ಸಂವಿಧಾನದ ನಾಲ್ಕನೇ ಅಂಗವೆಂದು ಪತ್ರಿಕೋದ್ಯಮವನ್ನು ಗುರುತಿಸುತ್ತೇವೆ. ಜನಪ್ರತಿನಿಧಿಗಳು ಕೊಡುವ ಹೇಳಿಕೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಜನರ ಬಾಯಲ್ಲಿ ಬಂದರೆ ಸಾಕು ಸಂತೋಷವಾಗುತ್ತದೆ. ಅಂತೆಯೇ, ಒಬ್ಬನ ಚಾರಿತ್ರ್ಯಹರಣ ಮಾಡಲು ಪತ್ರಿಕೆಯೊಂದು ಸಾಕು ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪತ್ರಿಕೋದ್ಯಮ ಬಹಳ ದೊಡ್ಡದಾಗಿ ಬೆಳೆದಿದೆ. ಹಲವು ಪತ್ರಿಕೆಗಳು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಪತ್ರಿಕಾರಂಗ ಲಾಭ ಮಾಡುವ ಹುದ್ದೆಯಲ್ಲ. ಇಲ್ಲಿ ಅಡ್ಡದಾರಿ ಹಿಡಿದು ಕೆಲಸ ಮಾಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.
“ಭ್ರಷ್ಟಾಚಾರ ಮಾಡಿದವರ ಬಗ್ಗೆ ಸುದ್ದಿ ಮಾಡುವುದಕ್ಕೂ, ಮಾಡದೇ ಇರುವವನ ಬಗ್ಗೆ ಸುದ್ದಿ ಮಾಡುವುದಕ್ಕೂ ವ್ಯತ್ಯಾಸವಿದೆ. ಪತ್ರಿಕೋದ್ಯಮದವರ ಬಳಿ ಇರುವ ಆಯುಧ ರಾಜಕೀಯದವರ ಬಳಿ ಇಲ್ಲ. ಒಬ್ಬನ ಚಾರಿತ್ರ್ಯಹರಣ ಮಾಡಲು ಪತ್ರಿಕೆಯೊಂದು ಸಾಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್, “ಇತ್ತೀಚೆಗೆ ಪತ್ರಿಕೆಗಳನ್ನು ಓದುವುದೇ ಬೇಡ ಎನ್ನಿಸುತ್ತದೆ, ಮುಖಪುಟದಲ್ಲಿ ಸುದ್ದಿಗಿಂತ ಜಾಹೀರಾತುಗಳೇ ಹೆಚ್ಚಾಗಿರುತ್ತವೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಮತ್ತೊಬ್ಬರಿಗೆ ಪಾಠ ಮಾಡುವಂತೆ ಇರಬೇಕು. ಮಾಧ್ಯಮಗಳು ಸಮಾಜವನ್ನು ಸರಿಪಡಿಸುವ ಕೆಲಸ ಮಾಡಬೇಕು. ರಾಜಕೀಯದೊಂದಿಗೆ ಸಂಬಂಧ ಇಟ್ಟುಕೊಳ್ಳಬಾರದು” ಎಂದು ಹೇಳಿದರು.