ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತಾಗಿ ನೀಡಿದ ಹೇಳಿಕೆಯನ್ನು ಖಂಡಿಸಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಸಂವಿಧಾನ ರಕ್ಷಣಾ ಸಮಿತಿ ಕರೆ ಕೊಟ್ಟ ಸೇಡಂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕೋತ್ತಲ ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತದವರೆಗೆ ಅಮೀತ್ ಶಾ ಅವರ ಅಣಕು ಶವಯಾತ್ರೆ ಮೆರವಣಿಗೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿ ದಹಿಸಿದರು. ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
ಸಮಿತಿಯ ಮುಖಂಡ ಮಹಾಂತಪ್ಪ ಸಂಗಾವಿ ಮಾತನಾಡಿ, “ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೀಳಾಗಿ ಮಾತನಾಡಿದ್ದು ತೀವ್ರವಾಗಿ ಖಂಡಿಸುತ್ತೇವೆ. ಸಂವಿಧಾನ ಅಡಿಯಲ್ಲಿ ಗೆದ್ದು ಗೃಹ ಮಂತ್ರಿಯಾದ ಶಾ ಅಂಬೇಡ್ಕರ್ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ದೇಶದ ಜನತೆಗೆ ಕ್ಷಮೆಯಾಚಿಸಬೇಕುʼ ಎಂದು ಆಗ್ರಹಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ ಅಮೀತ್ ಶಾ ಅವರ ಹೇಳಿಕೆ ಸಹಿಸಲಾಗದು. ಅವರನ್ನು ಸಂಪುಟದಿಂದ ವಜಾಗೊಳಿಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಅಂಬೇಡ್ಕರ್ ಅನುಯಾಯಿಗಳು ದೇಶದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ ಯಶಸ್ವಿ | ಅಮಿತ್ ಶಾ ರಾಜೀನಾಮೆ ನೀಡದಿದ್ದರೆ ‘ಚಲೋ ಪಾರ್ಲಿಮೆಂಟ್’ ಎಚ್ಚರಿಕೆ
ಪ್ರತಿಭಟನೆಯಲ್ಲಿ ಪ್ರಮುಖರಾದ ರಾಮಯ್ಯ, ಪೂಜಾರಿ, ಸಾಜೀದ್ ಖಾನ್, ಶೇಖ ಆದಂ, ರಾಜು ಹಡಪದ, ಶಂಭುಲಿಂಗ ನಾಟೀಕರ್, ಶಿವಶರಣರೆಡ್ಡಿ, ಮಾರುತಿ ಕೊಡಂಗಲಕರ್, ಜೈಭೀಮ ಊಡಗಿ, ವಿಲಾಸೆ ಗೌತಮ್ ರಾಜು ಚವ್ಹಾಣ, ಜಗನ್ನಾಥ ಚಿಂತಪಳ್ಳಿ, ಅಬ್ದುಲ್ ಗಪ್ಪುರ, ರಾಜು ನೀಲಂಗಿ, ಸತೀಶ್ ಪೂಜಾರಿ, ನಾಗೇಂದ್ರಪ್ಪಾ ಸೇಡಂ, ಸೈಯದ್ ನಾಜೀಂ, ಹಾದ್ ನಾಜೀಂ, ಅರುಣಕುಮಾರ ಮೂಡಬಾಳಕರ್, ಬಸವರಾಜ ಕಾಳಗಿ, ಸಿದು ಡೊಣ್ಣೂರ್, ಅಂಬರೀಶ್, ಸೈಯದ್ ಶಮಶೋದಿನ್ , ಬಸವರಾಜ ಮುತ್ತಂಗಿಕರ್, ಭೀಮಶಂಕರ ಕೋರವಿ, ಮೈಲಾರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.