ಅಕ್ರಮ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ರೆಸಾರ್ಟ್ ಒಂದರ ಮೇಲೆ ಕಳೆದ ರಾತ್ರಿ ಪೊಲೀಸರು ದಿಢೀರ್ ದಾಳಿ ನಡೆಸಿದ ವೇಳೆ ಮದ್ಯದ ಬಾಟಲಿಗಳು, ಪ್ರಾಣಿಗಳ ಕೊಂಬು, ಬಂದೂಕು ಪತ್ತೆಯಾಗಿವೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ವಿಹಂಗಮನ ರೆಸಾರ್ಟ್ ಮೇಲೆ ಶನಿವಾರ ರಾತ್ರಿ ಪೊಲೀಸರು ಹಠಾತ್ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 1 ಲಕ್ಷ ರೂ. ಮೌಲ್ಯದ ಒಂದು ಡಬಲ್ ಬ್ಯಾರಲ್ ಬಂದೂಕು, ಅಂದಾಜು 25 ಸಾವಿರ ರೂ. ಮೌಲ್ಯದ 310 ಜೀವಂತ ಗುಂಡುಗಳು, ಒಂದು ಕತ್ತಿ, ಒಂದು ಚಾಕು, ಮೂರು ಕಾಡುಕೋಣದ ಕೊಂಬಿನ ಟ್ರೋಫಿ, ಆರು ಜಿಂಕೆ ಕೊಂಬಿನ ಟ್ರೋಫಿ, ಒಂದು ಸಿಸಿಟಿವಿ ಡಿವಿಆರ್, 7,650 ರೂ. ಮೌಲ್ಯದ 51 ಬಿಯರ್ ಟಿನ್‌ಗಳು, 1 ಲಕ್ಷ ರೂ. ಮೌಲ್ಯದ ಮದ್ಯ ತುಂಬಿದ ಬಾಟಲಿಗಳು, 750 ರೂ. ಮೌಲ್ಯದ ಬ್ರೀಸರ್ ಬಾಟಲ್ ಹಾಗೂ 3 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಕಾಲ್ನಡಿಗೆ ಜಾಥಾ
ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ, ತೀರ್ಥಹಳ್ಳಿ ಇನ್ಸ್‌ಪೆಕ್ಟರ್ ಅಶ್ವತ್ಥ ಗೌಡ ನೇತೃತ್ವದಲ್ಲಿ ದಾಳಿಯಾಗಿದೆ. ತೀರ್ಥಹಳ್ಳಿ ಸಬ್ ಇನ್ಸ್‌ಪೆಕ್ಟರ್ ಸಾಗರ ಅತ್ತರವಾಲ, ಮಾಳೂರು ಸಬ್ ಇನ್ಸ್‌ಪೆಕ್ಟರ್ ನವೀನ್ ಮಠಪತಿ, ಆಗುಂಬೆ ಸಬ್ ಇನ್ಸ್‌ಪೆಕ್ಟರ್ ರಂಗನಾಥ ಅಂತರಗಟ್ಟಿ, ರಿಪ್ಪನ್‌ಪೇಟೆ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಹಾಗೂ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಇದ್ದರು.