ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ (ಟಿಎಸ್‌ಪಿ) ಯೋಜನೆಗೆ ಮೀಸಲಿಟ್ಟ ಹಣವು ದುರುಪಯೋಗ ಆಗುತ್ತಿದ್ದು, ಕೂಡಲೇ ಈ ಹಣವನ್ನು ದಲಿತರ ಅಭಿವೃದ್ಧಿಗಾಗಿ ಹಿಂದುರಿಗಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿಯ ಜಗತ್ ವೃತ್ತದಲ್ಲಿ ಮಂಗಳವಾರ ಜಮಾಯಿಸಿದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪಾ ಹಳ್ಳಿ ಮಾತನಾಡಿ, ʼದಲಿತ ಸಂಘರ್ಷ ಸಮಿತಿ ಚಳವಳಿಯ ಭಾಗವಾಗಿ 2013-14ರಲ್ಲಿ ಸಿದ್ಧರಾಮಯ್ಯ ಸರ್ಕಾರವೇ ಜಾರಿಗೊಳಿಸಿದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಕಾಯ್ದೆಯು ತನ್ನ ಪರಿಭಾಷೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಎಂಬುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆಯಾಗಿದೆ. ಆದರೆ ಕರ್ನಾಟಕ ಮಾನವ ಅಭಿವೃದ್ಧಿ ವರದಿ 2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿದರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಸರಾಸರಿ ಅಭಿವೃದ್ಧಿಗಿಂತಲೂ ದಲಿತರು ಕಡಿಮೆ ಅಭಿವೃದ್ಧಿ ಹೊಂದಿರುವುದು ಕಂಡುಬಂದಿದೆʼ ಎಂದು ಹೇಳಿದರು.
ʼ2023-24ನೇ ಸಾಲಿನಿಂದ ಸುಮಾರು ₹25 ಸಾವಿರ ಕೋಟಿ ಹಣ ಗ್ಯಾರಂಟಿಗಳಿಗೂ ₹15 ಸಾವಿರ ಕೋಟಿ ಹಣ ಅನ್ಯ ಉದ್ದೇಶಗಳಿಗೆ ಬಳಸಿರುವುದು ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರ ಕೂಡ ಮಾಡಿದಂತಾಗಿದೆ. ಅದಷ್ಟೇ ಅಲ್ಲದೆ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಉಳಿದ ಸಚಿವರು ಈ ಕ್ರಮವನ್ನು ಸಮರ್ಥಿಸಿರುವುದು ದುರಂತ ಮತ್ತು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಬೇಲಿಯೇ ಎದ್ದು ಹೊಲ ಮೇಯುತ್ತಿದೆʼ ಎಂಬಂತೆ ದಲಿತರ ಒಗ್ಗಟ್ಟಿನ ಮತಗಳಿಂದ ರಚನೆಯಾದ ಕಾಂಗ್ರೆಸ್ ಸರ್ಕಾರ, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ದಲಿತ ಸಮುದಾಯಗಳಿಗೆ ಬಗೆದ ಮಹಾ ದ್ರೋಹ. ಹಾಗಾಗಿ ದಲಿತ ಸಂಘರ್ಷ ಸಮಿತಿ ಸರ್ಕಾರದ ಈ ದುರ್ವತನೆಯನ್ನು ತೀವ್ರವಾಗಿ ಖಂಡಿಸುತ್ತದೆʼ ಎಂದರು.
ʼಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳಾಗಿವೆ, ಕನ್ನಡಿಗರೆಲ್ಲರಿಗೂ ಈ ಯೋಜನೆಯಿಂದ ಅನುಕೂಲವಾಗಿದೆ. ಆದರೆ ಗ್ಯಾರಂಟಿಗಳ ಉದ್ದೇಶವೇ ಬೇರೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಉದ್ದೇಶವೇ ಬೇರೆಯಾಗಿದೆ. ಗ್ಯಾರಂಟಿಗಳು ದಲಿತರು ಮತ್ತು ದಲಿತೇತರರ ನಡುವಿನ ಸಾಮಾಜಿಕ, ಆರ್ಥಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದಿಲ್ಲ. ಈ ಹಿಂದೆ ದಲಿತ ಸಂಘಟನೆಗಳ ಒತ್ತಾಯಕ್ಕೆ ಮಣಿದು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ‘7ಡಿ’ ಸೆಕ್ಷನ್ ರದ್ದುಪಡಿಸಿದಂತೆ ”7ಸಿ’ ಸೆಕ್ಸನ್ ಕೂಡ ರದ್ದುಪಡಿಸಬೇಕುʼ ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ ಸೇರಿದಂತೆ ದಸಂಸ ಪ್ರಮುಖರಾದ ಜಯಕುಮಾರ ನೂಲಕರ್, ರಮೇಶ ಕವಡೆ, ಸಂತೋಷ ತೆಗನೂರ, ಉದಯಕುಮಾರ ಸಾಗರ, ಪುಜಾರಪ್ಪ ಮೇತ್ರಿ, ಬಸವರಾಜ ದೊಡ್ಡಮನಿ, ಶಿವಮೂರ್ತಿ ಪಾಮನೂರ, ಮಲ್ಲಿಕಾರ್ಜುನ ಗೌಡ, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಹಳ್ಳಿ, ಭೀಮಾಶಂಕರ ಮರತೂರ್ ಮತ್ತಿತರರು ಪಾಲ್ಗೊಂಡಿದ್ದರು.
ಬೀದರ್‌ನಲ್ಲಿ ದಸಂಸ ಪ್ರತಿಭಟನೆ :
ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ (ಟಿಎಸ್‌ಪಿ) ಯೋಜನೆಗೆ ಮೀಸಲಿಟ್ಟ ಹಣವು ದುರುಪಯೋಗ ಆಗುತ್ತಿದ್ದು ಎಂದು ಆರೋಪಿಸಿ ಬೀದರ್‌ನಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಸಂಸ ಜಿಲ್ಲಾಧ್ಯಕ್ಷ ತುಕರಾಮ್ ಲಾಡಕರ್ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಾಗೂ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ದಲಿತ ಸಮುದಾಯಗಳಿಗೆ ಅಸಮಾಧಾನ ಉಂಟು ಮಾಡಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ದಲಿತರ ಏಳಿಗೆಗಾಗಿ ಬಳಕೆಯಾಗುವಂತೆ ಕ್ರಮಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ದಸಂಸ ಪ್ರಮುಖರಾದ ಕಿಶೋರ್ ಮೇಲ್ದೊಡ್ಡಿ, ರಾಜಕುಮಾರ್ ಚಂದನ್, ಅಂಕುಶ ಡಾಂಗೆ ಮತ್ತಿತರರು ಇದ್ದರು.
ಯಾದಗಿರಿ : ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರುಪಯೋಗ ಖಂಡಿಸಿ ಸಿಎಂಗೆ ಮನವಿ
ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ (ಟಿಎಸ್‌ಪಿ) ಯೋಜನೆಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ಬಳಸುತ್ತಿರುವುದನ್ನು ಖಂಡಿಸಿ ದಸಂಸ ಯಾದಗಿರಿಯ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂಬಂಧ ದಸಂಸ ಜಿಲ್ಲಾ ಸಂಚಾಲಕ ಮರೆಪ್ಪಾ ಚಟ್ಟೆರಕರ್ ನೇತ್ರತ್ವದಲ್ಲಿ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.

ʼಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ದಲಿತರಿಗೆ ಮೀಸಲಿಡುವ ಹಣವನ್ನು ಅಸಮಾನತೆಯ ಅಂತರವನ್ನು ಕಡಿಮೆ ಮಾಡುವ ಯೋಜನೆಗಳಲ್ಲಿ ವಿನಿಯೋಗಿಸಬೇಕೇ ಹೊರತು ಎಲ್ಲರ ಅಭಿವೃದ್ಧಿಗೆ ರೂಪಿಸುವ ಯೋಜನೆಗಳಲ್ಲಿ ಅಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಕಾಲಕ್ಕೆ ಸಿಗದ ಗೌರವಧನ : 147 ಅತಿಥಿ ಶಿಕ್ಷಕರು ಹೈರಾಣು
ಗೋಪಾಲ ತೆಳಗೇರಿ, ಪರಶುರಾಮ್ ಒಡೆಯರ್, ಸಂಪತ್ ಚಿನ್ನಾಕಾರ, ಭೀಮರಾಯ ಹೊಸಮನಿ, ಬಾಲರಾಜ ಖಾನಾಪೂರ, ವಸಂತ ಸುಂಗಲಕರ್, ಮಲ್ಲಿಕಾರ್ಜುನ ಕುರಕುಂದಿ, ಆನಂದ ಹೊಸಳ್ಳಿ, ನಾಗರಾಜ ಕೂಲೂರ್, ಮದೇವಪ್ಪ ಬದ್ದೆಪಲ್ಲಿ, ಮಲ್ಲಪ್ಪ ನೂಲ, ಮಲ್ಲಿಕಾರ್ಜುನ ಇನ್ನಿತರರು ಇದ್ದರು.