ಶಿವಮೊಗ್ಗ ಜಿಲ್ಲೆಯ ಕುರುವಳ್ಳಿ – ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 56 ಕೋಟಿ ರೂ ವೆಚ್ಚದ ತುಂಗಾ ಸೇತುವೆಯ ಬೈಪಾಸ್ ರಸ್ತೆಯ ತಡೆಗೋಡೆಗಳು ಕುಸಿದು ಬಿದ್ದಿದೆ. ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿದೆ. ಗುಡ್ಡದ ಮೇಲಿದ್ದ ಮಾವಿನ ಮರ ಉರುಳಿ ಬಿದ್ದಿದೆ.
ಇದೇ ಬೈಪಾಸ್‌ನಲ್ಲಿ ಸೋಮವಾರ ಭೂಕುಸಿತ ಉಂಟಾಗಿತ್ತು. ಮಂಗಳವಾರ ಹೆದ್ದಾರಿಯ ತಡೆಗೋಡೆ ಕುಸಿದಿತ್ತು. ಮಣ್ಣು ಪೂರ್ತಿಯಾಗಿ ಬೈಪಾಸ್ ರಸ್ತೆಗೆ ಬಂದಿತ್ತು. ಈ ಮೊದಲು ಭೂ ಕುಸಿತ ಸಂಭವಿಸಿದ ಸ್ಥಳದ ಎದುರು ಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ಕಾಮಗಾರಿ ಕುರಿತು ಪ್ರಶ್ನೆ ಏಳುವಂತೆ ಮಾಡಿದೆ.
56 ಕೋಟಿ ವೆಚ್ಚದಲ್ಲಿ ಹೊಸ ತುಂಗಾ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಿಸಲಾಗಿತ್ತು. ಉದ್ಘಾಟನೆಗೊಂಡು ಕೆಲವೇ ತಿಂಗಳ ಒಳಗಾಗಿ ತಡೆಗೋಡೆ ಬಿದ್ದು ಮಣ್ಣು ಕುಸಿಯುತ್ತಿದೆ. ಈಗಾಗಲೇ ವಾಹನ ಓಡಾಟವನ್ನು ನಿರ್ಬಂಧಿಸಲಾಗಿದ್ದು ಸ್ಥಳದಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂ ಸಬ್ ಇನ್ಸ್‌ಪೆಕ್ಟರ್ ಶಿವನಗೌಡ ಇತರ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಬ್ಯಾರಿಕೇಡ್ ಹಾಕಿ ಮುನ್ನೆಚರಿಕಾ ಕ್ರಮ ಕೈಗೊಂಡಿದ್ದಾರೆ.
ಒಂದೇ ಮಳೆಗೆ 56₹ ಕೋಟಿ ವೆಚ್ಚದ ತಡೆ ಗೋಡೆ ಕಾಮಗಾರಿ ಈ ಪರಿಸ್ಥಿತಿ ಬಂದಿರುವುದು ಅವೈಜ್ಞಾನಿಕ ಕಾಮಗಾರಿ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ದೂರುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ತಡೆಗೋಡೆ ಕುಸಿದಿದ್ದು, ವಾಹನಗಳ ಓಡಾಟ ಕಡಿಮೆ ಇದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ.
56₹ ಕೋಟಿ ವೆಚ್ಚ ದಲ್ಲಿ ಹೊಸ ತುಂಗಾ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಿಸಲಾಗಿತ್ತು. ತಡೆಗೋಡೆ ಕುಸಿದಿರುವುದರಿಂದ 56₹ ಕೋಟಿ ವೆಚ್ಚದಲ್ಲಿ ಮಾಡಿದ ಕಾಮಗಾರಿ ನೀರಲ್ಲಿ ಹೋಮ ಮಾಡಿದಂತೆ ಆಗಿದೆ ಎಂದು ಸ್ಥಳೀಯರು ಆಕ್ರೋಶಪಡಿಸುತ್ತಿದ್ದಾರೆ.
ಈ ಸಂಬಂಧ ನಮ್ಮ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ, “ಟೆಂಡರ್ ಕರೆದಿದ್ದು 42₹ ಕೋಟಿ ವೆಚ್ಚಕ್ಕೆ ಹಾಗೂ ಸರಿ ಸುಮಾರು ಬೇರೆ ಸಿಬ್ಬಂದಿಗಳ ಖರ್ಚು ವೆಚ್ಚ ಇನ್ನಿತರೆ ಎಲ್ಲ ಸೇರಿ ಇದು 56₹ ಕೋಟಿ ವೆಚ್ಚ ಅಂದಾಜು ಆಗಿದೆ. ಹಾಗೆಯೇ ಈ ಕಾಮಗಾರಿಯ ವೇಳೆ ಇದು ಜಂಬಿಟ್ಟಿಗೆ ಮಣ್ಣು ಹೊಂದಿದ್ದ ಪ್ರದೇಶವಿತ್ತು. ಹೀಗಾಗಿ, ಗುಡ್ಡದ ಮಣ್ಣು ಕುಸಿಯುವುದಿಲ್ಲ, ಗಟ್ಟಿಯಾಗಿ ಇರಲಿದೆ ಎಂದು ಭಾವಿಸಿ ಕಾಮಗಾರಿ ಮಾಡಿದ್ದೇವೆ. ಆದರೆ ವಿಪರೀತ ಮಳೆಯ ಕಾರಣ ಹವಾಮಾನ ವೈಪರೀತ್ಯದಿಂದ ಕೆಲವೊಮ್ಮೆ ನಾವು ಕೂಡ ಏನು ಮಾಡುವುದಕ್ಕೆ ಆಗುವುದಿಲ್ಲ. ಭಾರೀ ಮಳೆಯಿಂದ ಈ ರೀತಿ ಆಗಿದೆ. ಇದು ನಮ್ಮ ಊಹೆಗೂ ಮೀರಿದ ಘಟನೆ” ಎಂದು ತಿಳಿಸಿದರು.
“ಈ ಕಾಮಗಾರಿಯನ್ನು ನಿರ್ವಹಿಸುವ ಜವಾಬ್ದಾರಿ ಗುತ್ತಿಗೆದಾರರದ್ದು. ಹಾಗಾಗಿ ಇದನ್ನು ಸರಿಪಡಿಸುವ ಹೊಣೆ ಕೂಡ ಅವರದ್ದೇ ಆಗಿರುತ್ತದೆ. ಅದರ ಸಂಪೂರ್ಣ ಖರ್ಚು-ವೆಚ್ಚ ಅವರೇ ನೋಡಿಕೊಳ್ಳಬೇಕಿದೆ” ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಿಬ್ಬಂದಿಯೊಬ್ಬರು ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಇಲ್ಲಿನ ಕಾಮಗಾರಿಯ ವೇಳೆ ಎರಡು ಮರಗಳು ಇದ್ದವು. ಒಂದನ್ನು ತೆರವು ಮಾಡಿದ್ದೆವು ಮತ್ತೊಂದು ಮರ ತೆಗೆದಿರಲಿಲ್ಲ. ಇದಕ್ಕೆ ಅರಣ್ಯ ಇಲಾಖೆ ಕಾರಣ. ಕಾಮಗಾರಿಯ ವೇಳೆ ಮರಗಳು ಕಡಿಯಬಾರದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಮರದ ಬೇರು ಸುತ್ತಲೂ ಪಸರಿಸಕೊಂಡು ತಡೆಗೋಡೆ ಸಡಿಲವಾಗಿ ಈ ರೀತಿ ಅವಘಡ ಸಂಭವಿಸಿದೆ” ಎಂದರು.
56₹ ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆಯಾಗಿ ಕೆಲವೇ ತಿಂಗಳುಗಳಲ್ಲಿ ಈ ರೀತಿ ಆಗಿರುವುದಕ್ಕೆ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಮಾಡಿರುವುದೇ ಕಾರಣ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರತೊಡಗಿದೆ. ಜನರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ.

Good news