ಕರ್ನಾಟಕ ನಾನಾ ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.
ಅದರಂತೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ. ಶರತ್ ಅನಂತಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
ಪ್ರೊ. ಶರತ್ ಅನಂತಮೂರ್ತಿಯವರು ಹೈದ್ರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕ್ಸ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಿವಂಗತ ಯು.ಆರ್.ಅನಂತಮೂರ್ತಿ ಅವರ ಮಗನಾಗಿರುವ ಶರತ್ ಅನಂತಮೂರ್ತಿ, ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಿ ಮುಂದುವರೆಯಲಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಬಿ ಪಿ ವೀರಭದ್ರಪ್ಪ ಅವರು ಕಳೆದ 2023ರ ಆಗಸ್ಟ್‌ನಲ್ಲಿ ನಿವೃತ್ತಿ ಹೊಂದಿದ್ದರು. ತೆರವಾದ ಸ್ಥಾನಕ್ಕೆ ಶರತ್ ಅನಂತಮೂರ್ತಿಯವರು ನೇಮಕಗೊಂಡಿದ್ದಾರೆ.
ಉಳಿದಂತೆ ಮಂಗಳೂರು, ಬಾಗಲಕೋಟೆ ತೋಟಗಾರಿಕಾ ವಿವಿ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಳಗಾವಿ ರಾಣಿ ಚೆನ್ನಮ್ಮ ವಿವಿಗೂ ಕೂಡ ಹೊಸ ಕುಲಪತಿಗಳನ್ನು ನೇಮಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ಪಿ.ಎಲ್.ಧರ್ಮ ಅವರನ್ನು ನೇಮಕ ಮಾಡಲಾಗಿದೆ. ಧರ್ಮ ಅವರು, ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಡಾ. ವಿಷ್ಣುವರ್ಧನ್ ಅವರನ್ನು ನೇಮಿಸಲಾಗಿದೆ. ಡಾ.ವಿಷ್ಣುವರ್ಧನ್ ಅವರು ಮೈಸೂರು ತೋಟಗಾರಿಕಾ ಕಾಲೇಜಿನ ಡೀನ್ ಆಗಿದ್ದರು.
ಇದನ್ನು ಓದಿದ್ದೀರಾ? ಮಂಡ್ಯ | ದ್ವಿಚಕ್ರ ವಾಹನಕ್ಕೆ ಅಡ್ಡ ಬಂದಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಸವಾರ: ಎಫ್ಐಆರ್ ದಾಖಲು
ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಡಾ.ಮೇತ್ರಿ ನೇಮಕ ಮಾಡಲಾಗಿದೆ. ಡಾ.ಕೆ.ಎಂ.ಮೇತ್ರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ಸಿ.ಎಂ.ತ್ಯಾಗರಾಜ್ ನೇಮಿಸಲಾಗಿದೆ. ತ್ಯಾಗರಾಜ್ ಅವರು ರಾಣಿ ಚೆನ್ನಮ್ಮ ವಿವಿಯ ವಾಣಿಜ್ಯ ವಿಭಾಗದ ಡೀನ್ ಆಗಿದ್ದರು.
