ಭೂಲೋಕದ ಸಜ್ಜನರ ತವರು ಕಲ್ಯಾಣವಾಗಲಿ, ಜಗತ್ತಿನ ಜನ ಕಲ್ಯಾಣಕ್ಕೆ ಬರುವಂತಾಗಲಿ ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಹೇಳಿದರು.
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆಯಲ್ಲಿ ಭಾನುವಾರ ಸಂಜೆ ನಡೆದ ಜಗತ್ತಿನ ಮೊದಲ ಪ್ರಜಾತಂತ್ರದ ಸಂಸತ್ತು ಅನುಭವ ಮಂಟಪ ಕುರಿತು ಗೋಷ್ಠಿ ಉದ್ಘಾಟಿಸಿ ಮಾತನಾಡಿ,”ನಡೆ-ನುಡಿ ಪರಿಸರದಿಂದ ಮನ -ಮನೆಗಳು ಅನುಭವ ಮಂಟಪವಾಗಲಿ, ಮನುಷ್ಯತ್ವದ ಮಂತ್ರ ನೀಡಿದ ಬಸವಣ್ಣನವರ ಪವಿತ್ರ ಭೂಮಿ ಕಲ್ಯಾಣ ವಿಶ್ವದ ಜನರ ಸೆಳೆಯುವ ಶ್ರದ್ಧಾ ಕೇಂದ್ರವಾಗಲಿ” ಎಂದು ಆಶಿಸಿದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ಆಂತರಿಕವಾಗಿ ಜೀವ ತುಂಬಬೇಕು. ಕಲ್ಯಾಣದಲ್ಲಿ ಅಡಗಿರುವ ತತ್ವಗಳು ಎಲ್ಲರ ಬದುಕಿಗೆ ದಾರಿದೀಪವಾಗಲಿ, ಸತ್ಯಕ್ಕೆ ಸಮೀಪವಾಗಿ ಬದುಕಬೇಕು, ಮಾತಿನಲ್ಲಿ ವ್ಯವಹಾರದಲ್ಲಿ ಇದನ್ನು ಕಾಣಬೇಕು. ಮುಂದಿನ ವರ್ಷಗಳಲ್ಲಿ ಬಸವಕಲ್ಯಾಣ ಸಜ್ಜನರ ತವರಾಗಬೇಕು” ಅಭಿಪ್ರಾಯಪಟ್ಟರು.
ನೇತೃತ್ವ ವಹಿಸಿದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, “ಮ್ಯಾಗ್ನ ಕಾರ್ಟ್ ಒಪ್ಪಂದಕ್ಕಿಂತ ಮೊದಲೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸಿದ್ದಾರೆ. ಅನುಭವ ಮಂಟಪದ ಮೂಲಕ ಹೊರ ಬಂದ ತತ್ವಗಳು ಆಚರಣೆಯಲ್ಲಿ ಬರುವಂತಾಗಬೇಕು” ಎಂದರು.
ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ. ವಿಶ್ರಾಂತ ಜಿಲ್ಲಾನ್ಯಾಯಾಧೀಶ ಯೋಗೇಶ ಕರಗುದರಿ, ಪ್ರಾಚಾರ್ಯರಾದ ಡಾ. ಬಸವರಾಜ ಯವಳೆ, ಸುರೇಶ ಅಕ್ಕಣ್ಣ, ರಾಚಯ್ಯಾ ಸ್ವಾಮಿ, ಗುತ್ತಿಗೆದಾರ ಚನ್ನಬಸವ ಬಳತೆ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಮಾರ್ಥಂಡ ಜೋಶಿ, ಪ್ರಮುಖರಾದ ಪ್ರಭು ವಸ್ಮತೆ, ಶಿವಶಂಕರ ಟೋಕರೆ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಡಾ. ಮಹೇಶ ಪಾಟೀಲ, ಮಲ್ಲಿಕಾರ್ಜುನ ಮೇತ್ರೆ, ನರಸಿಂಗರಾವ ಗದಲೇಗಾಂವ, ಮಲ್ಲಿಕಾರ್ಜುನ ಪಾಟೀಲ, ಶಿವಕುಮಾರ ಖಪಲೆ, ಸಂಗೀತಾ ಮಡಿವಾಳ, ಸುಲೋಚನಾ ಗುದಗೆ ಸೇರಿದಂತೆ ಇತರರಿದ್ದರು. ಸಂತೋಷ ಮಡಿವಾಳ ಸ್ವಾಗತಿಸಿದರು, ಉಪನ್ಯಾಸಕ ಅಂಬ್ರಿಷ್ ಭೀಮಾಣೆ ನಿರೂಪಿಸಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಚುನಾವಣೆ | ಬಿಜೆಪಿ ಮೊದಲ ಪಟ್ಟಿ ಪ್ರಕಟ; 52 ಅಭ್ಯರ್ಥಿಗಳು ಘೋಷಣೆ
ಇಂಡಿಯನ್ ಐಡಲ್ ಫೇಮ್ ಗೆ ಆಯ್ಕೆಯಾದ ಬೀದರ್‌ನ ಸಂಗೀತ ಕಲಾವಿದೆ ಶಿವಾನಿ ಶಿವದಾಸ ಸ್ವಾಮಿ ಅವರ ಕಂಠದಿಂದ ಮೂಡಿ ಬಂದ ವಚನಗಳು ಸೇರಿದ ಜನರ ಮನ ತಣಿಸಿದವು.