ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆ ಮಾಡುವಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶ, ನಿರ್ದೇಶನವನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ನೈಜ ಹೋರಾಟಗಾರರ ವೇದಿಕೆಯು ರಾಜ್ಯಪಾಲರಿಗೆ ದೂರು ನೀಡಿದೆ.
ಈ ಬಗ್ಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿರುವ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್. ಎಂ. ವೆಂಕಟೇಶ್, ಬಿ.ಎಸ್ ಲೋಕೇಶ್ ಅವರು, ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಬದಿಗೆ ತಳ್ಳಿ ಶೋಧನಾ ಸಮಿತಿಯನ್ನು ರಚಿಸದೆ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಒಳಗೊಂಡ ಆಯ್ಕೆ ಸಮಿತಿಯು ನೇರವಾಗಿ ಮಾಹಿತಿ ಆಯುಕ್ತರ ಆಯ್ಕೆ ಮಾಡಲು ಹೊರಟಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ರಿಟ್ ಪಿಟಿಷನ್ (ಸಿವಿಲ್) ನಂ.436/2018 ಆದೇಶದ ದಿನಾಂಕ: 15/02/2019ರ ಉಲ್ಲೇಖದ ಅನ್ವಯ ಕರ್ನಾಟಕ ರಾಜ್ಯದಲ್ಲಿ ಬಹಳ ಕಾಲದಿಂದ ನನೆಗುದಿಗೆ ಬಿದ್ದ ಮಾಹಿತಿ ಆಯುಕ್ತರ ಆಯ್ಕೆ ಮಾಡಲು ಭಾರತದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮೊದಲು ಶೋಧನಾ ಸಮಿತಿಯನ್ನು ರಚಿಸಿ, ಸಮಿತಿಯು ಮಾಡುವ ಶಿಫಾರಸ್ಸುಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಬೆಕು. ಆ ನಂತರ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆ ಮಾಡಬೇಕಾಗಿತ್ತು. ಇದರಿಂದ ಸುಪ್ರೀಂ ಕೋರ್ಟಿನ ನಿರ್ದೇಶನ ಮತ್ತು ಆದೇಶವನ್ನು ಪಾಲನೆ ಮಾಡಿದಂತಾಗುತ್ತಿತ್ತು. ಆದರೆ ನಮಗೆ ಬಂದ ಮಾಹಿತಿಯ ಆಧಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ನಿರ್ದೇಶನವನ್ನು ಬದಿಗೆ ತಳ್ಳಿ ಶೋಧನಾ ಸಮಿತಿಯನ್ನು ರಚಿಸದೆ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಒಳಗೊಂಡ ಆಯ್ಕೆ ಸಮಿತಿಯು ನೇರವಾಗಿ ಮಾಹಿತಿ ಆಯುಕ್ತರ ಆಯ್ಕೆ ಮಾಡಲು ಹೊರಟಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ನೈಜ ಹೋರಾಟಗಾರರ ವೇದಿಕೆಯು ಉಲ್ಲೇಖಿಸಿದೆ.
ಮಾಹಿತಿ ಆಯುಕ್ತರ ಆಯ್ಕೆಯಲ್ಲಿ ಹಲವಾರು ಲೋಪದೋಷಗಳಿದ್ದು ಪ್ರಭಾವಿಗಳು, ಶಿಫಾರಸ್ಸು ಮಾಡಿದವರಿಗೆ, ಅರ್ಜಿ ಸಲ್ಲಿಸದೆ ಇರುವವರಿಗೆ ಮತ್ತು ಜಾತಿವಾರು ಲೆಕ್ಕಾಚಾರದಲ್ಲಿ ಆಯ್ಕೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಗುತ್ತಿದೆ. ಸದರಿ ಆಯ್ಕೆಯು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆಗೆ ಒಳಪಡುತ್ತದೆ ಎಂಬ ಅಂಶ ನಮಗೆ ಸ್ಪಷ್ಟವಾಗಿ ಗೋಚರಿಸಿದೆ. ಆದುದರಿಂದ ರಾಜ್ಯ ಸರ್ಕಾರವು ಮಾಹಿತಿ ಆಯುಕ್ತರ ಆಯ್ಕೆ ಮಾಡಿರುವ ಪಟ್ಟಿಯನ್ನು ತಮಗೆ ಕಳುಹಿಸಿದ್ದಲ್ಲಿ ಸರ್ಕಾರಕ್ಕೆ ವಾಪಸ್ ಹಿಂತಿರುಗಿಸಿ ಸುಪ್ರೀಂ ಕೋರ್ಟ್ ಆದೇಶ, ನಿರ್ದೇಶನದಂತೆ ಮತ್ತು ಶೋಧನಾ ಸಮಿತಿಯ ವರದಿ ಮೂಲಕ ಆಯ್ಕೆ ಮಾಡುವಂತೆ ಪಟ್ಟಿಯನ್ನು ಪುನರ್ಪರಿಶೀಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಮಾಹಿತಿ ಹಕ್ಕು ಅಧಿನಿಯಮ 2005 ರ ಪ್ರಕಾರ ಮತ್ತು ಮೇಲ್ಕಂಡ ಉಲ್ಲೇಖದಂತೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಕರ್ನಾಟಕ ರಾಜ್ಯ ಸರ್ಕಾರವು ಮಾಹಿತಿ ಆಯುಕ್ತರ ಆಯ್ಕೆ ಮಾಡುತ್ತಿಲ್ಲ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ಈ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸದೆ ನೇರವಾಗಿ ಆಯ್ಕೆಯಾಗಿರುವ ಮಾಹಿತಿ ಆಯುಕ್ತರಿಗೆ ಪ್ರಮಾಣವಚನವನ್ನು ಬೋಧಿಸಬಾರದು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ಒಂದು ವೇಳೆ ತಾವು ತ್ವರಿತವಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಆಯುಕ್ತರ ಪಟ್ಟಿಯಂತೆ ಪ್ರಮಾಣವಚನ ಬೋಧಿಸಿದ್ದಲ್ಲಿ ಅದು ನ್ಯಾಯ ಸಮ್ಮತವಾಗಿರುವುದಿಲ್ಲ ಹಾಗೂ ಸುಪ್ರೀಂ ಕೋರ್ಟಿನ ಮಾರ್ಗದರ್ಶನದ ಉಲ್ಲಂಘನೆಯಾಗುತ್ತದೆ ಹಾಗೂ ನ್ಯಾಯಾಂಗ ನಿಂದನೆ ಆಗುತ್ತದೆ ಎಂಬುದು ನಮ್ಮ ಅನಿಸಿಕೆ. ಆದುದರಿಂದ ಉಲ್ಲೇಖದಲ್ಲಿ ನಮೂದಿಸಿರುವ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ಆದೇಶ ಪ್ರತಿಯನ್ನು ಪರಿಶೀಲಿಸಿ ಮತ್ತು ರಾಜ್ಯ ಸರ್ಕಾರವು ಶೋಧನಾ ಸಮಿತಿಯನ್ನು ರಚಿಸಿರುವ ಬಗ್ಗೆ ಯಾವುದೇ ಪಾರದರ್ಶಕವಾದ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಹಾಗಾಗಿ ನೇರವಾಗಿ ಮಾಹಿತಿ ಆಯುಕ್ತರನ್ನು ಆಯ್ಕೆ ಮಾಡಿರುವುದನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ನೈಜ ಹೋರಾಟಗಾರರ ವೇದಿಕೆಯು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದೆ.
