- ‘ಸಾರಿಗೆ ನಿಗಮಗಳು ಬಸ್‌ಗಳು ಡೀಸೆಲ್ ಇಲ್ಲದೆ ನಿಲ್ಲಬಹುದು’
- ಮೊದಲ ಕಂತಿನ ಹಣ ಈಗಾಗಲೇ ಸರ್ಕಾರದಿಂದ ಬಿಡುಗಡೆ
ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳು ಹುಸಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಬರುವಂತ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್‌ಗಳನ್ನು ಡೀಸೆಲ್ ಇಲ್ಲದೆ ನಿಲ್ಲಿಸುವಂತದ್ದು, ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತದ್ದು, ಕೆಟ್ಟ ಬಸ್‌ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ” ಎಂದು ಟೀಕಿಸಿದ್ದಾರೆ.
ಮೊದಲ ಕಂತಿನ ಹಣ ಬಿಡುಗಡೆ
ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವಿತರಿಸಲಾದ ಶೂನ್ಯ ಟಿಕೆಟ್ ದರ 687,49,57,753 ರೂ. ಆಗಿದ್ದು, ಈ ಮೊತ್ತದ ಪೈಕಿ ಒಂದು ಪಾಲು ಅಥವಾ ಮೊದಲ ಕಂತನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.
ಶಕ್ತಿ ಯೋಜನೆ ಪ್ರಾರಂಭವಾಗಿ ಸುಮಾರು ಎರಡು ತಿಂಗಳ ನಂತರ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಮೊದಲ ಕಂತಿನ ಹಣವಾಗಿ ಒಟ್ಟು 125.48 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿಗೆ 47.15 ಕೋಟಿ ರೂಪಾಯಿ, ಬಿಎಂಟಿಸಿ 21.85 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 32.57 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 23.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಾಲ್ಕು ನಿಗಮಗಳಿಗೂ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ.
ಕಳೆದ ಜೂನ್ 11ರಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈವರೆಗೆ ನಾಲ್ಕು ನಿಗಮಗಳಲ್ಲಿ 29,32,49,151 ಮಹಿಳೆಯರು ಪ್ರಯಾಣಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನಾಲ್ಕು ನಿಗಮಗಳು ಒಟ್ಟು 687,49,57,753 ರೂ., ಮೌಲ್ಯದ ಶೂನ್ಯ ಟಿಕೆಟ್ ವಿತರಣೆ ಮಾಡಿವೆ.