ಹಲವಾರು ಗ್ರಾಮಗಳಲ್ಲಿ ಸುಮಾರು 50-60 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಸುಮಾರು 10 ಸಾವಿರ ಕುಟುಂಬಗಳಿಗೆ ಸಕ್ಕರೆ ಕಾರ್ಖಾನೆ ಮಾಲೀಕನೆಂದು ಬಂದು ತೊಂದರೆ ಕೊಡುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರ, ನಿವಾಸಿಗಳ ಭೂ ಹಕ್ಕು ಹೋರಾಟ ಸಮಿತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ತಾಲೂಕಿನಲ್ಲಿ ಸುಮಾರು 13ರಿಂದ 14 ಗ್ರಾಮಗಳಾದ ಮಲವಗೊಪ್ಪ, ತೊಪ್ಪಿನಘಟ್ಟ, ಹರಿಗೆ, ನಿದಿಗೆ, ಸದಾಶಿವಪುರ(ಹಕ್ಕಿಪಿಕ್ಕಿ ಕ್ಯಾಂಪ್), ಚಿಕ್ಕಮರಡಿ, ಹರಪ್ಪನಹಳ್ಳಿ ಕ್ಯಾಂಪ್, ಹಾರೋಬೆನವಳ್ಳಿ ತಾಂಡ, ತರಗನಹಳ್ಳಿ, ಪಿಳ್ಳಂಗಿರಿ, ಬಿ ಬೇರನಹಳ್ಳಿ, ಹಾರೋಬೆನವಳ್ಳಿ, ಹೊಸಮನೆ ತಾಂಡಾ, ಯರಗನಾಳ್ ಮತ್ತು ಹಾತಿಕಟ್ಟೆ ಸೇರಿದಂತೆ ಇನ್ನು ಇತರೆ ಒಟ್ಟು 13ರಿಂದ 14 ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸುಮಾರು 40ರಿಂದ 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಮನೆಗಳನ್ನು ಕಟ್ಟಿಕೊಂಡಿದ್ದಾರೆ” ಎಂದರು.
“ಜಮೀನುಗಳಿಗೆ ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿಗಳನ್ನು ಸಲ್ಲಿಸಿ ಮನೆಗಳಿಗೆ 94 ಸಿಸಿ 94ಡಿ ಅರ್ಜಿಗಳನ್ನು ಸಲ್ಲಿಸಿದ್ದು, ಕೆಲವು ಬಗರ್ ಹುಕುಂ ಸಾಗುವಳಿದಾರರಿಗೆ ಮೇಲ್ಕಂಡ ಅರ್ಜಿ ಸಲ್ಲಿಸಿದಂತೆ ಹಾಗೂ ನ್ಯಾಯಾಲಯದ ಆದೇಶದಂತೆ ಹಕ್ಕುಪತ್ರಗಳನ್ನೂ ಕೂಡ ನೀಡಿದ್ದು, ಕೆಲವು ರೈತರಿಗೆ ಹಕ್ಕುಪತ್ರ ಕೊಡುವುದು ಬಾಕಿ ಇರುತ್ತದೆ. ಹಾಗೂ ಮೇಲ್ಕಂಡ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಸರ್ಕಾರದಿಂದ ಮೂಲ ಸೌಕರ್ಯ ನೀಡಿದ್ದು, ಎಲ್ಲ ಹಕ್ಕನ್ನು ನೀಡಿದ್ದಾರೆ” ಎಂದು ಹೇಳಿದರು.
“ಸಾಗುವಳಿ ಮತ್ತು ಮನೆಗಳನ್ನು ಕಟ್ಟಿಕೊಂಡ ಜಮೀನು ಈ ಹಿಂದೆ ಸುಮಾರು 1955ರಲ್ಲಿ ಸಕ್ಕರೆ ಕಾರ್ಖಾನೆ ನಡೆಸಲು ಸುಮಾರು 3,685 ಎಕರೆಯ ಜಮೀನನ್ನು ಸರ್ಕಾರ ನೀಡಿದ್ದು, ಕೆಲವು ವರ್ಷಗಳಾದ ನಂತರ ಕಾರ್ಖಾನೆ ಸ್ಥಗಿತಗೊಂಡಿರುತ್ತದೆ. ಆದ್ದರಿಂದ ಕಾರ್ಖಾನೆಗೆ ನೀಡಿದ್ದ ಜಮೀನು ಹೆಚ್ಚುವರಿ (ಸೀಲಿಂಗ್ ಲಿಮಿಟ್) ಜಮೀನನ್ನು ಸರ್ಕಾರ 79 ಬಿ ಅಡಿಯಲ್ಲಿ ಅಧಿಸೂಚನೆಗೊಳಿಸಿ ಲೆಟರ್ ನಂ ಎಲ್‌ಆರ್‌ಎಫ್‌ಡಿ 657/74-75 ಮೇ 10, 1979 ವಿಶೇಷ ತಹಶೀಲ್ದಾರ್ ಅವರ ಪತ್ರದಂತೆ ನಂಬರ್ ಎಲ್.ಆರ್.ಎಂ ಸಿ.ಆರ್-79-80 ಸರ್ಕಾರ ಅಧಿಸೂಚನೆ ಹೊರಡಿಸಿದಂತೆ ಜೂನ್ 17, 1979ರಲ್ಲಿ ವಿಶೇಷ ಜಿಲ್ಲಾಧಿಕಾರಿ ಮೇಲ್ಕಂಡ ಸಕ್ಕರೆ ಕಾರ್ಖಾನೆ ನೀಡಿದ ಎಲ್ಲ ಜಮೀನನ್ನು ಹಿಂಪಪಡೆದು ಸುಮಾರು 50 ಎಕರೆ ಕಾರ್ಖಾನೆಗೆ ಒಳಪಟ್ಟು ಇನ್ನುಳಿದ ಹೆಚ್ಚುವರಿ ಎಲ್ಲ ಜಮೀನು ಸರ್ಕಾರದ ವಶಕ್ಕೆ ಪಡೆಯುವಂತೆ ತಹಶೀಲ್ದಾರ್ ಅವರಿಗೆ ಆದೇಶ ಮಾಡಿದ್ದಾರೆ” ಎಂದು ಹೇಳಿದರು.
“ಸಕ್ಕರೆ ಕಾರ್ಖಾನೆಯ ನಕಲಿ ಮಾಲೀಕರ ಮಾಲೀಕತ್ವದ ಬಗ್ಗೆ ತನಿಖೆ ಮಾಡಿಸಬೇಕು. ರೈತರು ಮತ್ತು ನಿವಾಸಿಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಉಳಿಸಲು 79 ಬಿ ಅಡಿಯಲ್ಲಿ ಸರ್ಕಾರದ ವತಿಯಿಂದ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟು ಸರ್ಕಾರದ ಮತ್ತು ರೈತರ ಆಸ್ತಿಯನ್ನು ಉಳಿಸಲು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು. ಮೇಲ್ಕಂಡ ಎಲ್ಲ ಗ್ರಾಮಗಳಲ್ಲಿ ಜಮೀನು ಮತ್ತು ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
“ಜಮೀನಿನಲ್ಲಿ ಮನೆ ಮತ್ತು ಜಮೀನು ವ್ಯವಸಾಯ ಮಾಡಿಕೊಂಡು ಬಂದ ರೈತರಿಗೆ ಮತ್ತು ನಿವಾಸಿಗಳಿಗೆ ಸಾಗುವಳಿ ಹಾಗೂ ಹಕ್ಕುಪತ್ರ ನೀಡಬೇಕು. 94 ಡಿ ಅಡಿಯಲ್ಲಿ 2ಇ ನಕ್ಷೆ ತಯಾರಿಸಿದ್ದು, ಈವರೆಗೆ ಯಾವುದೇ ಹಕ್ಕುಪತ್ರ ನೀಡಿರುವುದಿಲ್ಲ. ಇದನ್ನು ತಕ್ಷಣ ಹಕ್ಕುಪತ್ರ ನೀಡಬೇಕು. ಈಗಾಗಲೇ ನ್ಯಾಯಾಲಯದ ಆದೇಶದಂತೆ ಕೆಲವು ಜಮೀನುಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದು, ಇನ್ನು ಕೆಲವು ರೈತರಿಗೆ ಹಕ್ಕುಪತ್ರ ಸಾಗುವಳಿ ನೀಡುವುದು ಬಾಕಿ ಇದೆ. ಅಂತಹ ಜಮೀನುಗಳಿಗೆ ತಕ್ಷಣ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದರು.
“ನಕಲಿ ಮಾಲೀಕ ಮತ್ತು ಗೂಂಡಾಗಳ ಸಹಾಯದಿಂದ ನೂರಾರು ಕಾರ್ಮಿಕರನ್ನು ಒಕ್ಕಲೆಬ್ಬಿಸಿ ಅವರ ಮನೆಗಳನ್ನು ಡೆಮಾಲಿಶ್ ಮಾಡಿದ್ದು, ನಕಲಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಅಲ್ಲಿಯೇ ಮನೆಗಳನ್ನು ಕಟ್ಟಿಸಿಕೊಡಬೇಕು. ಕಾರ್ಖಾನೆ ಕಾರ್ಮಿಕರಿಗೆ ಬರಬೇಕಾಗಿರುವ ಬಾಕಿ ಹಣ ಕೊಡದೇ ಅನ್ಯಾಯವೆಸಗಿದ್ದು, ವೇತನ ಪಡೆಯದೆ ಇರುವ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೂ ವೇತನ ನೀಡಿ ನ್ಯಾಯ ದೊರಕಿಸಬೇಕು. ಎಲ್ಲ ಕಾರ್ಮಿಕರಿಗೆ ಸರ್ಕಾರದಿಂದ ನಿವೇಶನಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಬೇಕು. ಸರ್ಕಾರ ವಾಪಾಸ್ ಪಡೆದ ಜಮೀನನಲ್ಲಿ ಅಕ್ರಮವಾಗಿ ಪರಭಾರೆ ಮಾಡುವುದು ಕಂಡುಬಂದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಂಡು ಪರಭಾರೆ ಅಥವಾ ಯಾವುದೇ ನೋಂದಣಿಯಾಗದಂತೆ ತಡೆಯಬೇಕು” ಎಂದು ಒತ್ತಾಯಿಸಿದರು.
“ಕಾರ್ಖಾನೆ ನಕಲಿ ಮಾಲೀಕರು ಗೂಂಡಾಗಳ ಮುಖಾಂತರ ನಿವಾಸಿಗಳಿಗೆ, ರೈತರಿಗೆ ಮತ್ತು ಕಾರ್ಮಿಕರಿಗೆ ಹೆದರಿಕೆ-ಬೆದರಿಕೆ ಒಡ್ಡುತ್ತಿದ್ದು, ಮೇಲ್ಕಂಡ ನಮ್ಮಗಳಿಗೆ ಭಯ ಹುಟ್ಟಿಸುತ್ತಿದ್ದಾರೆ. ಈ ಮೇಲ್ಕಂಡ ನಕಲಿ ಮಾಲೀಕರಿಗೆ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಾ.1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ; ಸಕಲ ಸಿದ್ದತೆಯಿಂದ ಸಜ್ಜು
“ಅಧಿಕಾರಿಗಳು ಅಥವಾ ಸರ್ಕಾರ ಪ್ರತಿಭಟನಾ ಸ್ಥಳಕ್ಕಾಗಮಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಸಾವಿರಾರು ಕುಟುಂಬದವರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪುರ್ಯ ನಾಯ್ಕ್, ರಾಜ್ಯ ರೈತ ಸಂಘ ಹಸಿರು ಸೇನೆಯ ಕೆ ಟಿ ಗಂಗಾಧರ್, ವಿಜಯ್ ಕುಮಾರ್, ಭೋಜ ನಾಯ್ಕ್ ವೆಂಕಟೇಶ್ ನಾಯ್ಕ್, ಅಧ್ಯಕ್ಷ ಎಂ ಬಿ ಕೃಷ್ಣಪ್ಪ, ಉಪಾಧ್ಯಕ್ಷ ಎನ್ ಟಿ ಕುಮಾರ್, ನಿಧಿಗೆ ಮಹಾದೇವ್, ಸಿದ್ದರಗುಡಿ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.
