಾಗೆ
ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ಆಯೋಗಕ್ಕೆ ಅಧ್ಯಕ್ಷರಿಲ್ಲ; ಶೋಷಿತ ಹೆಣ್ಣುಮಕ್ಕಳ ನೋವು ಕೇಳುವವರಿಲ್ಲ
ಜಾಂಬೊರೇಟ್ ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜುಜಾರೆ, ಕಾರ್ಯದರ್ಶಿ ಕೆ. ಗಂಗಪ್ಪ ಗೌಡ, ಗೈಡ್ ರಾಜ್ಯ ಆಯುಕ್ತೆ ಗೀತಾ ನಟರಾಜ, ಸ್ಕೌಟ್ ಆಯುಕ್ತ ಖಾಲೀದ್, ಕಲಬುರಗಿ ವಿಭಾಗೀಯ ಆಯುಕ್ತ ಸಿ.ಬಿ. ಪಾಟೀಲ ಓಕಳಿ, ಡಾ. ಕುಗ್ಗಲ್ ವೀರೇಶ, ವಿಜಯಸಿಂಗ್, ನಾಗರಾಜ, ಬೇಬಿ ಮ್ಯಾಥ್ಯೂ, ಗಜಾನನ ಮನಿಕೇರಿ, ಜಾಂಬೊರೇಟ್ ಕಾರ್ಯದರ್ಶಿ ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್, ಬಾಬುರಾವ್ ನಿಂಬೂರೆ, ಅನಿಲ್ ಶಾಸ್ತ್ರೀ, ಶಾಮಲಾ ಕೆ.ವಿ. ಕೃಪಾ ವಿಜಯ್, ರಾಮಲತಾ ಮೊದಲಾದವರು ಪಾಲ್ಗೊಂಡಿದ್ದರು.