ತನಿಖೆಯಲ್ಲಿರುವ ಅಪರಾಧ ಪ್ರಕರಣಗಳ ವಿಮರ್ಶೆ ನಡೆಸಿ ಕಾಲಮಿತಿಯೊಳಗೆ ಸದರಿ ಪ್ರಕರಣಗಳ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಬೇಕು ಎಂದು ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಜಿ ಕೆ ಸಂಬಂಧಪಟ್ಟ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ನಡೆದ ಎಲ್ಲ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಅಪರಾಧ ವಿಮರ್ಶನಾ ಸಭೆಯಲ್ಲಿ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಯಿತು.
“ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ, ಗಾಂಜಾ ಮಾರಾಟ ಮತ್ತು ಸಾಗಾಣಿಕೆ, ಸಂಗ್ರಹಣೆ, ಬೆಳೆಯುವ ಮತ್ತು ಸೇವನೆಯ ಬಗ್ಗೆ ತಳಮಟ್ಟದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಎನ್‌ಡಿಪಿಎಸ್ ಕಾಯ್ದೆಯಡಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.
“ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಹಗಲು ಗಸ್ತು ಮತ್ತು ರಾತ್ರಿ ಗಸ್ತನ್ನು ಜಾರಿ ಮಾಡಬೇಕು. ಸಿಬ್ಬಂದಿಗಳನ್ನು ಗಸ್ತಿಗೆ ನೇಮಕ ಮಾಡುವ ಸಂದರ್ಭದಲ್ಲಿ ಆಯಾ ಬೀಟ್ ವ್ಯಾಪ್ತಿಯಲ್ಲಿನ ಎಂಒಬಿ, ರೌಡಿ ಹಾಗೂ ಪೂರ್ವ ಸಜಾ ಆಸಾಮಿಗಳ ಚಟುವಟಿಕೆಗಳ ಬಗ್ಗೆ ಪರಿಶೀಲಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡುವುದು ಮತ್ತು ಗಸ್ತು ಮಾಡುವಾಗ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಮಾರ್ಟ್ ಇ-ಬೀಟ್, ಎಂಸಿಸಿಟಿಎನ್‌ಎಸ್ ತಂತ್ರಾಂಶಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು” ಎಂದು ಸೂಚನೆ ನೀಡಿದರು.
“ಮಾದಕ ವಸ್ತು ಗಾಂಜಾ ಸೇವನೆಯ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಮಾದಕ ದ್ರವ್ಯ ಸೇವನೆ ದೃಢಪಟ್ಟವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ತಳಮಟ್ಟದ ಮಾಹಿತಿಯನ್ನು ಕಲೆಹಾಕಿ ದಾಳಿ ನಡೆಸಿ, ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ತಮ್ಮ ಅದೀನ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಂಡ ವಾಹನಗಳು ಮತ್ತು ವಾರಸುದಾರರಿಲ್ಲದ ಮಾಲಿನ ವಿಲೇವಾರಿ ಬಗ್ಗೆ ಸೂಕ್ತ ಗಮನಹರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ಸೂಚನಾ ಫಲಕಗಳು, ರಂಬಲ್ ಸ್ಟ್ರಿಪ್ಸ್, ಕ್ಯಾಟ್ ಐಸ್, ರೋಡ್ ಹಂಪ್ಸ್‌ಗಳನ್ನು ಅಳವಡಿಸುವ ಮೂಲಕ ಅಪಘಾತ ತಡೆಗಟ್ಟಲು ಕ್ರಮಕೈಗೊಳ್ಳಬೇಕು” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಒಳಮೀಸಲಾತಿ ಜಾರಿಗೆ ಆಗ್ರಹ; ಮುಖ್ಯಮಂತ್ರಿಗೆ ಮನವಿ
ಈ ಸಂದರ್ಭದಲ್ಲಿ 2024ನೇ ಸಾಲಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು, ಪೋಲಿಸ್ ನಿರೀಕ್ಷಕರು ಮತ್ತು ಪೊಲೀಸ್ ಉಪನಿರೀಕ್ಷಕರು ಸೇರಿ ಒಟ್ಟು 40 ಮಂದಿ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಈ ಸಭೆಯಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಡಿಎಆರ್ ಪೊಲೀಸ್ ಉಪಾದೀಕ್ಷಕ ಕೃಷ್ಣಮೂರ್ತಿ ಟಿ ಪಿ, ಶಿವಮೊಗ್ಗ-ಬಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಸುರೇಶ್ ಎಂ, ಸಾಗರ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಟಿ ನಾಯಕ್, ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಎಲ್ಲ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು ಇದ್ದರು.