ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ನಡೆದ ಮೂರು ಕೊಲೆ, ಹತ್ತಕ್ಕೂ ಅಧಿಕ ಕೊಲೆ ಯತ್ನ ಘಟನೆಯನ್ನು ಸೂಕ್ತ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಎಸ್‌ಡಿಪಿಐ ನಾಯಕ ಜಲೀಲ್ ಕೃಷ್ಣಾಪುರ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ನಿವಾಸಿ ಮುಹಮ್ಮದ್ ಅಶ್ರಫ್, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹಾಗೂ ಕೊಳ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣವನ್ನು ಎಸ್‌ಐಟಿ ರಚಿಸಿ ಸೂಕ್ತ ತನಿಖೆ ನಡೆಸಬೇಕು. ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಜಿಲ್ಲೆಯಲ್ಲಿ ನಡೆದ 11 ಕೊಲೆ ಯತ್ನ ಹಾಗೂ ಹಲವು ದಾಳಿಗೆ ಯತ್ನ ಘಟನೆಗಳನ್ನು ಕೂಡಾ ಸಿಟ್ ತನಿಖೆ ನಡೆಸಿ ಇದರ ಹಿಂದಿರುವ ಎಲ್ಲಾ ಅಪರಾಧಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಜಿಲ್ಲೆಯಲ್ಲಿ ಬಲವಂತದ ಬಂದ್ ನಡೆಸಿದವರನ್ನು ಬಂಧಿಸಬೇಕು. ಅಲ್ಲದೇ, ಸುಹಾಸ್ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ ಎಲ್ಲರನ್ನೂ ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಅಮಾಯಕರಾದ ಅಶ್ರಫ್ ಮತ್ತು ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ ಪೂರ್ವಯೋಜಿತ ವ್ಯವಸ್ಥಿತವಾದ ಗುಂಪು ಹತ್ಯೆಯಾಗಿದ್ದು, ಎರಡೂ ಪ್ರಕರಣದ ಆರೋಪಿಗಳ ವಿರುದ್ಧ ಯು.ಎ.ಪಿ.ಎ. ಕಾಯ್ದೆ ಹಾಕಬೇಕು ಎಂದು ಆಗ್ರಹಿಸಿದರು.
ಅಶ್ರಫ್ ಮತ್ತು ರಹ್ಮಾನ್ ಕುಟುಂಬ ಕಡು ಬಡತನದಲ್ಲಿ ದಿನದೂಡುವ ಕುಟುಂಬಗಳಾಗಿವೆ. ರಹ್ಮಾನ್ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ರಹ್ಮಾನ್ ಹತ್ಯೆಯ ಬಳಿಕ ಕುಟುಂಬ ಕಂಗಾಲಾಗಿದೆ. ಈ ಎರಡೂ ಕುಟುಂಬಗಳಿಗೆ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಎಲ್ಲಾ ಬೇಡಿಕೆಗಳ ಈಡೇರಿಸುವಂತೆ ನಾವು 24 ಗಂಟೆಯ ಗಡುವು ನೀಡಿದ್ದು ಇಂದು ರಾತ್ರಿಗೆ ಗಡುವು ಮುಕ್ತಾಯವಾಗಲಿದೆ. ಗಡುವು ಮುಗಿದರೂ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಯಾವ ರೀತಿಯಲ್ಲಿ ಪ್ರತಿಭಟನೆ, ಹೋರಾಟ ಮಾಡಬೇಕು ಎಂಬುದನ್ನು ಇಡೀ ಮುಸ್ಲಿಮ್ ಸಮುದಾಯವನ್ನು ಒಗ್ಗೂಡಿಸಿ ತೀರ್ಮಾನ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಎಸ್.ಡಿ.ಪಿ.ಐ. ರಾಜ್ಯ ನಾಯಕ ರಿಯಾಝ್ ಕಡಂಬು ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲು ನಿವಾಸಿ ಅಬುಲ್ ರಹ್ಮಾನ್ ಕೊಲೆ ಬಿಜೆಪಿ, ಸಂಘಪರಿವಾರ ನಡೆಸಿರುವ ವ್ಯವಸ್ಥಿತವಾದ ಪೂರ್ವಯೋಜಿತ ಕೃತ್ಯವಾಗಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಜಿಲ್ಲೆಯ ಪೊಲೀಸರ ವೈಫಲ್ಯ ಕಾರಣವಾಗಿದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಮಂಗಳೂರಿಗೆ ತೆರಳಲು ನನಗೆ ಸಿಎಂ ಸೂಚನೆ ನೀಡಿಲ್ಲ, ಚರ್ಚಿಸಿದ್ದಾರಷ್ಟೇ: ಬಿ ಕೆ ಹರಿಪ್ರಸಾದ್
ಜಿಲ್ಲೆಯಲ್ಲಿ ಸಂಘಪರಿವಾರ ನಡೆಸುತ್ತಿರುವ ಕೊಲೆ, ಕೊಲೆಯತ್ನ ಹಾಗೂ ಕಾನೂನು ಬಾಹಿರ ಕೃತ್ಯಗಳ ಗಂಭೀರತೆ ರಾಜ್ಯ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಜಿಲ್ಲೆಯ ಪೊಲೀಸ್ ಇಲಾಖೆಯ ನಿಯಂತ್ರಣವೂ ಸರಕಾರದ ಕೈಯಲ್ಲಿ ಇಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆ ನಿಯಂತ್ರಣ ಮಾಡುವ ದಮ್ಮು ತಾಕತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಉಸ್ತುವಾರಿ ಸಚಿವ ಮತ್ತು ಗೃಹ ಸಚಿವ ಬೆಂಗಳೂರಿನಲ್ಲಿ ಕೂತು ಬೇಜಾವ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಗುಂಡೂವಾರ್ ಮತ್ತು ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ಪಕ್ಷದ ನಾಯಕರಾದ ಅನ್ವರ್ ಸಾದತ್, ಮುನೀಶ್ ಅಲಿ, ಅಶ್ರಫ್ ಅಡ್ಡೂರ್, ಅಕ್ಬರ್ ಅಲಿ ಉಪಸ್ಥಿತರಿದ್ದರು.