ಸಮಾಜದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಎನ್ನದೆ ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ಹಲ್ಲೆ, ಕಿರುಕುಳಗಳ ಮೇಲೆ ಸಮೂಹ ಮಾಧ್ಯಮ ಸಾಕಷ್ಟು ಪ್ರಭಾವ ಬೀರಿದೆ. ಇಂದಿನ ಸಾಂಸ್ಕೃತಿಕ ಅವನತಿಯು ಯುವ ಪೀಳಿಗೆಯ ಮನಸ್ಥಿತಿಯನ್ನು ವಿಕೃತಗೊಳಿಸುತ್ತಿದೆ ಎಂದು ಸೆಂಟರ್ ಫಾರ್ ಪ್ರೊಟೆಕ್ಟಿಂಗ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ (ಸಿಪಿಡಿಆರ್‌ಎಸ್)ನ ಶಿವಮೊಗ್ಗ ಜಿಲ್ಲಾ ಸಂಚಾಲಕ ಸುಬ್ಬರಾಜು ಕಳವಳ ವ್ಯಕ್ತಪಡಿಸಿದರು.
ನವುಲೆ ಗ್ರಾಮದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ವತಿಯಿಂದ ನ್ಯಾಷನಲ್ ಗರ್ಲ್ಸ್ ಹೈಸ್ಕೂಲ್ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಪ್ರಸ್ತುತ ಸಮಾಜ ಆಧುನಿಕತೆ ಹೆಸರಿನಲ್ಲಿ ಅವನತಿಯತ್ತ ಸಾಗುತ್ತಿದೆ. ಸಮೂಹ ಮಾಧ್ಯಮಗಳು ಒಳಿತನ್ನು ಮಾಡುವುದಕ್ಕಿಂತ ಹೆಚ್ಚಾಗಿ ಯುವ ಜನತೆಯ ಮೇಲೆ ಕೆಡುಕಿನ ಪ್ರಭಾವವನ್ನೇ ಬೀರುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಅಪ್ಲಿಕೇಶನ್ ಮತ್ತು ಚಾಟ್ ಮಾಡುವುದರಿಂದ ಸಾಧ್ಯವಾದಷ್ಟು ದೂರವಿರಿ” ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
“ನೇತಾಜಿ ಅಂದು ಬ್ರಿಟಿಷರನ್ನ ಭಾರತದಿಂದ ಹೊರಹಕಾಲು ನಿರಂತರ ಹೋರಾಟ ಮಾಡುವ ಮೂಲಕ ಸಂಘಟನೆ ಕಟ್ಟಿದ್ದರು. ಅವರ ಹೋರಾಟದ ಸ್ಫೂರ್ತಿಯನ್ನು ಮೈಗೂಡಿಸಿಕೊಂಡು, ನಿರುದ್ಯೋಗ, ಬೆಲೆ ಏರಿಕೆ, ಬಡತನ, ದುಬಾರಿ ಶಿಕ್ಷಣ, ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆಗಳ ವಿರುದ್ಧ ಒಗ್ಗಟಿನಿಂದ ಹೋರಾಟ ಮಾಡಬೇಕು” ಎಂದರು

“ಎಐಎಸ್‌ಇಸಿಯ ರಾಜ್ಯ ಸೆಕ್ರೆಟರಿಯೇಟ್ ಮೆಂಬರ್ ನಾಗರತ್ನ ಎಸ್ ಜಿ ಮಾತನಾಡಿ, “ದೇಶಕ್ಕೆ ಸ್ವತಂತ್ರ ಬಂದು ಇಷ್ಟು ವರ್ಷಗಳು ಕಳೆದರೂ ಮಹಿಳೆಯರ, ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಶೋಷಣೆಗೆ ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣ ಮಾಧ್ಯಮಗಳಲ್ಲಿ ಅಶ್ಲೀಲ, ಕೀಳು ಮಟ್ಟದ ಸಿನಿಮಾ ಮತ್ತು ಕಾರ್ಯಕ್ರಮಗಳು ವ್ಯಾಪಕವಾಗಿ ಪ್ರಸಾರವಾಗುತ್ತಿರುವುದೇ ಆಗಿದೆ. ಇದರಿಂದ ಸಮಾಜದಲ್ಲಿ ಕೀಳು ಸಂಸ್ಕೃತಿ ಹರಡಲು ಸರ್ಕಾರವೇ ಹೊಣೆಯಾಗಿದೆ. ಪರ್ಯಾಯವಾಗಿ ಒಳ್ಳೆಯ ವಿಚಾರ ಪ್ರಸ್ತುತ ಪಡಿಸುವ ಕಾರ್ಯಕ್ರಮಗಳನ್ನು ಮಾಡಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಕನ್ನಡಪರ ಹೋರಾಟಗಾರರ ವಿರುದ್ಧದ ಎಫ್‌ಐಆರ್ ವಾಪಸ್; ಮುಖ್ಯಮಂತ್ರಿಗೆ ಕರವೇ ಧನ್ಯವಾದ
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
